ಬಾರ್ ಕಳ್ಳತನಕ್ಕೆ ಹೋದ, ಆಸೆ ತಡೆಯಲಾರದೆ ಕುಡಿದು ಅಲ್ಲೇ ಮಲಗಿದ !

ದಿನ ಕಳೆದಂತೆ ಹೊಸ ಹೊಸ ಕುಡುಕರು ಲೋಕಕ್ಕೆ ಪರಿಚಿತರಾಗುತ್ತಿದ್ದಾರೆ ಮತ್ತು ಅವರು ಒಂದಲ್ಲಾ ಒಂದು ಹೊಸ ಅವಾಂತರ ಸೃಷ್ಟಿಸುತ್ತಿದ್ದಾರೆ.
ಇಲ್ಲೊಬ್ಬ ಮದ್ಯದ ಮರ್ಲ ಲಾಕ್ ಡೌನ್ ಹಿನ್ನೆಲೆಯಲ್ಲಿ ಕುಡಿಯಲು ಮದ್ಯ ಸಿಗಲಿಲ್ಲ ಎಂಬ ಕಾರಣದಿಂದ ಸೀದಾ ಬಾರ್ ವೊಂದಕ್ಕೆ ನುಗ್ಗಿ ವಾರದಿಂದ ಕುಡಿಯದೆ ಭೋರಿಡುಟ್ಟಿದ್ದ ಮನಸ್ಸು ದೇಹವನ್ನು ಒಂದಿಷ್ಟು ತಣಿಸಿಕೊಳ್ಳಲು ಪ್ಲಾನ್ ಮಾಡಿದ್ದಾನೆ.

ಹಾಸನದ ಸಂತೆ ಪೇಟೆಯ ಪ್ರಿಯದರ್ಶಿನಿ ಬಾರ್ ನಲ್ಲಿ ಈ ಘಟನೆ ನಡೆದಿದ್ದು, ಬಾರ್‌ನ ಹೆಂಚು ತೆಗೆದು ಒಳ ಹೊಕ್ಕ ಕಳ್ಳನಿಗೆ ಒಂದೇ ಬಾರಿಗೆ ದಿಗ್ಭ್ರಮೆಯಾಗಿದೆ. ಒಳಗೆ ಕಪಾಟಿನಲ್ಲಿ ಥರಾವರಿ ಬಣ್ಣದ ನೀರುಗಳು. ಹಲವು ಕುಶಲ ವಿನ್ಯಾಸದ ಬಾಟಲ್ಲುಗಳಲ್ಲಿರುವ ದ್ರವವು ಆ ಕತ್ತಲಿನಲ್ಲಿಯೂ ಫಳ ಫಳ ಮಿಂಚುತ್ತಿದ್ದವು. ಯಾವುದು ನೋಡಲಿ, ಎಲ್ಲಿ ನೋಡಲಿ ವರ್ಣಮೇಳವೇ !

ಒಂದೇ ಸಲಕ್ಕೆ ಯಾವುದನ್ನು ತೆಗೆದುಕೊಳ್ಳುವುದು, ಯಾವುದನ್ನು ಬಿಡುವುದು ಎಂದಾಗಿದೆ ಅವನಿಗೆ. ಅದೂ ಬೇಕು, ಇದೂ ಇರ್ಲಿ ಅನ್ನಿಸಿಬಿಟ್ಟಿದೆ. ನಿನ್ನೆ ಮೊನ್ನೆಯವರೆಗೆ ಒಂದು ಪೆಗ್ಗಿಗಾಗಿ ಊರಿಡೀ ಬಲಿ ಬಂದರೂ ಗುಟುಕು ಮಾಲು ಸಿಕ್ಕಿರಲಿಲ್ಲ. ಇವತ್ತು ….ಯಾಹೂ…! ಯಾರಿಗುಂಟು ಯಾರಿಗಿಲ್ಲ …?!!

ಆತ ಇದೇ ಖುಷಿಗೆ ಒಂದು ಪೆಗ್ಗು ಹಾಕಿದ್ದಾನೆ. ದ್ರವ ಗಂಟಲ ಡ್ರೈನೇಜ್ ಪೈಪಿನೊಳಗೆ ಒಳಕ್ಕೆ ಇಳಿದ ಐದೇ ನಿಮಿಷಕ್ಕೆ ತನ್ನ ಕರಾಮತ್ತು ತೋರಿಸಲು ಪ್ರಾರಂಭಿಸಿದೆ. ಅದರೊಳಗೆ ಸುಮಾರು ಎರಡು ಬಾಕ್ಸ್‌ ಮದ್ಯವನ್ನು ಪ್ಯಾಕ್ ಮಾಡಿ ಇಟ್ಟಿದ್ದಾನೆ. ಅಷ್ಟರಲ್ಲಿ ಆತ ಒಂದಷ್ಟು ರಿಲಾಕ್ಸ್ ಆಗಿದ್ದಾನೆ. ಮತ್ತೊಂದು ಪೆಗ್ಗು ಏರಿಸಿದ್ದಾನೆ. ಅತ್ತಿತ್ತ ನೋಡಿದಾಗ ನೆಂಜಿಕೊಳ್ಳಲು ಕುರುಕು ತಿಂಡಿ ಸಹ ದೊರೆತಿದೆ. ಬಹುಶ: ಅಳತೆ ತಪ್ಪಿ ಎರಡೇ ಪೆಗ್ಗು ಅಂದುಕೊಂಡದ್ದು ಜಾಸ್ತಿಯಾಗಿರಬೇಕು.
ಬಾರ್ ಒಳಗೇ ಕಂಠ ಪೂರ್ತಿ ಕುಡಿದು ಕಡೆಗೆ ಎದ್ದೇಳ ಲಾಗದೆ ಅಲ್ಲಿಯೇ ನಿದ್ದೆ ಮಾಡಿದ್ದ. ಮರುದಿನ ಈತ ಏಳುವ ಮೊದಲು ಪೊಲೀಸರು ಎದ್ದು ಫ್ರೆಶ್ ಆಗಿ ಲಾಟಿ ನೈಸು ಮಾಡಿಕೊಂಡು ಬಂದಿದ್ದರು.

ಹಾಗೆ ಬಂಧಿತನಾದವನೇ ಹಾಸನದ ವಲ್ಲಭಾಯಿ ರಸ್ತೆಯ ರೌಡಿ ಶೀಟರ್ ರೋಹಿತ್ ಅಲಿಯಾಸ್ ಕೋಕಿ. ಒಂದು ಸಲ ಒಂದೇ ಒಂದು ಕೆಲಸ ಮಾಡ್ಬೇಕು, ಡ್ಯುಯಲ್ ಟಾಸ್ಕ್ ಮಾಡಬಾರದು ಅನ್ನುವುದು ಅಪರಾಧ ಜಗತ್ತಿನ ಪಾಠ ಪಾಲಿಸದ್ದಕ್ಕೆ ಆತ ಈಗ ಕಂಬಿ ಹಿಂದೆ ಬಂಧಿ.

ನಾಳೆ ಮದ್ದು ಪಂಡಿತರ ಹೊಸ ಕುಡಿತದ ಕಥೆಯೊಂದಿಗೆ ಮತ್ತೆ ಬರ್ತೇನೆ. ಅಲ್ಲಿಯವರೆಗೆ …… ಚಿಯರ್ಸ್ !!

ಸುದರ್ಶನ್ ಬಿ. ಪ್ರವೀಣ್, ಬೆಳಾಲು (ಸಂ)

Comments are closed.