” ಓಡೋ….ಓಡ್ಲಾ….ಬಾಟ್ಲಿ ಚಿಪ್ಸು ಹಿಡ್ಕಳ್ಳಾ…….” ಬಾರ್ ಗೆ ಡಿಸಿ ರೈಡ್ ಮಾಡುವ ಸಂದರ್ಭ ಎಣ್ಣೆ ಮಾಸ್ಟರ್ ಗಳ ನಾಗಾಲೋಟ !!
ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹಾಗೂ ಅಧಿಕಾರಿಗಳ ತಂಡ ನೆಲಮಂಗಲ ಬಾರ್ ವೊಂದಕ್ಕೆ ದಿಢೀರ್ ಭೇಟಿ ನೀಡಿದ ವೇಳೆ ಕುಡುಕರು ಗಾಬರಿಗೊಂಡು ಸ್ಥಳದಿಂದ ತೂರಾಡುತ್ತಾ ಕಾಲ್ಕಿತ್ತಿದ್ದಾರೆ.
‘ ಯಾರೇ ಕೂಗಾಡಲಿ, ಯಾರೇ ಹೋರಾಡಲಿ ನನ್ನ ನೆಮ್ಮದಿಗೆ ಭಂಗವಿಲ್ಲ ‘ ಅನ್ನುವಂತೆ ಅವರು ಮಟಾ ಮಧ್ಯಾಹ್ನ ಎಣ್ಣೆ ಹೊಡಿಯುತಿದ್ದರು. ಬಾರ್ ನಲ್ಲಿ ಒಂದು ನಾಲ್ಕ ಸಿಪ್ ಎಳೆದುಕೊಂಡ ಮೇಲೆ ಎಲ್ಲಿಯ ಸಾಮಾಜಿಕ ಅಂತರ ಕಾಪಾಡೋಡು ?! ಹಾಗೆ ಪರಸ್ಪರ ಅಂತರ ಕಾಯ್ದುಕೊಳ್ಳದೆ ಕೊರೋನಾ ನಿಯಮ ಉಲ್ಲಂಘಿಸಿ ಎಣ್ಣೆಯಲ್ಲಿ ಲೀನರಾಗಿದ್ದ ಕುಡುಕರು ಡಿಸಿ ಹಾಗೂ ಅಧಿಕಾರಿಗಳ ತಂಡ ಎಂಟ್ರಿ ಆಗುತ್ತಿದ್ದಂತೆ ತಡಬಡಾಯಿಸಿ ಹೊರ ಓಡಿದ ಪ್ರಸಂಗ ನೆಲಮಂಗಲದಲ್ಲಿ ನಡೆದಿದೆ.
ಯಾರು ಬಂದಿದ್ದಾರೆ, ಯಾಕೆ ಬಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳದೆ, ‘ರೈಡ್ ಆಯ್ತ್ ‘ಅನ್ನೋ ಪದ ಕೇಳಿದ ತಕ್ಷಣ ಪಾದಕ್ಕೆ ಬುದ್ದಿ ಹೇಳಿದ್ದಾರೆ. ಕೆಲವು ಗ್ರಾಹಕರು, ಇದೇ ಸರಿಯಾದ ಸಮಯ ಅಂದುಕೊಂಡು ಡ್ರಿಂಕ್ಸ್ ಕುಡಿದ ಬಿಲ್ಲು ಕೂಡ ನೀಡದೆ ಜಾಗ ಖಾಲಿ ಮಾಡಿದ್ದಾರೆ. ಹಾಗೇ ಬರಿಗೈಯಲ್ಲಿ ಓಡಿಲ್ಲ: ಅರ್ಧ ಉಳಿದಿದ್ದ ಶೀಷೆ ಮತ್ತಿತರ ತಮ್ಮ ‘ ಅಗತ್ಯದ ‘ ವಸ್ತುಗಳ ಜತೆ ಕ್ಷಣಾರ್ಧದಲ್ಲಿ ಮಾಯವಾಗಿದ್ದಾರೆ.
ತುಂಬಿ ತುಳುಕಿ ಮೊರೆಯುತ್ತಿದ್ದ ಬಾರ್ ಕ್ಷಣಾರ್ಧದಲ್ಲಿ ಖಾಲಿಯಾಗಿದೆ. ಕೊರೋನಾ ನಿಯಮ ಉಲ್ಲಂಘಿಸಿದ ಬಾರ್ ಮಾಲೀಕನನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ, ನಿಯಮ ಉಲ್ಲಂಘನೆಯಡಿ ನೋಟಿಸ್ ಜಾರಿಮಾಡಿದ್ದಾರೆ. ಬಾರ್ ಮಾಲೀಕನಿಗೆ ಒಂದು ಕಡೆ ದಂಡ ತೆರಬೇಕಾದ ಅನಿವಾರ್ಯತೆ. ಮತ್ತೊಂದೆಡೆ ಹಣ ನೀಡದೆ ಓಡಿ ಹೋದ ಕುಡುಕರ ಬಿಲ್ ಮಿಸ್ ಆಗಿದೆ.
ದೌಡು ಕಂಡ ಸಾರ್ವಜನಿಕರಿಗೆ ಬಿಟ್ಟಿ ಮನರಂಜನೆ ಸಿಕ್ಕಿದಂತಾಗಿದೆ.