ತ್ರಿಶೂರ್: ಕೇರಳದ ಮಧ್ಯಭಾಗದ ತ್ರಿಶೂರ್ ಜಿಲ್ಲೆಯಲ್ಲಿ ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ತಮಿಳುನಾಡಿನ ವಿದ್ಯಾರ್ಥಿಗಳೆಂದು ಶಂಕಿಸಲಾದ ಎಂಟು ಮಂದಿ ಮೃತಪಟ್ಟಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ 11.40 ರ ಸುಮಾರಿಗೆ ಈ ಅಪಘಾತ ನಡೆದಿದೆ. ಕೈಪಮಂಗಲಂ ಸಮೀಪದ ಪನಂಬಿಕ್ಕುನ್ನು ಎಂಬಲ್ಲಿ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಕಾರಿನಲ್ಲಿದ್ದ ಎಲ್ಲಾ ಎಂಟು ಮಂದಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಸ್ಥಳೀಯರು, ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸರು ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಮೃತದೇಹಗಳನ್ನು ಕಾರಿನಿಂದ ಹೊರಗೆ ತೆಗೆಯಲಾಯಿತು.
ತ್ರಿಶೂರ್ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ಮೃತದೇಗಳನ್ನು ರವಾನೆ ಮಾಡಲಾಗಿದೆ. ಕಾರು ತಮಿಳುನಾಡು ನೋಂದಣಿ ಹೊಂದಿತ್ತು. ಮೃತಪಟ್ಟವರೆಲ್ಲ ತಮಿಳುನಾಡಿನ ವಿದ್ಯಾರ್ಥಿಗಳಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದವರು ಗುರುವಾಯೂರು ಕಡೆಯಿಂದ ಕೊಗಡಂಗನಲ್ಲೂರು ಕಡೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

