ಲಾಕ್ ಡೌನ್ ಕಳೆದುಕೊಳ್ಳುವ ಎಕಾನಮಿಯು ಮನುಷ್ಯ ಸಂಬಂಧ ಬೆಸೆಯುವ ಕಾರ್ಯದ ಮುಂದೆ ಯಾವ ಲೆಕ್ಕಕ್ಕೆ?

ಲಾಕ್ಡೌನ್ ಅಂದರೆ ಏನೆಂದು ಮೊದಲಿಗೆ ಗೊತ್ತಿರಲಿಲ್ಲ. ಅಂಥದ್ದನ್ನು ನಾವು ಜೀವನದಲ್ಲಿ ಮೊತ್ತಮೊದಲಿಗೆ ಕೇಳುತ್ತಿದ್ದದ್ದು. ಲಾಕ್ಡೌನ್ ಗಿಂತಲೂ ಮೊದಲು ನಮ್ಮ ಕಿವಿಗೆ ಬಿದ್ದದ್ದು ಮೋದಿಯವರು ಹೇಳಿದ ಜನತಾ ಕರ್ಫ್ಯೂ. ಕರ್ಫ್ಯೂ ಅಂದರೆ ಏನೆಂದು ನಮಗೆ ಗೊತ್ತಿತ್ತು. ಏನಪ್ಪಾ ಇದು ಜನತಾ ಕರ್ಫ್ಯೂ ಅಂತ ಅಂದುಕೊಂಡು ನಂತರ ಅರ್ಥಮಾಡಿಕೊಂಡು ಅದನ್ನು ಯಶಸ್ವಿಯಾಗಿ ಆಚರಿಸಿದ್ದೂ ಆಯಿತು.

ಲಾಕ್ ಡೌನ್ ಆದಂತೆ ನಮಗೆ ನಿಧಾನಕ್ಕೆ ಲಾಕ್ಡೌನ್ ಅಂದರೆ ಏನು ಅಂತ ಅರ್ಥ ಆಗುತ್ತಾ ಬಂತು. ಏಕಾಏಕಿ ಮನೆಯಿಂದ ಹೊರಹೋಗುವಂತಿಲ್ಲ. ಎಲ್ಲವೂ ಬಂದ್ ಬೆಳಿಗ್ಗೆ ಎದ್ದು ಅವಸರದಲ್ಲಿ ಹೊರಡುವ ಆಫೀಸು ಇಲ್ಲ ಫ್ಯಾಕ್ಟರಿ ಇಲ್ಲ ಮಕ್ಕಳಿಗೆ ಟಿಫನ್ ಕೊಟ್ಟು ಶಾಲೆಗೆ ಕಳಿಸುವ ಧಾವಂತ ವಿಲ್ಲ. ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ಹೋಗುವ ಅನಿವಾರ್ಯವಲ್ಲ. ಒಂದು ಕ್ಷಣಕ್ಕೆ ಎಲ್ಲರಿಗೂ ರಿಲೀಫ್ ಆದ ಅನುಭವ.

ಆದರೆ ಅಷ್ಟರಲ್ಲೇ ಮತ್ತೊಂದು ಕಡೆಯಿಂದ ಪ್ರಾರಂಭವಾದ ಕಟ್ಟುಪಾಡುಗಳು. ಗುಂಪು ಸೇರುವ ಸಂತೆ ಇಲ್ಲ. ಒಟ್ಟಾಗಿ ಆಚರಿಸುವ ಹಬ್ಬವಿಲ್ಲ. ಸಡಗರದಿ ಜನಜಂಗುಳಿ ನಿರ್ಮಿಸಿ ನಡೆಯುವ ಮದುವೆಯಿಲ್ಲ. ಬೂತದ ಕೋಲ ನಲಿಕೆಯಿಲ್ಲ…. ಸತ್ಯ ಅರ್ಥವಾಗುತ್ತಿದ್ದಂತೆ ತೆಲಿಕೆ ಮುಖದಿಂದ ಮಾಯ.

ಅರೆ, ಇದೇನಿದು ಮನೆಯಲ್ಲಿ ರೆಸ್ಟ್ ಮಾಡೋಣ ಎಂಬ ಖುಷಿಯ ನಡುವೆಯೇ ನಮ್ಮ ನೆಚ್ಚಿನ ಹಬ್ಬ, ಮದುವೆ ಕೋಲ ಇವೂ ಇಲ್ವಲ್ಲಾ ಎಂಬ ಬೇಸರ. ಅಲ್ಲದೆ ಯಾರ ಮನೆಗೂ ಹೋಗಬಾರದು ಅಂತ ನೆಂಟರ ಮನೆಗೂ ! ಈಗ ನಿಜಕ್ಕೂ ಕಿರಿಕಿರಿ ಅಸಹನೆ ಅನ್ನಿಸಲು ಪ್ರಾರಂಭವಾಗಿದೆ.
ಜೀವನಪೂರ್ತಿ ದುಡಿದಿದ್ದಾರೆ ಒಂದಿಷ್ಟು ಮಾಡೋಣ ಎಂಬ ಮಧ್ಯವಯಸ್ಕ ಉದ್ಯೋಗಿಗಳು, ‘ ಹೇ ಮ್ಯಾನ್ ಇನ್ನು ದಿನವೂ ವೀಕೆಂಡ್. ಕಮಾನ್… ಲೆಟ್ಸ್ ಗೋ… ಲೆಟ್ಸ್ ಎಂಜಾಯ್… ” ಅಂತ ಬೈಕಿನ ಹಿಂದೆ ಇನ್ನೊಬ್ಬರನ್ನು ಹತ್ತಿಸಿಕೊಂಡು ಹೊರಟವರನ್ನು ಪಕ್ಕದ ಬೀದಿಯಲ್ಲಿ ಪೊಲೀಸರು ತಡೆದಾಗಲೇ ವಾಸ್ತವ ಅರಿವಾದದ್ದು : ಮುಂದಕ್ಕೆ ಹೋಗುವ ದಾರಿ ಲಾಕ್ ಆಗಿದೆ ಎಂದು !!

ನಿಧಾನವಾಗಿ ಮತ್ತು ಸ್ಪಷ್ಟವಾಗಿ ಈಗ ಅರಿವಾಯಿತು, ಲಾಕ್ ಡೌನ್ ಅಂದರೆ ಬೇರೆ ಏನೂ ಅಲ್ಲ ಅದು ಸ್ವಾತಂತ್ರ್ಯದ ಸ್ಪಷ್ಟ ಹರಣ ಎಂದು. ಎಷ್ಟು ದಿನ ಬಯಸಿ ಬಯಸಿದರೂ ಸಿಗದ ರಜೆ ಈಗ ಏಕಾಏಕಿ 21 ದಿನಗಳು ದೊರಕಿತ್ತು. ಯಾರಿಗುಂಟು ಯಾರಿಗಿಲ್ಲ ಅಂತ ಮೊದ ಮೊದಲಿಗೆ ಅಂದುಕೊಂಡ ನಾವೇ ಇದ್ ಯಾವಾಗ ಮುಗಿಯುತ್ತದೆ ಎಂದು ದಿನ ಲೆಕ್ಕ ಮಾಡುತ್ತಿದ್ದೇವೆ. ಆದರೆ ದಿನ ಲೆಕ್ಕಕ್ಕಿಂತ ವೇಗವಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಆದುದರಿಂದ ನಮ್ಮ ರಜೆ ಮುಂದುವರಿಯುವ ಎಲ್ಲ ಲಕ್ಷಣಗಳಿವೆ.

ಈ ರಜೆ ನಮಗೆ ಬೇಡವಾದರೂ ಸರಿ, ಈಗ ದೇಶವಾಸಿಗಳು ಉಳಿಯಬೇಕಾದರೆ ಲಾಕ್ ಡೌನ್ ಅನಿವಾರ್ಯ. ಈ ಲಾಕ್ಡೌನ್ ಅನ್ನು ನಮ್ಮ ಜನರು ಯಾವೆಲ್ಲ ರೀತಿಯಿಂದ ಸದುಪಯೋಗಪಡಿಸಿಕೊಳ್ಳುವ ಇದ್ದಾರೆ ಎಂಬುದೇ ನಮ್ಮ ಇವತ್ತಿನ ಲೇಖನದ ವಸ್ತು.

ದಕ್ಷಿಣ ಕನ್ನಡದ ಜನರು ಕೃಷಿಪ್ರಧಾನ ಸಂಸ್ಕೃತಿಯಿಂದ ಬಂದವರು. ಹೆಚ್ಚಿನ ಮಂದಿಗೆ ಎಕರೆಗಟ್ಟಲೆ ಕೃಷಿ ಭೂಮಿ ಇಲ್ಲದೆ ಹೋದರೂ ಒಂದು ದರ್ಖಾಸ್, ಹತ್ತು ಸೆಂಟ್ಸ್, 5 ಸೆಂಟ್ಸ್ ಇರುತ್ತದೆ. ಇಲ್ಲದೆ ಇದ್ದವರೂ ಕೂಡ ತಮ್ಮ ಮನೆ ಮುಂದಿನ ಜಾಗದಲ್ಲಿ ಒಂದಷ್ಟು ತೋಟಗಾರಿಕಾ ಚಟುವಟಿಕೆ ನಡೆಸಿರುತ್ತಾರೆ. ಪ್ರಪಂಚದಲ್ಲಿ ಯಾವುದೇ ಒಂದು ವೃತ್ತಿ ಬಿಡುವಿನ ಸಮಯವನ್ನು ಕಳೆಯಲು, ನಿವೃತ್ತಿಯ ನಂತರ ಸಮಯ ತಳ್ಳಲು, ಮೈಮನಸ್ಸುಗಳನ್ನು ಉಲ್ಲಾಸ ವಾಗಿಟ್ಟುಕೊಳ್ಳಲು, ಆರೋಗ್ಯ ಭಾಗ್ಯ ಬೆಳೆಸಿಕೊಳ್ಳಲು ಇದ್ದರೆ ಅದು ಕೃಷಿ ಚಟುವಟಿಕೆ. ಇವತ್ತು ಮಕ್ಕಳ ಜತೆ ದೊಡ್ಡವರು ತೋಟಕ್ಕೆ ಇಳಿದಿದ್ದಾರೆ. ಅಲ್ಲಲ್ಲಿ ಕೆಲವರು ಮನೆಯಿಂದ ದೂರದಲ್ಲಿ ಅಟ್ಟಣಿಗೆಯ ಮನೆ ಮಾಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಾ, ಏಕಾಂತದೊಂದಿಗೆ ಪರಿಸರ ವೀಕ್ಷಣೆಯಲ್ಲಿ ತೊಡಗಿದ್ದಾರೆ. ಮತ್ತೆ ಕೆಲವರು ಮಕ್ಕಳಿಗಾಗಿ ಪುಟಾಣಿ ಬಿದಿರಿನ ಪುಟಾಣಿ ಗೂಡು ಕಟ್ಟಿ ಕೊಟ್ಟಿದ್ದಾರೆ. ಇವತ್ತು ಪೇಟೆಯಲ್ಲಿ ಪೂರ್ತಿ ಹುದುಗಿ ಹೋದ ಕಾರ್ಪೊರೇಟ್ ಮನಸ್ಸುಗಳೂ ಕೂಡಾ ಟಿವಿ ಮೊಬೈಲ್ ತ್ಯಜಿಸಿ ಕನಿಷ್ಟ ಪಕ್ಷ ಅಂಗಳಕ್ಕಿಳಿದಿದ್ದಾರೆ. ದಿನವೂ ಮನೆಯಲ್ಲೇ ಇರುವ ಹೆಂಗಸರ ಕಷ್ಟವನ್ನು ಗಂಡಸರು ವಾರಗಟ್ಟಲೆ ಮನೆಯಲ್ಲಿದ್ದು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಮಧ್ಯಾಹ್ನ , ರಾತ್ರಿ ಒಟ್ಟಿಗೆ ಸಹಭೋಜನ ಮಾಡುತ್ತಿದ್ದಾರೆ. ಒಂದೊಮ್ಮೆ ಮನೆ ಬಿಟ್ಟು ಹೊರಡದ ವ್ಯಕ್ತಿಗಳಿಗೂ ( ಲಾಕ್ ಇನ್ ಆಗಿರುವವರು ) ಕೋರೋನಾ ತಂದ ಲಾಕ್ ಡೌನ್ ಸ್ವಾತಂತ್ರ್ಯದ ಮಹತ್ವ ಕಲಿಸಿದೆ. ಲಾಕ್ ಡೌನ್ ಕಳೆದುಕೊಳ್ಳುವ ಇಕಾನಮಿಯು ಮನುಷ್ಯ ಸಂಬಂಧ ಬೆಸೆಯುವ ಈ ಕಾರ್ಯದ ಮುಂದೆ ಅದ್ಯಾವ ಮೂಲೆಗೆ ?

ನಿಶ್ಮಿತಾ ಕೊರೆಕ್ಕಾಯ

Comments are closed.