ಕೈಕುಂಜೆಯಲ್ಲಿ ಕೊರೋನ ಸೋಂಕಿತ ಮಹಿಳೆಯ ಶವ ಸಂಸ್ಕಾರ | ಪಚ್ಚನಾಡಿಯಲ್ಲಿ ಶವ ಸಂಸ್ಕಾರ ನಡೆಸಲು ಭರತ್ ಶೆಟ್ಟಿ ಒಪ್ಪಿಲ್ಲ ಯಾಕೆ ?

ಬಂಟ್ವಾಳ, ಎ. 24: ಕೊರೋನ ಸೋಂಕಿನಿಂದ ಗುರುವಾರ ಮೃತಪಟ್ಟ ಬಂಟ್ವಾಳ ತಾಲೂಕಿನ ಬಂಟ್ವಾಳ ಪೇಟೆಯ ಮಹಿಳೆಯ ಶವ ಸಂಸ್ಕಾರವು ಸ್ಥಳೀಯಕ್ಕೆ ಭಾರೀ ವಿರೋಧದ ವ್ಯಕ್ತವಾದರೂ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಬಿ.ಸಿ.ರೋಡ್ ರೈಲು ನಿಲ್ದಾಣ ಸಮೀಪದ ಕೈಕುಂಜೆ ಹಿಂದೂ ರುದ್ರ ಭೂಮಿಯಲ್ಲಿ ನಡೆಯಿತು.

ಕೋರೋನಾ ಸೋಂಕಿನಿಂದಾಗಿ ಗುರುವಾರದಂದು ಮೃತಪಟ್ಟ ಮಹಿಳೆಯ ಮೃತದೇಹದ ಅಂತ್ಯ ಸಂಸ್ಕಾರ ನಡೆಸಲು ವಾಮಂಜೂರಿನ ಪಚ್ಚನಾಡಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು. ಆದರೆ ಸ್ಥಳೀಯರು ಶವ ಸಂಸ್ಕಾರಕ್ಕೆ ಅವಕಾಶ ನೀಡಲಿಲ್ಲ. ಸ್ಥಳೀಯರ ಬೆಂಬಲಕ್ಕೆ ಅಲ್ಲಿಯ ಶಾಸಕ  ಭರತ್ ಶೆಟ್ಟಿ ಗಟ್ಟಿಯಾಗಿ ನಿಂತರು.

ಈ ಬಗ್ಗೆ ಮಾತನಾಡಿದ ಡಾ. ಭರತ್ ಶೆಟ್ಟಿ, “ನನ್ನ ವ್ಯಾಪ್ತಿಯಲ್ಲಿ ಶವ ಸಂಸ್ಕಾರ ನಡೆಸುವ ಬಗ್ಗೆ ನನ್ನ ಗಮನಕ್ಕೆ ತಂದಿಲ್ಲ. ಅಲ್ಲದೆ ಸ್ಥಳೀಯ ಕಾರ್ಪೊರೇಟರ್ ಗಮನಕ್ಕೂ ತಂದಿಲ್ಲ. ಶವಸಂಸ್ಕಾರ ನಡೆಸಿದ್ದಲ್ಲಿ ಏನಾಗುತ್ತದೆ ಎಂಬುವುದು ಈ ಸಂದರ್ಭದಲ್ಲಿ ಮುಖ್ಯವಲ್ಲ. ಆ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇದೆ. ಶವ ಸಂಸ್ಕಾರ ನಡೆಸಿದ್ದಲ್ಲಿ ಜನತೆಗೆ ಯಾವುದೇ ತೊಂದರೆ ಇಲ್ಲ ಎಂಬುದೂ ಗೊತ್ತು. ಆದರೆ, ನನ್ನ ಗಮನಕ್ಕೆ ತರದೆ ವ್ಯವಸ್ಥೆ ಮಾಡಲಾಗಿದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಕೋರೋನಾದಿಂದ ಮೃತಪಟ್ಟ ಮಹಿಳೆಯ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ” ಎಂಬುದಾಗಿ ಖಡಾಖಂಡಿತವಾಗಿ ಶಾಸಕ ಭರತ್ ಶೆಟ್ಟಿ ನುಡಿದಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ನೀಡದ್ದನ್ನು ಮುಂದಿಟ್ಟುಕೊಂಡು ಶೆಟ್ಟಿಯವರ ಅಭಿವೃದ್ಧಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಹೇಳಿಕೆಗಳು ಬರುತ್ತಿವೆ. ಕ್ಷೇತ್ರದ ಪಾಲಕನಾಗಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಶವಸಂಸ್ಕಾರ ನಡೆಸಿದಲ್ಲಿ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಸ್ವತಃ ವೈದ್ಯನಾಗಿರುವ ನನಗೂ ಗೊತ್ತು. ಇಲ್ಲಿರುವುದು ಕೇವಲ ಆಡಳಿತಾತ್ಮಕ ವಿಷಯ ಎಂದವರು ಸ್ಪಷ್ಟಪಡಿಸಿದ್ದಾರೆ.

ಕೋರೋನಾದಂತಹ ಸೂಕ್ಷ್ಮ ವಿಷಯದಲ್ಲೂ ಸ್ಥಳೀಯ ಜನಪ್ರತಿನಿಧಿಗಳ ಜತೆ ಸಂಪರ್ಕಿಸಿದೆ ನಿರ್ಧಾರ ತೆಗೆದುಕೊಂಡ ಪೊಲೀಸ್ ಇಲಾಖೆಗಳ ಬೇಜವಾಬ್ದಾರಿತನ ಇಲ್ಲಿ ಎದ್ದು ಕಾಣುತ್ತಿದೆ.

ಪಚ್ಚನಾಡಿಯಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಂಟ್ವಾಳದ ಕೈಕುಂಜೆಯಲ್ಲಿ ಶವ ಸಂಸ್ಕಾರ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿ ಹಬ್ಬಿ ಕೈಕುಂಜೆಯ ಹಿಂದೂ ರುದ್ರ ಭೂಮಿಯ ಬಳಿಯೂ ಸ್ಥಳೀಯ ಜನರು ಜಮಾಯಿಸಿದರು.

ಆದರೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಜಮಾಯಿಸಿದ ಜನರನ್ನು ಚದುರಿಸಿದರು. ಬಳಿಕ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕೈಕುಂಜೆಯಲ್ಲಿ  ಗುರುವಾರ ರಾತ್ರಿ 2 ಗಂಟೆಯ ಸುಮಾರಿಗೆ ಶವ ಸಂಸ್ಕಾರ ನಡೆಸಿಯೇ ಬಿಟ್ಟಿದ್ದಾರೆ.

Leave A Reply

Your email address will not be published.