OLA UBER : ಬೆಂಗಳೂರಿಗರೇ ಗಮನಿಸಿ | 3 ದಿನ ಸಿಗಲ್ಲ ನಿಮಗೆ ಓಲಾ ಉಬರ್ ಆಟೋ ಸೇವೆ | ಕಾರಣ ಇಲ್ಲಿದೆ
ರಾಜಧಾನಿ ಬೆಂಗಳೂರಿನಲ್ಲಿ ಮಾಮೂಲಿ ಆಟೋದಲ್ಲಿ ಪ್ರಯಾಣಿಸುವವರಿಗಿಂತಲೂ ಆ್ಯಪ್ ಆಧಾರಿತ ಓಲಾ , ಉಬರ್ ಆಟೋ, ಕ್ಯಾಬ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಮೊಬೈಲ್‌ನಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ ಬರುವುದರಿಂದ ಜನರು ಈ ಆಟೋ ಸರ್ವಿಸ್ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.
ಆದರೆ, ಈ ಕಂಪನಿಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಪ್ರಯಾಣಿಕರ ಬಳಿ ಸುಲಿಗೆ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಓಲಾ- ಊಬರ್ ಕಂಪನಿಗಳಿಗೆ ಸಾರಿಗೆ ಇಲಾಖೆ ಬ್ರೇಕ್ ಹಾಕಲು ತೀರ್ಮಾನಿಸಿದೆ.
ಆಟೋ ದರ ದುಪ್ಪಟ್ಟು ವಿಧಿಸುತ್ತಿರುವ ಬಗ್ಗೆ ಅನೇಕ ದೂರುಗಳು ಬಂದ ಹಿನ್ನೆಲೆ ರಾಜ್ಯ ಸಾರಿಗೆ ಇಲಾಖೆ ಆಯುಕ್ತರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಸಾರಿಗೆ ಇಲಾಖೆಯ ನಿಯಮದ ಪ್ರಕಾರ ಆಟೋಗಳ ಕನಿಷ್ಟ ದರ 30 ರೂ. ನಿಗದಿಮಾಡಿ, ವೈಟಿಂಗ್ ಚಾರ್ಜ್ ಅನ್ನು ಪ್ರತಿ 5 ನಿಮಿಷಕ್ಕೆ 5 ರೂ.ಗಳಂತೆ ನಿಗದಿ ಮಾಡಲಾಗಿತ್ತು. ಆದರೆ, ಸಾರಿಗೆ ಇಲಾಖೆಯ ನಿಯಮಕ್ಕೆ ವಿರುದ್ಧವಾಗಿ 100 ರೂ.ಗಳಷ್ಟು ಹಣ ವಸೂಲಿ ಮಾಡಲಾಗುತ್ತಿದೆ.
ಆ್ಯಪ್ ಆಧಾರಿತ ಟ್ರಾನ್ಸ್‌ಪೋರ್ಟ್ ಸಂಸ್ಥೆಗಳು ಪ್ರಯಾಣಿಕರ ಬಳಿ ಹಣ ವಸೂಲಿ ಮಾಡುವ ಪ್ರಕ್ರಿಯೆಗೆ ಬ್ರೇಕ್ ನೀಡಲು ಸಾರಿಗೆ ಇಲಾಖೆ ಮುಂದಾಗಿದೆ. ಸಾರಿಗೆ ಇಲಾಖೆಯಿಂದ ಓಲಾ ಮತ್ತು ಊಬರ್ ಕಂಪನಿಗೆ ನೋಟೀಸ್ ಜಾರಿ ಮಾಡಲಾಗಿದೆ.
ಈಗಾಗಲೇ ನೋಟಿಸ್ ಜಾರಿ ಮಾಡಿರುವ ಜೊತೆಗೆ ಈ ವಿಚಾರದ ಕುರಿತಾದ ಸ್ಪಷ್ಟನೆ ನೀಡಲು ಸಾರಿಗೆ ಇಲಾಖೆ 3 ದಿನದ ಕಾಲಾವಕಾಶ ನೀಡಿದ್ದು, ಓಲಾ-ಊಬರ್ ನಲ್ಲಿ ಆಟೋ ಸೇವೆ ಸ್ಥಗಿತಗೊಳಿಸುವಂತೆ ಸಾರಿಗೆ ಇಲಾಖೆ ನೋಟಿಸ್ ನೀಡಿದೆ.
ಆದರೆ, ನಿಯಮ ಉಲ್ಲಂಘಿಸಿ ಆಟೋ ರಿಕ್ಷಾಗಳ ಸೇವೆ ನೀಡಲಾಗುತ್ತಿದ್ದು, ಆದ್ದರಿಂದ, ಅಗ್ರಿಗೇಟರ್ ಸೇವೆಯಡಿಯಲ್ಲಿ ಆಟೋ ರಿಕ್ಷಾ ಸೇವೆಯನ್ನು ಕೂಡ ಸ್ಥಗಿತಗೊಳಿಸುವಂತೆ ನೋಟಿಸ್ ಜಾರಿ ಮಾಡಿದೆ.
ಆದರೂ ನಿಯಮ ಉಲ್ಲಂಘನೆ ಮಾಡಿ ಮೂರು ದಿನದ ಕಾಲಾವಕಾಶದ ಬಳಿಕ ವಿವರಣೆ ನೀಡದೆ ಹೋದರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಹೀಗಾಗಿ, ಇನ್ಮುಂದೆ ಓಲಾ -ಉಬರ್ ನಲ್ಲಿ ಆಟೋ ಸಿಗುವ ಸಾಧ್ಯತೆ ಕಡಿಮೆ ಎಂದು ಅಂದಾಜಿಸಲಾಗಿದೆ.
ಈ ಆ್ಯಪ್ ಆಧಾರಿತ ಸಂಸ್ಥೆಗಳಲ್ಲಿ ಆಟೋ ಸೇವೆ ಸ್ಥಗಿತ ಮಾಡುವಂತೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ , ಕೇವಲ ನಿಬಂಧನೆಗಳ ಆಧಾರದಲ್ಲಿ ಟ್ಯಾಕ್ಸಿ ಸೇವೆಗೆ ಮಾತ್ರ ಓಲಾ -ಉಬರ್ ಲೈಸೆನ್ಸ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ.