ರೆಸ್ಟೋರೆಂಟ್ ಒಂದರ ಹಳೆಯ ಮೆನು ಹೇಳುತ್ತೆ 2001ರ ಖಾದ್ಯಗಳ ಬೆಲೆಯನ್ನ! ಇಂದು ಮುಟ್ಟಿದರೆ ಕೈ ಸುಡುವ ಚಿಕನ್, ಮಟನ್ ಬಿರಿಯಾನಿ ಬೆಲೆ ಅಂದು ಎಷ್ಟಿತ್ತು ಗೊತ್ತ ?
ಹೊಸ ವರ್ಷದ ಆರಂಭವಾಗುತ್ತಿದ್ದಂತೆ ಅದೇನೋ ಗೊತ್ತಿಲ್ಲ, ಹಳೆಯ ಕಾಲದ ಬಿಲ್ ಗಳು ಒಂದೊಂದಾಗಿ ಪ್ರತ್ಯಕ್ಷವಾಗಿ ಜನರೆಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿಸುತ್ತಿವೆ. ಅಯ್ಯೋ ದೇವ್ರೇ ಆಗ ಇಷ್ಟು ಕಡಿಮೆಗೆ ಈ ವಸ್ತುಗಳೆಲ್ಲ ಸಿಗ್ತಿದ್ದವಾ? ಎಂದು ಹುಬ್ಬೇರಿಸುವಂತೆ ಮಾಡುತ್ತಿವೆ. ಚಿನ್ನ ಬೆಳ್ಳಿ ಅಂಗಡಿಯ ಬಿಲ್ ಆಯ್ತು, ರೈಲ್ವೆ ಟಿಕೆಟ್ ಆಯ್ತು, ಸೈಕಲ್ ಹಾಗೂ ಟಿವಿಗಳ ಹಳೆಯ ಬಿಲ್ಲನ್ನು ಕೂಡ ನೋಡಿ ಆಯ್ತು. ಇದೀಗ ಆಹಾರ ಖಾದ್ಯ, ಹೋಟೆಲ್ ಮೆನು ಹಾಗೂ ಬಿಲ್ ಗಳ ಸರದಿ ಶುರುವಾಗಿದೆ. ಹೌದು ಸುಮಾರು 20 ವರುಷಗಳ ಹಳೆಯ ಹೋಟೆಲ್ ಮೆನುವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, 90ರ ದಶಕದ ದಿನಗಳನ್ನು ನೆನಪಿಸುತ್ತಿದೆ.
ಅದೊಂದು ಕಾಲವಿತ್ತು. ಜೇಬಲ್ಲಿ ಸ್ವಲ್ಪ ದುಡ್ಡಿದ್ರೆ ಹೊಟ್ಟೆತುಂಬಾ ತಿನ್ಬೋದು, ಫುಲ್ ಮೀಲ್ಸ್ ಭಾರಿಸ್ಬೋದು ಅಂತ. ಕನ್ನಡದ ಭೂತಯ್ಯನ ಮಗ ಅಯ್ಯು ಸಿನಿಮಾ ನೋಡಿದ್ರೆ ನಿಮಗೆಲ್ಲ ಗೊತ್ತಾಗಬಹುದು. ಆದರೆ ಪಾಕೆಟ್ನಲ್ಲಿ ಆರೀತಿ ಸ್ವಲ್ಪ ಹಣವಿಟ್ಟುಕೊಂಡು, ತುಂಬಾ ಅಗ್ಗವಾಗಿ ಬಾಯಲ್ಲಿ ನೀರೂರಿಸುವಂತಹ ರುಚಿಕರ ಆಹಾರವನ್ನು ಸವಿಯುತ್ತಿದ್ದ ಕಾಲ ಎಂದೋ ಮುಗಿಯಿತು. ಇಂದು ಎಲ್ಲವು ದುಬಾರಿಯಾಗಿದೆ. ಏನಾದರೂ ತಿನ್ನಬೇಕು ಅನಿಸಿದರೂ ಮೊದಲು ಪಾಕೆಟ್ ಚೆಕ್ ಮಾಡಿಕೊಳ್ಳಬೇಕು. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ರೆಸ್ಟೋರೆಂಟ್ ಒಂದರ 2001ನೇ ಇಸವಿಯ ಮೆನು ಕಾರ್ಡ್ ಎಲ್ಲರನ್ನೂ ಬೆರಗಾಗಿಸಿದೆ. ಅದರಲ್ಲಿನ ಒಂದೊಂದು ಖಾದ್ಯಗಳ ರೇಟ್ ನೋಡಿದ್ರೆ ನೀವೂ ಚಕಿತರಾಗಿ 90ರ ದಶಕದ ದಿನಗಳನ್ನು ನೆನಪಿಸಿಕೊಳ್ಳುತ್ತೀರಿ.
ರೆಸ್ಟೋರೆಂಟ್ ಅಂದಮೇಲೆ ಕೇಳಬೇಕಾ ಸಾಮಾನ್ಯ ಹೋಟೆಲ್ಗಿಂತ ರೆಸ್ಟೋರೆಂಟ್ ತುಂಬಾ ದುಬಾರಿಯಾಗಿರುತ್ತವೆ. ಅಲ್ಲಿಗೆ ಜನ ಸಾಮಾನ್ಯರಂತೂ ಹೋಗುವುದಿಲ್ಲ. ರೆಸ್ಟೋರೆಂಟ್ಗಳಿಗೆ ಹೋಗುವವರು ಬಹುತೇಕ ಹಣಕಾಸು ಸ್ಥಿತಿ ಉತ್ತಮವಾಗಿರುವವರು. ಆದರೆ ವೈರಲ್ ಆಗುತ್ತಿರುವ ಈ ರೆಸ್ಟೋರೆಂಟ್ ಮೆನುವಿನಲ್ಲಿ ಅಂದಿನ ವಿವಿಧ ಬಗೆಯ ಆಹಾರ ಮತ್ತು ಅದಕ್ಕೆ ತಗಲುತ್ತಿದ್ದ ಖರ್ಚನ್ನು ಉಲ್ಲೇಖಿಸಿರುವುದು ನೋಡಿದ್ರೆ ಇಷ್ಟೊಂದು ಕಡಿಮೆನಾ? ಅನಿಸ್ತದೆ. ಅಚ್ಚರಿಯೇನೆಂದರೆ ಅಂದು ರೆಸ್ಟೋರೆಂಟ್ನಲ್ಲಿ ಒಂದು ಪ್ಲೇಟ್ ಚಿಕನ್ ಬಿರಿಯಾನಿ ಬೆಲೆ ಕೇವಲ 30 ಇತ್ತು. ಇನ್ನೂ ಆಶ್ಚರ್ಯವೆಂದರೆ ಇಂದು ಮುಟ್ಟಿದರೆ ಕೈ ಸುಡುವ ಮಟನ್ ಬಿರಿಯಾನಿಗೆ, ಅಂದು ಕೇವಲ 32 ರೂ. ಇತ್ತು. 2001ರಲ್ಲಿ ದುಬಾರಿ ರೆಸ್ಟೋರೆಂಟ್ನಲ್ಲಿ ಕೇವಲ 30 ರೂ. ಗೆ ಬಿರಿಯಾನಿ ಸಿಗುತ್ತಿತ್ತು ಅಂದ್ರೆ ನಿಜಕ್ಕೂ ಅಚ್ಚರಿಯ ಸಂಗತಯೇ ಬಿಡಿ.
ಯಾವುದೇ ವಸ್ತುವನ್ನು ಮುಟ್ಟಿದರೆ ಕೈ ಸುಡುವಂತಹ ಈ ಯುಗದಲ್ಲಿಂದು ರೆಸ್ಟೋರೆಂಟ್ಗಳಿಗೆ ಹೋದರೆ, ಒಂದು ಪ್ಲೇಟ್ ಚಿಕನ್ ಬಿರಿಯಾನಿ ಬೆಲೆ ಕನಿಷ್ಟ ಅಂದರೂ 150 ರಿಂದ 200 ರೂ. ಇರುತ್ತದೆ. ಇನ್ನು ಮಟನ್ ಬಿರಿಯಾನಿ ಬೆಲೆಯಂತೂ ಕೇಳುವುದೇ ಬೇಡ ಬಿಡಿ. ಕನಿಷ್ಠ ಅಂದರೂ 300 ರಿಂದ 350 ರೂ. ಇರುತ್ತದೆ. ಆದರೆ, 2001ರಲ್ಲಿ ಕೇವಲ 30 ಮತ್ತು 32 ರೂ. ಬಿಕನ್ ಮತ್ತು ಮಟನ್ ಬಿರಿಯಾನಿ ಸಿಗುತ್ತಿತ್ತು ಅಂದ್ರೆ ನಂಬೋದೇ ಅಸಾಧ್ಯ.
ಇನ್ನು ಇತರ ಖಾದ್ಯಗಳ ಬೆಲೆಯೂ ಅದರಲ್ಲಿದ್ದು ಎಗ್ ರೋಲಿಗೆ 7ರೂ, ಚಿಕನ್ ರೋಲಿಗೆ 10ರೂ, ಎಗ್ ಚಿಕನ್ ರೋಲ್ ಬೆಲೆ 15 ಹಾಗೂ ವಿಶೇಷ ಚಿಕನ್ ರೋಲ್ ಬೆಲೆ 24 ರೂ. ಇತ್ತೆಂದು ಮೆನು ಹೇಳುತ್ತಿದೆ.
ಮೆನುವನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದಾಗಿನಿಂದ ಸಾವಿರಾರು ಮಂದಿ ಫೋಟೋಗೆ ಲೈಕ್ ಮಾಡಿದ್ದಾರೆ. ಇವತ್ತೇನಿದ್ರೂ ಒಂದು ಮೆನು, ಒಂದೇ ಐಟಂ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಒಂದು ಎಗ್ ರೋಲ್ ಇವತ್ತು 70 ರೂ. ಆಗಿದೆ. ಆ ದಿನಗಳೇ ಸರಿಯಾಗಿದ್ದವು ಎಂದೆಲ್ಲ ಕಮೆಂಟಿಸುತ್ತಿದ್ದಾರೆ. ಒಟ್ಟಿನಲ್ಲಿ ಒಂದೊಂದಾಗಿ ಹಳೆಯ ಬಿಲ್ ಗಳು ಪ್ರತ್ಯಕ್ಷವಾಗಿ ಎಲ್ಲರೂ ಒಮ್ಮೆ ಹಳೆಯ ದಿನಗಳನ್ನು ನೆನಪಿಸಿಕೊಳ್ಳುವಂತೆ ಮಾಡುತ್ತಿವೆ.