ಲಾರಿ ಡ್ರೈವರ್ ನ ಮಾರುವೇಷದಲ್ಲಿ ಹೋಗಿ ಗಡಿಯಲ್ಲಿ ವಸೂಲಿ ವೀರರನ್ನು ಹಿಡಿದ ಎಸ್ಪಿ ಯಾರು ಗೊತ್ತಾ ?!
ಆಗ ಎಸ್ ಪಿ ಸಾಂಗ್ಲಿಯಾನ ! ಈಗ ಎಸ್ ಪಿ ರವಿ ಚೆನ್ನಣ್ಣನವರ್ !!
ಅವತ್ತಿನ ಎಸ್ ಪಿ ಸಾಂಗ್ಲಿಯಾನ ಅವರಂತೆಯೇ ಮಾರುವೇಷದಲ್ಲಿ ಹೋಗಿ ಬೆಂಗಳೂರು ಗ್ರಾಮಾಂತರ ಎಸ್ ಪಿ ರವಿ ಚೆನ್ನಣ್ಣನವರ್ ಅವರು ಇವತ್ತು ಸುದ್ದಿಯಲ್ಲಿದ್ದಾರೆ.
ಅತ್ತಿಬೆಲೆಯಲ್ಲಿರುವ ಕರ್ನಾಟಕ – ತಮಿಳುನಾಡು ಗಡಿಭಾಗ ಚೆಕ್ಪೋಸ್ಟ್ನಲ್ಲಿ ಮೊನ್ನೆ ರಾತ್ರಿ ಥೇಟ್ ಸರ್ದಾರ್ಜಿ ಥರ ಮುಂಡಾಸು ಬಿಗಿದುಕೊಂಡು, ಪ್ರಪಂಚದ ಇವತ್ತಿನ ಫೇವರಿಟ್ ಕಾಸ್ಟ್ಯೂಮ್ ಆದ ಮಾಸ್ಕ್ ಹಾಕಿಕೊಂಡು ಕುಳಿತ ಚಾಲಕ ಇದ್ದ ಲಾರಿಯೊಂದು ಬಂದಿದೆ. ಯಥಾ ಪ್ರಕಾರ ವಿವೇಕ್ ಎಂಬಾತ ಅವರು ಬಂದ ಲಾರಿಯನ್ನು ತಡೆದು ನಿಲ್ಲಿಸಿ,” ಟೆಂಪರರಿ ಲೈಸನ್ಸ್ ಬೇಕಾಗುತ್ತದೆ. 500 ರೂಪಾಯಿ ಕೊಡಪ್ಪಾ ” ಅಂದಿದ್ದಾನೆ. “ಯಾಕೆ ಸಾರ್ ದುಡ್ಡು ?” ಅಂತ ಮಾರು ವೇಷದಲ್ಲಿದ್ದ ಚೆನ್ನಣ್ಣನವರ್ ಅವರು ವಿಧೇಯರಾಗಿ ಕೇಳಿದ್ದಾರೆ. ಸಾಹೇಬ್ರು ಎಲ್ಲರತ್ರ ಕಲೆಕ್ಟ್ ಮಾಡಲು ಹೇಳವ್ರೆ. ಇಲ್ಲಾಂದ್ರೆ ಬಿಡಲ್ಲ. ತೆಗಿ ತೆಗಿ ” ಎಂದು ಆತ ಅವಸರಿಸಿದ್ದಾನೆ.
ತೆಗಿ ಅಂದ ಕೂಡಲೇ ಚೆನ್ನಣ್ಣನವರ್ ಅವರು ಮುಖದ ಮಾಸ್ಕ್ ಮತ್ತು ತಲೆಯ ಮುಂಡಾಸು ತೆಗೆದಿದ್ದಾರೆ ! ಹಾಗೆ ಭ್ರಷ್ಟರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಹಾಕಿದ್ದಾರೆ.
ಅತ್ತಿಬೆಲೆ ಚೆಕ್ಪೋಸ್ಟ್ನಲ್ಲಿ ತಮಿಳುನಾಡಿನ ಕಡೆಯಿಂದ ಕರ್ನಾಟಕದ ಕಡೆ ಬರುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸಲಾಗುತ್ತಿತ್ತು. ಅದರ ಸುಳಿವು ಸಿಕ್ಕಿ ಲಾರಿ ಚಾಲಕನ ಮಾರುವೇಷದಲ್ಲಿ ಹೋಗಿದ್ದಾರೆ ಬೆಂಗಳೂರು ಗ್ರಾಮಾಂತರ ಎಸ್ಪಿ ಆಗಿರುವ ಗದಗ್ ಮೂಲದ ರವಿ ಡಿ ಚನ್ನಣ್ಣನವರ್!
ಈ ವಸೂಲಿಯ ಡೈರೆಕ್ಟರುಗಳಾದ ಆರ್ಟಿಓ ಬ್ರೇಕ್ ಇನ್ಸ್ಪೆಕ್ಟರ್ಗಳಾದ ಕರಿಯಪ್ಪ ಮತ್ತು ಜಯಣ್ಣ ಅವರ ನಿರ್ದೇಶನದಂತೆ ಹೋಮ್ ಗಾರ್ಡ್ ವಿವೇಕ್ ಈ ವಸೂಲಾತಿ ಮಾಡುತ್ತಿದ್ದ. ಈಗ ಈ ಮೂವರನ್ನೂ ಬಂಧಿಸಲಾಗಿದೆ. ಇವರಿಂದ 12,350 ರೂಪಾಯಿ ವಶಪಡಿಸಲಾಗಿದೆ.
ಇಬ್ಬರು ಬ್ರೇಕ್ ಇನ್ಸ್ಪೆಕ್ಟರ್ ಗಳ ಬ್ರೇಕು ಕಿತ್ತು ಹೋಗಿದೆ. ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಶಿವಮೂರ್ತಿ ನಿನ್ನೆ ಶುಕ್ರವಾರ ಆದೇಶ ಹೊರಡಿಸಿದ್ದಾರೆ.