ಲಾಕ್ ಡೌನ್ ಸಮಯದ ಶ್ರಮದಾಯಕ ಸದುಪಯೋಗ | ಮನೆ ಬಾಗಿಲಿಗೇ ಬಂತು ನೋಡಿ ಒಂದು ಬಾವಿ !
ಲಾಕ್ಡೌನ್ ದಿನಗಳು ಎಷ್ಟೋ ಗಾದೆ ಮಾತುಗಳ ಅರ್ಥವನ್ನು ಸ್ವತಃ ಅನುಭವ ವೇದ್ಯಗೊಳಿಸುತ್ತದೆ. ಲಾಕ್ ಡೌನ್ ಅಂದರೆ ಹಲವರಿಗೆ ಕಷ್ಟ, ಮತ್ತೆ ಕೆಲವರಿಗೆ ಜೀವನ ಪಾಠ, ಅನುಭವ ಮತ್ತು ಕೆಲವರಿಗೆ ಹೊಸದಕ್ಕೆ ತೆರೆದುಕೊಳ್ಳುವ ಪ್ರಯೋಗ.
ಲಾಕ್ಡೌನ್ ಒಂದಿಷ್ಟು ಬೋರ್ ಎಂದೆನಿಸಿದರೂ, ಹಲವು ಸಂಬಂಧಗಳನ್ನು ಬೆಸೆದು, ಒಗ್ಗಟ್ಟಿನಿಂದ ಕೆಲಸ ಮಾಡುವಂತೆಯೂ ಪ್ರೇರೇಪಿಸುತ್ತದೆ ಎಂಬುದಕ್ಕೆ ಇಲ್ಲಿದೆ ನೋಡಿ ಒಂದು ಉದಾಹರಣೆ.
ನಮ್ಮ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ನೆಕ್ಕರೆಯಲ್ಲಿ ತಂದೆ, ಮಕ್ಕಳು, ಮೊಮ್ಮಕ್ಕಳು ಮತ್ತು ಸ್ಥಳೀಯರೀರ್ವರು ಸೇರಿಕೊಂಡು 50 ಅಡಿ ಆಳದ ಬಾವಿ ತೋಡಿದ್ದಾರೆ. ಕುಡಿಯಲು ನೀರು ಬೇಕಾದಾಗ ಬೋರು ತೋಡಿಸುವ ಕಾಲದಲ್ಲಿ, ಬೋರೇ ಆಗಬೇಕಿಲ್ಲ ಬಾವಿಯಲ್ಲೂ ನೀರು ಸಿಗುತ್ತದೆ ಎಂದು ತೋರಿಸಿಕೊಟ್ಟಿದ್ದಾರೆ.
ಮನೆಯಲ್ಲೇ ಎಲ್ಲರೂ ಇರುವಾಗ, ನೀರಿನ ಆಭಾವ ಅವರಿಗೆ ಕಾಣಿಸಿದೆ. ಬಾವಿ ತೋಡಿದರೆ ನೀರು ಸಿಗಬಹದಲ್ಲಾ, ನೀರಿನ ಸಮಸ್ಯೆ ಬಾವಿ ತೊಡಲು ಶುರುಮಾಡಿದ್ದಾರೆ. ಹಾಗೆ ಒಟ್ಟು 50 ಅಡಿ ತೋಡಿದ್ದಾರೆ. ಈ ಕೆಲಸ ಒಟ್ಟು 13 ದಿನಗಳು ತೆಗೆದುಕೊಂಡಿದೆ. ಮೊದಲ ಹತ್ತು ಅಡಿಗೆ ಸ್ವಲ್ಪ ಚಂಡಿಯನ್ನು ಕಾಣಸಿಕ್ಕಿದೆ. 25 ಅಡಿ ಆಗುವಾಗ ಮತ್ತಷ್ಟು ತೇವ. ನಲ್ವತ್ತು ಅಡಿಗೆ ನೀರು ಜಿನುಗಿದೆ. 50 ಅಡಿ ಆಗುವಷ್ಟರಲ್ಲಿ ನಾಲ್ಕೂವರೆ ಅಡಿ ನೀರು !
ಮುಂಡಾಜೆಯ ಅಬ್ದುಲ್ ಹಮೀದ್ ನೆಕ್ಕರೆಯವರು ಮತ್ತು ಮಕ್ಕಳಾದ ವ್ಯಾಪಾರಿ ಸಿದ್ಧೀರ್ ನೆಕ್ಕರೆ, ಮಂಗಳೂರಿನಲ್ಲಿ ಉದ್ಯಮಿಯರಾದ ಬಶೀರ್ ಮತ್ತು ನೌಶಾದ್ ಹಾಗೂ ಸಸಾಫಾಲ್, ಸಾಫ್ವಾನ್ ಈ ಕೆಲಸಕ್ಕೆ ಕೈ ಜೋಡಿಸಿದ್ದು, ಸ್ಥಳೀಯರಾದ ಅಹಮ್ಮದ್ ಕುಂಞ ನೆಕ್ಕರೆ ಮತ್ತು ಎರ್ಮಾಲ್ ಪಲ್ಕೆ ಹಮೀದ್ ಸಾಥ್ ನೀಡಿದರು.
ಲಾಕ್ಡೌನ್ ಇದ್ದು, ಮನೆಯಲ್ಲಿ ಲಾಕ್ ಆದ ಇವರು, ಕೆಲಸದಾಳುಗಳ ಮೊರೆ ಹೋಗಲಿಲ್ಲ. ದುಡಿಮೆಯ ದುಡ್ಡು ಕೆಲಸದವರಿಗೆ ಕೊಡಲಿಲ್ಲ.
ಇವರ ಒಗ್ಗಟ್ಟಿನ ಮತ್ತು ಶ್ರಮ ಕಾರ್ಯದಿಂದ ಸದ್ರಿ ಬಾವಿಯಲ್ಲಿ ಈಗ 4.50 ಅಡಿ ನೀರು ಶೇಖರಣೆ ಆಗಿದ್ದು, ಬಾವಿಯಲ್ಲಿ ನೀರು ಸಿಕ್ಕ ಸಂತೋಷ ಒಂದು ಕಡೆ. ತಾವೇ ಸ್ವತಃ ನೀರು ಹುಟ್ಟಿಸಿದ ಖುಷಿ ಮತ್ತು ಲಾಕ್ ಡೌನ್ ನ ಒಂಟಿತನ ಕಳೆದು, ದೇಹಕ್ಕೆ ಒಳ್ಳೆಯ ವ್ಯಾಯಾಮ ಕೊಡುತ್ತಾ ಸಮಯವನ್ನು ಸದುಪಯೋಗ ಪಡಿಸಿಕೊಂಡ ಸಾರ್ಥಕತೆ ಇನ್ನೊಂದೆಡೆ.