“ಉಪ್ಪಿನಂಗಡಿ ವ್ಯಕ್ತಿಗೆ ಸೋಂಕು ಹರಡಲು ಜಿಲ್ಲಾಡಳಿತವೇ ಕಾರಣ ” ಯು. ಟಿ ತೌಸೀಫ್ ಹೇಳಿಕೆ | ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಶಾಸಕ ಸಂಜೀವ ಮಠಂದೂರು
ಇವತ್ತು ಉಪ್ಪಿನಂಗಡಿಯಲ್ಲಿ ಕೊರೋನಾ ಪಾಸಿಟಿವ್ ಆದ ವ್ಯಕ್ತಿಯ ಬಗ್ಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ.ತೌಸೀಫ್ ಅವರು ಹೇಳಿಕೆ ನೀಡಿದ್ದಾರೆ.
ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಅವರು, ” ದೆಹಲಿಗೆ ಹೋಗಿ ಬಂದಿದ್ದ ಉಪ್ಪಿನಂಗಡಿಯ ಕೋರೋನಾ ಪಾಸಿಟಿವ್ ಆಗಿರುವ ದಿಲ್ಲಿಗೆ ಹೋಗಿ ಬಂದಿದ್ದ ಈ ಯುವಕನನ್ನು ಮುಂಜಾಗೃತ ಕ್ರಮವಾಗಿ ಸರಕಾರ ದೇರಳಕಟ್ಟೆಯ ಫ್ಲಾಟ್‌ವೊಂದರಲ್ಲಿ ಕೊರಂಟೈನ್‌ನಲ್ಲಿಟ್ಟಿತ್ತು. ಆದರೆ ಈ ಒಂದೇ ಫ್ಲಾಟ್‌ನಲ್ಲಿ ಹಲವರಿದ್ದು, ಉಪ್ಪಿನಂಗಡಿಯ ವ್ಯಕ್ತಿಯಿದ್ದ ರೂಂನಲ್ಲೂ ಇಬ್ಬರಿದ್ದರು ಮತ್ತು ಒಂದೇ ಸ್ನಾನಗೃಹ, ಶೌಚಾಲಯ ಉಪಯೋಗಿಸುತ್ತಿದ್ದರಂತೆ. ಈ ಬಗ್ಗೆ ಆಕ್ಷೇಪಿಸಿದ್ದ ಆ ವ್ಯಕ್ತಿ, ‘ಬೇರೆಯವರಿಂದ ನನಗೆ ಕೊರೋನ ಹರಡುವ ಸಾಧ್ಯತೆಯಿದೆ. ಆದ್ದರಿಂದ ನನ್ನನ್ನು ಪ್ರತ್ಯೇಕ ರೂಂಗೆ ಸ್ಥಳಾಂತರಿಸಬೇಕು’’ ಎಂದು ಜಿಲ್ಲಾಧಿಕಾರಿ, ಡಿವೈಎಸ್ಪಿಯವರಿಗೆ ಮನವಿ ಮಾಡಿದ್ದಾಗಿ ನನಗೆ ತಿಳಿಸಿದ್ದರು. ಈಗ ಉಪ್ಪಿನಂಗಡಿಯ ಈ ವ್ಯಕ್ತಿಗೆ ಸೋಂಕು ತಗಲಲು ಜಿಲ್ಲಾಡಳಿತವೇ ನೇರ ಹೊಣೆ ” ಎಂಬ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಪುತ್ತೂರಿನ ಸ್ಥಳೀಯ ಶಾಸಕ ಸಂಜೀವ ಮಠಂದೂರು ಅವರನ್ನು ಹೊಸ ಕನ್ನಡ ಪತ್ರಿಕೆಯು ಸಂಪರ್ಕಿಸಿ ಘಟನೆಯ ಬಗ್ಗೆ ಪ್ರತಿಕ್ರಿಯೆ ಕೇಳಿತ್ತು. ಪತ್ರಿಕೆಗೆ ಮಾತನಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು, ” ಈ ಕಾಂಗ್ರೆಸ್ ನಾಯಕನ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿದ್ದು ಇದರಿಂದ ಕೋರೋನಾ ಹೋರಾಟಕ್ಕೆ ತೀವ್ರ ಹಿನ್ನಡೆ ಆಗಲಿದೆ ” ಎಂದಿದ್ದಾರೆ.
” ಈಗ ಉಪ್ಪಿನಂಗಡಿಯಲ್ಲಿ ಕೋರೋನಾ ಪಾಸಿಟಿವ್ ಆಗಿರುವ ವ್ಯಕ್ತಿಯು ವೃತ್ತಿಯಲ್ಲಿ ಓರ್ವ ವಕೀಲರಾಗಿದ್ದು ಸಮಾಜದ ಒಬ್ಬ ಶಿಕ್ಷಿತ ಮತ್ತು ಜವಾಬ್ದಾರಿಯುತ ವ್ಯಕ್ತಿಯಾಗಿದ್ದಾರೆ. ಅವರಿಗೆ ಕೊರೋನಾ ರೋಗದ ಭೀಕರತೆ ಮತ್ತು ಅದು ಹರಡುವ ವಿಧಾನದ ಬಗ್ಗೆ ಸಂಪೂರ್ಣ ಜ್ಞಾನವಿದೆ. ಅಂತಹ ವ್ಯಕ್ತಿ ಒಂದೊಮ್ಮೆ ತಮ್ಮನ್ನು ಇತರ ಕ್ವಾರಂಟೈನ್ ಜನರ ಜತೆ ಒಂದೇ ರೂಮಿನಲ್ಲಿ ಕೂಡಿಟ್ಟಿದ್ದರೆ, ಅವರು ಈ ಹಿಂದೆಯೇ ಸರ್ಕಾರಕ್ಕೆ ತಿಳಿಸುತ್ತಿದ್ದರು. ಇಷ್ಟು ದಿನ ಕ್ವಾರಂಟೈನ್ ಆಗಿದ್ದ ಈ ವ್ಯಕ್ತಿಯನ್ನು ನಿಯಮಗಳ ಪ್ರಕಾರ ಪ್ರತಿದಿನವೂ ವೈದ್ಯರುಗಳು ಭೇಟಿಯಾಗುತ್ತಾರೆ. ಕ್ವಾರಂಟೈನ್ ಆಗಿರುವ ವ್ಯಕ್ತಿಗಳಿಗೆ ಮೊಬೈಲು ಇಂಟರ್ನೆಟ್ ಬಳಸುವ ಹಕ್ಕು ಇದ್ದೇ ಇರುತ್ತದೆ. ಓರ್ವ ವಕೀಲರಾಗಿ ಅವರು ಯಾರನ್ನು ಬೇಕಾದರೂ ಸಂಪರ್ಕಿಸಿ ತಮ್ಮ ಕಷ್ಟ ಹೇಳಿಕೊಂಡಿರಬಹುದಿತ್ತು. ಮಾಧ್ಯಮಗಳನ್ನು ಈ ಹಿಂದೆಯೇ ಸಂಪರ್ಕಿಸಬಹುದಿತ್ತು. ಈ ವ್ಯಕ್ತಿ ಇವ್ಯಾವುದನ್ನೂ ಮಾಡಿಲ್ಲ ಅಂದಮೇಲೆ ಅವರನ್ನು WHO ನಿರ್ದೇಶಿಸಿದ ರೀತಿಯಲ್ಲಿಯೇ ಕ್ವಾರಂಟೈನ್ ನಲ್ಲಿ ಇರಿಸಿದ್ದು ಸ್ಪಷ್ಟ. ” ಎಂದು ಪುತ್ತೂರು ಶಾಸಕ ಶ್ರೀ ಸಂಜೀವ ಮಠಂದೂರು ಅವರು ಹೇಳಿಕೆ ನೀಡಿದ್ದಾರೆ.
” ಕಾಂಗ್ರೆಸ್ ನಾಯಕರುಗಳು ಇಂತಹ ಕಠಿಣ ಪರಿಸ್ಥಿತಿಯಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಇವರಿಗೆ ನಮ್ಮ ಜನರ ಆರೋಗ್ಯದ ಮೇಲೆ ಒಂದಿಷ್ಟು ಕಾಳಜಿ ಇದ್ದರೆ, ಇಂತಹ ಬೇಜವಾಬ್ದಾರಿತನದ ಹೇಳಿಕೆ ಕೊಡುವುದು ಬಿಟ್ಟು ಆಯಾ ಪ್ರದೇಶಗಳಲ್ಲಿ ಜನರು ಲಾಕ್ ಡೌನ್ ಪಾಲಿಸುವಂತೆ ಜನಸಮುದಾಯವನ್ನು ಪ್ರೋತ್ಸಾಹಿಸುತ್ತಿದ್ದರು. ಈಗ ಇಂತಹ ನಾಯಕರುಗಳ ಮಾತು ಕೇಳಿಕೊಂಡು ಜನರು ಲಾಕ್ ಡೌನ್ ಗೆ ತಮ್ಮ ಅಸಹಕಾರ ತೋರಿಸುವ ಸಂಭವ ಇದೆ. ಮನುಷ್ಯನ ಜೀವನ ಜೊತೆ ಚೆಲ್ಲಾಟವಾಡುವ ಇಂತಹ ಹೇಳಿಕೆಗಳನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇಂತಹಾ ನಾಯಕರು ಇನ್ನು ಮುಂದಾದರೂ, ಬೇಜವಾಬ್ದಾರಿ ಹೇಳಿಕೆ ನೀಡುವುದು ಬಿಟ್ಟು ಸಮಾಜಕ್ಕೆ ತಾವೇನು ಕೊಡುಗೆ ನೀಡುತ್ತಿದ್ದೇವೆ ಎಂದು ಮಾಡಿ ತೋರಿಸಲಿ ” ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
Comments are closed.