ತುಂಬೆ | ಓರ್ವ ಕೊರೋನ ಪಾಸಿಟಿವ್ | ಇದ್ದಕ್ಕಿದ್ದಂತೆ ಸ್ಥಬ್ದವಾದ ತುಂಬೆ, ಬೀದಿಯಲ್ಲಿದ್ದವರೂ ಮನೆಯೊಳಗೆ

ಬಂಟ್ವಾಳ, ಎ.4: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ನಿವಾಸಿಯೊಬ್ಬರಿಗೆ ಕೋವಿಡ್ –19 ಸೋಂಕು ಇರುವುದು ದೃಢಪಟ್ಟಿದೆ ಎಂಬ ಮಾಹಿತಿ ಬಂದಿದೆ.

ಈ ವ್ಯಕ್ತಿ ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ತೆರಳಿದ್ದ. ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದ ಈ ಯುವಕ ತುಂಬೆಯವನಾಗಿದ್ದು ಮಾ.21ರಂದು ದೆಹಲಿಯಿಂದ ನಿಝಾಮುದ್ದೀನ್ ರೈಲಿನಲ್ಲಿ ಮಂಗಳೂರಿಗೆ ಬಂದಿದ್ದ ಎನ್ನಲಾಗಿದೆ.

ಮರ್ಕಜ್ ನಿಝಾಮುದ್ದೀನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವು ಮಂದಿಗೆ ಕೊರೋನ ಸೋಂಕು ತಗುಲಿದ ಮಾಹಿತಿಯ ಬಳಿಕ ಅಲ್ಲಿಂದ ಬಂದ ತಬ್ಲಿಖಿ ಪ್ರಯಾಣಿಕರು ಪ್ರಯಾಣಿಸಿದ ರೈಲಿನ ಪ್ರಯಾಣಿಕರನ್ನು ಟ್ರೇಸ್ ಮಾಡುವ ಕಾರ್ಯ ನಡೆದಿತ್ತು. ಅಂತೆಯೇ ಅದ ದಿನ ನಿಝಾಮುದ್ದೀನ್ ರೈಲು ಮೂಲಕ ಮಂಗಳೂರಿಗೆ ಬಂದ ಈ ಯುವಕನನ್ನು ಕೂಡಾ ಪ್ರತ್ಯೇಕಿಸಿ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಅಲ್ಲದೆ ಆತನ ಗಂಟಲ ಸ್ರಾವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.‌ ಇಂದು ಅದರ ವರದಿ ಬಂದಿದ್ದು ವರದಿ ಪಾಸಿಟಿವ್ ಎಂದು ಹೇಳಲಾಗಿದೆ. ಆದರೆ ಅಧಿಕೃತವಾಗಿ ಈ ಬಗ್ಗೆ ಪ್ರಕಟಣೆ ಹೊರಬೀಳಬೇಕಿದೆ.

ಈಗಾಗಲೇ ತುಂಬೆ ಗ್ರಾಮವನ್ನು ಕಟ್ಟೆಚ್ಚರದಲ್ಲಿ ಇರುವಂತೆ ಸರಕಾರದಿಂದ ಮಾಹಿತಿ ಹೋಗಿದ್ದು, ಮೈಕುಗಳು ಎಲ್ಲರನ್ನೂ ಮನೆಯಲ್ಲೇ ಇರುವಂತೆ ಕಿರಿಚುತ್ತಿವೆ. ಯಾರೂ ಮನೆ ಬಿಟ್ಟು ಹೋಗದಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಸ್ವಲ್ಪ ಮಟ್ಟಿಗಿನ ಸಂಚಾರ ಇದ್ದ ತುಂಬೆ, ಈ ಸೋಂಕಿತ ವ್ಯಕ್ತಿಯ ಸುದ್ದಿ ಬಂದೊಡನೆ ಒಮ್ಮಿಂದೊಮ್ಮೆಗೆ ಸ್ಥಬ್ದವಾಗಿದೆ. ಇದ್ದಕ್ಕಿದ್ದಂತೆ ಜನರು ಮನೆಯೊಳಗೆ ಸೇರಿಕೊಂಡಿದ್ದಾರೆ.

ಈಗ ಸೋಂಕಿಗೆ ಒಳಗಾದ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಲ್ಲರ ಪಟ್ಟಿ ಜಿಲ್ಲಾಡಳಿತದ ಬಳಿ ರೆಡಿಯಾಗಿದ್ದು ಈಗ ಅವರನ್ನು ಕಟ್ಟೆಚ್ಚರದಲ್ಲಿ ಕಾಯುವಂತೆ ತುಂಬೆಯ ಆರೋಗ್ಯ ಕಾರ್ಯಕರ್ತರಿಗೆ ಸೂಚಿಸಲಾಗಿದೆ.

Leave A Reply

Your email address will not be published.