“ಕೋವಿಡ್ ಟೆಸ್ಟ್ ಮಾಡಿಸಿ ಕೊಂಡೇ ಮನೆಗೆ ಕಾಲಿಡಿ”- ಎಂದು ಗಂಡನನ್ನು ಮನೆಯೊಳಗೆ ಸೇರಿಸದ ಪತ್ನಿ

ಅಮರಾವತಿ (ಆಂಧ್ರ ಪ್ರದೇಶ) : ಕೋವಿಡ್ ಟೆಸ್ಟ್ ಮಾಡಿಸಿಕೊಂಡ ನಂತರ ಮನೆಯೊಳಗೆ ಕಾಲಿಡುವಂತೆ ಹೇಳಿ ಗಂಡನನ್ನೇ ಮನೆಗೆ ಸೇರಿಸದ ಘಟನೆ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ. 

ಲಾಕ್ ಡೌನ್ ನ ಕಾರಣದಿಂದ ಪತಿ ನೆಲ್ಲೂರಿನಲ್ಲಿರುವ ತನ್ನ ಚಿನ್ನದ ಅಂಗಡಿಯ ಪುಟಾಣಿ ರೂಮಿನಲ್ಲಿ ಉಳಿದುಕೊಂಡಿದ್ದರು. ಒಂದು ತಿಂಗಳಿಂದ ಮನೆಯಿಂದ ದೂರವಿದ್ದ ಗಂಡ ಕಳೆದ ಬುಧವಾರ ಹೇಗೋ ಮನೆಗೆ ಬಂದಿದ್ದ. ಆದರೆ ಮನೆ ಬಾಗಿಲು ಬಡಿಯುವಾಗ ಆತನಿಗೆ ಅಚ್ಚರಿ ಕಾದಿತ್ತು. ಮನೆ ಬಾಗಿಲು ತೆಗೆಯಲು ಪತ್ನಿ ನಿರಾಕರಿಸುತ್ತಾಳೆ.

ಆಂಧ್ರದ ನೆಲ್ಲೂರು ಜಿಲ್ಲೆಯ ವೆಂಕಟಗಿರಿಯಲ್ಲಿ ಈ ಘಟನೆ ನಡೆದಿದ್ದು ಲಾಕ್ ಡೌನ್ ಹಿನ್ನೆಲೆಯಲ್ಲಿ ಪತಿ ಪರವೂರಿನಿಂದ ಬಂದವನಾದ ಕಾರಣ ಮನೆಗೆ ಸೇರಿಸಿಕೊಳ್ಳದ ಪತ್ನಿ ಟೆಸ್ಟ್ ಮಾಡಿಕೊಂಡು ನಂತರ ಬರುವಂತೆ ಪಟ್ಟುಹಿಡಿದಿದ್ದಾಳೆ. ಗಂಡ ಎಷ್ಟೇ ಬೇಡಿಕೊಂಡರೂ ಆಕೆ ಮನಸ್ಸು ಬದಲಿಸಿಲ್ಲ. ಆ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾಳೆ.

ಗಂಡ ಅನಿವಾರ್ಯವಾಗಿ ಪಕ್ಕದ ಅಂಗನವಾಡಿಯಲ್ಲಿ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವ್ಯಕ್ತಿಯನ್ನು ಆರೋಗ್ಯ ಸಿಬ್ಬಂದಿ ಪರೀಕ್ಷೆ ನಡೆಸಿದ್ದು ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ತದನಂತರ ಆಕೆ ಗಂಡನನ್ನು ಮನೆಗೆ ಸೇರಿಸಿಕೊಂಡಿದ್ದಾಳೆ. ಈ ಬಗ್ಗೆ ಪತ್ನಿ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ತನ್ನ ಚಿಕ್ಕ ಮಕ್ಕಳು ಮತ್ತು ನಮ್ಮ ಮನೆಯ ಅಕ್ಕಪಕ್ಕದವರ ಹಿತಕ್ಕಾಗಿ ಗಂಡನನ್ನು ಪರೀಕ್ಷೆ ಮಾಡಿಸಿಕೊಂಡು ಮನೆಗೆ ಬರುವಂತೆ ಒತ್ತಾಯಿಸಿದ್ದಾಗಿ ಹೇಳಿದ್ದಾಳೆ.

ಗೃಹಿಣಿಯೊಬ್ಬಳ ಜಾಗೃತಿಗೆ ಅಮರಾವತಿ ಹೆಮ್ಮೆಪಡುತ್ತಿದೆ.

Comments are closed.