ಶನಿವಾರ,ಭಾನುವಾರ ಮದುವೆಗೆ ಹೋಗುವವರಿಗೆ ಪಾಸ್ ಕಡ್ಡಾಯ | ದ.ಕ. ನೈಟ್ & ವೀಕೆಂಡ್ ಕರ್ಫ್ಯೂ ಹಿನ್ನೆಲೆ | ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ | ಕೋವಿಡ್ ನಿಯಮಾವಳಿ ಕಡ್ಡಾಯ ಪಾಲನೆಗೆ ಜಿಲ್ಲಾಧಿಕಾರಿ ಆದೇಶ
ಮಂಗಳೂರು: ರಾಜ್ಯಾದ್ಯಂತ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ವಿಧಿಸಲಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಸ್ಥಳೀಯ ಸಂಸ್ಥೆಗಳಿಗೆ ಮದುವೆ ಕಾರ್ಯಕ್ರಮಕ್ಕೆ ಕೇವಲ 50 ಜನರಿಗೆ ಸೀಮಿತವಾಗಿ ಅನುಮತಿ ಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.
ಅಲ್ಲದೆ, ಇಂದು ರಾತ್ರಿಯಿಂದ ಎಲ್ಲ ದೇವಸ್ಥಾನ, ದೈವಸ್ಥಾನ, ಮಸೀದಿ, ಚರ್ಚ್ ಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ ಹಾಗೂ ಪೂಜಾ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿ ಮಾತ್ರ ಇರತಕ್ಕದ್ದು. ಮುಂದಿನ ಶನಿವಾರ ಹಾಗೂ ಭಾನುವಾರ ಹಲವಾರು ಮದುವೆ ಕಾರ್ಯಕ್ರಮಗಳು ನಿಗದಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ವಿವಾಹ ಕಾರ್ಯಕ್ರಮದಲ್ಲಿ 50 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಮದುವೆಯಲ್ಲಿ ಭಾಗವಹಿಸುವ 50 ಮಂದಿ ಒಳಗೊಂಡ ಗೆಸ್ಟ್ ಲಿಸ್ಟ್ ನ್ನು ಸ್ಥಳೀಯಾಡಳಿತದಿಂದ ಪಡೆಯುವ ಅನುಮತಿ ಪತ್ರದಲ್ಲಿ ನೀಡಲಾಗಿರುವ ಹೆಸರಿನವರಿಗೆ ಮಾತ್ರ ಮದುವೆಯ ನಿಗದಿತ ಸ್ಥಳಗಳಲ್ಲಿ ಕರ್ಫ್ಯೂ ಸಂದರ್ಭ ತೆರಳಲು ಅವಕಾಶ ನೀಡಲಾಗುತ್ತದೆ.
ಅತಿಥಿ ಪಟ್ಟಿಯಲ್ಲಿರುವವರು ಅನುಮತಿ ಪತ್ರದ ಪ್ರತಿ, ಮದುವೆ ಆಮಂತ್ರಣ ಪತ್ರಿಕೆ ಹಾಗೂ ತಮ್ಮ ಪೋಟೊ ಇರುವ ಆಧಾರ್ ಕಾರ್ಡ್, ಪಾನ್‌ಕಾರ್ಡ್, ಡ್ರೈವಿಂಗ್ ಲೈಸೆನ್ಸನ್ನು ಕರ್ಫ್ಯೂ ಸಂದರ್ಭ ಸಂಚರಿಸುವ ವೇಳೆ ತಪಾಸಣೆ ಅಧಿಕಾರಿಗಳೆದುರು ಹಾಜರುಪಡಿಸಬೇಕು. ಪಟ್ಟಿಯಲ್ಲಿ ಇಲ್ಲದವರಿಗೆ ಅಥವಾ ಅದೇ ಹೆಸರಿನ ಬೇರೊಬ್ಬರಿಗೆ ಸಂಚಾರಕ್ಕೆ ಅಥವಾ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದಿಲ್ಲ ಎಂದರು.