ಕಡಬ, ಸೆ.11: ಸ್ಕೂಟರ್‌ಗೆ ಹಿಂದಿನಿಂದ ಮೋಟಾರ್ ಸೈಕಲ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮಹಿಳೆಯೊಬ್ಬರು ಗಾಯಗೊಂಡು, ಬೈಕ್ ಸವಾರ ಸ್ಥಳದಿಂದ ಪರಾರಿಯಾದ ಘಟನೆ ಸೆ.9 ರ ಬೆಳಗ್ಗೆ ಬಲ್ಯ ಕ್ರಾಸ್‌ನಲ್ಲಿ ನಡೆದಿದೆ.


ಗಾಯಗೊಂಡವರನ್ನು ಕೊಕ್ಕಡ ಗ್ರಾಮದ ಪುತ್ಯ ಮನೆ ನಿವಾಸಿ ವಿಮಲ್ ಕುಮಾರ್ ಕೆ.ಎ ಅವರ ಪತ್ನಿ ಮಾನಸ ವಿ.(37) ಎಂದು ಗುರುತಿಸಲಾಗಿದೆ. ಕಡಬದ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಸೆ.9 ರ ಬೆಳಗ್ಗೆ 8.45 ಕ್ಕೆ ಮಾನಸ ಅವರು ತಮ್ಮ ಸ್ಕೂಟರ್‌ನಲ್ಲಿ ಮನೆಯಿಂದ ಕಡಬದತ್ತ ತೆರಳುತ್ತಿದ್ದರು. 9.15 ಕ್ಕೆ ಬಲ್ಯ ಗ್ರಾಮದ ಬಲ್ಯ ಕ್ರಾಸ್ ಬಳಿ ತಲುಪಿದಾಗ, ಉಪ್ಪಿನಂಗಡಿ ಕಡೆಯಿಂದ ಕಡಬದತ್ತ ಬರುತ್ತಿದ್ದ ಮೋಟಾರ್ ಸೈಕಲ್ ಸವಾರನೋರ್ವ ಸಹಸವಾರನನ್ನು ಕೂರಿಸಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಕಾರನ್ನು ಓವರ್‌ಟೇಕ್ ಮಾಡಿ ಮಾನಸ ಅವರ ಸ್ಕೂಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಮಾನಸ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು, ಎಡಕೈ ಮಣಿಗಂಟು ಹಾಗೂ ಎಡ ಮೊಣಗಂಟಿಗೆ ಗಂಭೀರ ಗಾಯವಾಗಿದೆ.
ಸ್ಥಳದಲ್ಲಿದ್ದವರು ಪ್ರಾಥಮಿಕ ಚಿಕಿತ್ಸೆ ನೀಡಿ ಕಡಬ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ನಂತರ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ನಂತರ ಬೈಕ್ ಸವಾರ ಪರಾರಿಯಾಗಿದ್ದು, ಬೈಕ್‌ನ ನೋಂದಣಿ ಸಂಖ್ಯೆ ಗಮನಿಸಲು ಸಾಧ್ಯವಾಗಿಲ್ಲ ಎಂದು ಮಾನಸ ದೂರಿನಲ್ಲಿ ತಿಳಿಸಿದ್ದಾರೆ. ಮಿರರ್ ಮೂಲಕ ಬೈಕ್ ಸವಾರನನ್ನು ನೋಡಿದ್ದು, ಗುರುತಿಸುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಈ ಘಟನೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್ ಸವಾರ ಪತ್ತೆಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

