ಮಹೇಂದ್ರ ಕುಮಾರ್ ಕೊಪ್ಪ ನಿಧನ
ಬೆಂಗಳೂರು : ಸಿಎಎ,ಎನ್ ಆರ್ ಸಿ ವಿರುದ್ಧದ ಪ್ರತಿಭಟನೆಯಲ್ಲಿ ಸಕ್ರಿಯವಾಗಿದ್ದ, ಬಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಕೊಪ್ಪ ಅವರು ಹೃದಯಘಾತದಿಂದ ಬೆಳಗಿನ ಜಾವ 5 ಗಂಟೆಗೆ ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಮಹೇಂದ್ರ ಕುಮಾರ್ ರಾಜ್ಯ ಬಜರಂಗದಳದ ಸಂಚಾಲಕರಾಗಿದ್ದ ಸಮಯದಲ್ಲಿ ಮಂಗಳೂರು ನಗರದ ಮಿಲಾಗ್ರಿಸ್ ಬಳಿಯ ಎಡೋರೇಶನ್ ಮಾನೆಸ್ಟ್ರಿಯಲ್ಲಿ 2008 ರ ಸೆಪ್ಟೆಂಬರ್ 14 ರಂದು ಧರ್ಮ ಭಗಿನಿಯರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ದಾಳಿ ನಡೆಸಿದ್ದ ಗುಂಪು ಕಿಟಕಿ ಗಾಜುಗಳನ್ನು ಪುಡಿ ಮಾಡಿತ್ತು. ಪೂಜಾಪೀಠ ಮತ್ತು ಏಸು ಕ್ರಿಸ್ತನ ಮೂರ್ತಿಯನ್ನು ಧ್ವಂಸ ಮಾಡಿತ್ತು. ಅದೇ ದಿನಗಳಲ್ಲಿ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಉಡುಪಿ ಸೇರಿದಂತೆ ಹಲವೆಡೆ ಇಂತಹ ಘಟನೆಗಳು ನಡೆದಿದ್ದವು.
ಈ ಕೃತ್ಯಗಳನ್ನು ಮಹೇಂದ್ರ ಕುಮಾರ್ ತಾವೇ ಮಾಡಿಸಿದ್ದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಬಳಿಕ ಅವರ ಬಂಧನವಾಗಿತ್ತು. ಬಳಿಕದ ದಿನಗಳಲ್ಲಿ ಸಂಘ ಪರಿವಾರದ ಚಟುವಟಿಕೆಗಳಿಂದ ದೂರ ಉಳಿದಿದ್ದ ಅವರು ಜೆಡಿಎಸ್ ಸೇರಿದ್ದರು. ಹೋರಾಟಗಳ ಬದಲಾಗಿ ರಾಜಕೀಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಒಂದೊಮ್ಮೆ ಸಂಘಪರಿವಾರದ ಕಟ್ಟಾ ಅನುಯಾಯಿಯಾಗಿದ್ದ ಮಹೇಂದ್ರ ಕುಮಾರ್ ಅವರು ಏಕಾಏಕಿ ‘ಯು ಟರ್ನ್’ ತೆಗೆದುಕೊಂಡು, ಸಂಘಪರಿವಾರದ ಕಟು ಟೀಕಾಕಾರರಾಗಿ ಬದಲಾಗಿದ್ದರು. ಹೋರಾಟಗಳ ಅನಿಶ್ಚಿತತೆ ನಿಂದ ಹೊರಬಂದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡು ಬದುಕಿನಲ್ಲಿ ‘ ಸೆಟ್ಲ್ ‘ ಆದರು. ಇತ್ತೀಚೆಗೆ ನಡೆದ ಕೇಂದ್ರ ಸರ್ಕಾರದ ಸಿಎಎ, ಎನ್ಆರ್ಸಿ ವಿರುದ್ಧದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು.
ಮೂಲತ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರಾದ ಅವರು ಪ್ರಸ್ತುತ ಬೆಂಗಳೂರು ನಿವಾಸಿಯಾಗಿದ್ದರು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.