ಜೈಲಿನಲ್ಲೇ ಇದ್ದ ಖೈದಿಗಾಗಿ 20 ವರ್ಷ ಹುಡುಕಾಟ ನಡೆಸಿದ ಪೊಲೀಸರು! ಕೊನೆಗೆ ಕೋರ್ಟ್ ಹೇಳಿದ್ದೇನು ಗೊತ್ತಾ?

ಪೊಲೀಸರಿಗೆ ಕಳ್ಳರನ್ನು ಹಿಡಿಯುವುದೇ ಒಂದು ದೊಡ್ಡ ತ್ರಾಸದಾಯಕ ಸಂಗತಿ. ಕಾರ್ಯಾಚಾರಣೆಯಲ್ಲಿ ಬೇಗ ಸೆರೆ ಸಿಗುವ ಕಳ್ಳರು, ಕೆಲವೊಮ್ಮೆ ಎಷ್ಟು ಬೆಂಬತ್ತಿದರೂ ಪತ್ತೆ ಇಲ್ಲದಂತಾಗುತ್ತಾರೆ. ಹೀಗೆ ಕಳ್ಳರನ್ನು, ಅಪರಾಧಿಗಳನ್ನು ಹಿಡಿಯದೆ ಇಂತಹ ಎಷ್ಟೋ ಪ್ರಕರಣಗಳು ನಮ್ಮಲ್ಲಿ ಬಾಕಿ ಇರುವುದನ್ನು ಕಾಣುತ್ತೇವೆ. ಹೀಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡ ಆರೋಪಿಗಳ ಹುಡುಕಾಟಕ್ಕೆ ಪೊಲೀಸರು ವರ್ಷಗಟ್ಟಲೇ ಹುಡುಕಿ ಸುಸ್ತಾಗೋದು ಸಾಮಾನ್ಯ ಸಂಗತಿ. ಆದರೆ ಜೈಲಿನಲ್ಲೇ ಇದ್ದ ಆರೋಪಿಗಾಗಿ ಪೊಲೀಸರು ಒಂದೆರಡಲ್ಲ ಬರೋಬ್ಬರಿ 20 ವರ್ಷಗಳ ಕಾಲ ಹುಡುಕಾಟ ನಡೆಸಿದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು. ಇದನ್ನು ಕೇಳಿದ್ರೆ ನಿಮಗೆ ನಿಜಕ್ಕೂ ಆಶ್ಚರ್ಯ ಆಗಬಹುದು. 1999 ರ ಕೊಲೆ ಪ್ರಕರಣವೊಂದರಲ್ಲಿ ಛೋಟಾ ಶಕೀಲ್ ಗ್ಯಾಂಗ್‌ನ ಶಾರ್ಪ್ ಶೂಟರ್ ಎಂದು ಹೇಳಲಾದ ಆರೋಪಿಯನ್ನು 20 ವರ್ಷಗಳಿಂದ ಪತ್ತೆಹಚ್ಚಲು ಮುಂಬೈ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಆದರೆ ಅದೇನೇ ತಿಪ್ಪರಲಾಗ ಹಾಕಿದರೂ ಆರೋಪಿಯ ಸುಳಿವು ಪೊಲೀಸರಿಗೆ ಪತ್ತೆಯಾಗಿರಲಿಲ್ಲ. ಆದರೆ ಇದೀಗ ಆ ಆರೋಪಿಯು 5 ವರ್ಷಗಳ ಕಾಲ ಮತ್ತೊಂದು ಪ್ರಕರಣದಲ್ಲಿ ವಿಚಾರಣಾಧೀನ ಖೈದಿಯಾಗಿ ಜೈಲಿನಲ್ಲೇ ಇದ್ದ ಎಂದು ತಡವಾಗಿ ಬೆಳಕಿಗೆ ಬಂದಿದೆ.

20 ವರ್ಷಗಳ ಹಿಂದೆ ನಡೆದ ಈ ಕೊಲೆ ಪ್ರಕರಣವೇನು ಎಂಬುದನ್ನು ನೋಡೋದಾದ್ರೆ, 1999 ರ ಜುಲೈ ತಿಂಗಳಲ್ಲಿ ಮುಂಬೈನ ಎಲ್ ಟಿ ಮಾರ್ಗ್ ಪ್ರದೇಶದಲ್ಲಿ ವಾಹಿದ್ ಅಲಿ ಖಾನ್ ಎಂಬುವರ ಮನೆಯ ಸಮೀಪದಲ್ಲಿ ಸಿದ್ದಿಕಿ ಮತ್ತು ಸಹ-ಆರೋಪಿಗಳು ವಾಹಿದ್ ಅಲಿ ಖಾನ್ ಅವರನ್ನು ಗುಂಡಿಕ್ಕಿ ಕೊಂದಿದ್ದರು. ನಂತರ ಇಬ್ಬರೂ ಅಪರಾಧ ಮಾಡಿದ ಸ್ಥಳದಿಂದ ಪರಾರಿಯಾಗಿದ್ದರು ಎಂದು ಪ್ರಾಸಿಕ್ಯೂಷನ್ ವಾದ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ಮೇ ತಿಂಗಳಲ್ಲಿ ಪೊಲೀಸರು ಮಹಿರ್ ಸಿದ್ದಿಕಿಯನ್ನು ಪತ್ತೆ ಹಚ್ಚಿ ಬಂಧನ ಮಾಡಿದ್ದರು. ಆರೋಪಿಯ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ದೊರೆತ ನಂತರ ಆರೋಪಪಟ್ಟಿ ಸಲ್ಲಿಸಿದ್ದರು. ತನಿಖೆಯ ವೇಳೆ, ಸಿದ್ದಿಕಿ ಮತ್ತು ಛೋಟಾ ಶಕೀಲ್ ಸೇರಿದಂತೆ ಆರು ಮಂದಿ ಭಾಗಿಯಾಗಿರುವುದು ಪೊಲೀಸರಿಗೆ ಕಂಡುಬಂದಿತ್ತು. ಅಲ್ಲದೆ, ಛೋಟಾ ಶಕೀಲ್‌ನ ನಿರ್ದೇಶನದ ಮೇರೆಗೆ ಈ ಅಪರಾಧ ನಡೆದಿದೆ ಎಂದು ಪೊಲೀಸರು ತಿಳಿಸಿದ್ದರು.

ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (MCOCA) ಪ್ರಕರಣಗಳ ವಿಶೇಷ ನ್ಯಾಯಾಧೀಶ ಎ.ಎಂ. ಪಾಟೀಲ್ ಅವರು 1999 ರಲ್ಲಿ ಬಾಂಬೆ ಅಮಾನ್ ಸಮಿತಿಯ ಅಧ್ಯಕ್ಷ ವಾಹಿದ್ ಅಲಿ ಖಾನ್ ಅವರನ್ನು ಹತ್ಯೆಗೈದ ಆರೋಪಿ ಮಾಹಿರ್ ಸಿದ್ದಿಕಿಯನ್ನು ಖುಲಾಸೆಗೊಳಿಸಿದ್ದಾರೆ. ಮಾಹಿರ್ ಸಿದ್ದಿಕಿ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸುವ ಸಮಯದಲ್ಲಿ, ಘಟನೆಯ ದಿನಾಂಕದಿಂದ ಬಂಧಿಸುವವರೆಗೂ ಆರೋಪಿ ತಲೆಮರೆಸಿಕೊಂಡಿದ್ದ ಎಂದು ಪ್ರಾಸಿಕ್ಯೂಷನ್ ವಾದ ಮಾಡಿತ್ತು.

ಆದರೆ ಆರೋಪಿ 2014 ಮತ್ತು 2019 ರ ನಡುವೆ ಮತ್ತೊಂದು ಪ್ರಕರಣದಲ್ಲಿ ವಿಚಾರಣಾಧೀನ ಖೈದಿಯಾಗಿದ್ದು, ಆರೋಪಿಯನ್ನು ಸಿಐಡಿ ಬಂಧಿಸಿತ್ತು ಎಂದು ತಿಳಿದುಬಂದಿದೆ. ಇಷ್ಟೆಲ್ಲ ಆಗಿದ್ದರೂ ಜೈಲಿನಲ್ಲೇ ಇದ್ದ ಆರೋಪಿಯನ್ನು ಪೊಲೀಸರು ಹುಡುಕಾಟ ನಡೆಸಿದ್ದು ಹೇಗೆ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಇನದಕ್ಕೆ ಸ್ವತಃ ನ್ಯಾಯಾಧೀಶರೇ ಅಚ್ಚರಿ ಗೊಂಡು ಪ್ರಶ್ನಿಸಿದ್ದಾರೆ. ಈ ಬಗ್ಗೆ ಅಭಿಪ್ರಾಯ ನೀಡಿದ ನ್ಯಾ.ಎ.ಎಂ.ಪಾಟೀಲ್‌, 5 ವರ್ಷ ಜೈಲಿನಲ್ಲೇ ಇದ್ದರೂ ಪೊಲೀಸರಿಗೆ ಗೊತ್ತಾಗದ್ದೇ ಇದ್ದದ್ದು ಹೇಗೆ? ಈ ಕೌತುಕವನ್ನು ಅವರೇ ವಿವರಿಸಬೇಕು ಎಂದಿದ್ದಾರೆ. ಆರೋಪಿಯನ್ನು ಖುಲಾಸೆಗೊಳಿಸಿದ ನ್ಯಾಯಾಲವೀಗ ಆರೋಪಿಯು ಜೈಲಿನಲ್ಲೇ ಇದ್ದರೂ ವ್ಯರ್ಥವಾಗಿ 20 ವರ್ಷಗಳ ಕಾಲ ಹುಡುಕಾಟ ನಡೆಸಿದ ಪೊಲೀಸರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದೆ.

Leave A Reply

Your email address will not be published.