ನೆರಿಯ ಗ್ರಾಮದ ಕೊಲ್ನ ನದಿಗೆ ವಿಷ ಬೆರೆಸಿ ಮೀನುಗಳ ಮಾರಣ ಹೋಮ ನಡೆಸಿದ ದುಷ್ಕರ್ಮಿಗಳು ಅರೆಸ್ಟ್

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಕೊಲ್ನ ನದಿ ಬದಿಯಲ್ಲಿ ಯಾರೋ ದುಷ್ಕರ್ಮಿಗಳ ದುರಾಸೆಗೆ ಮೀನುಗಳು ವಿಲ ವಿಲ ಒದ್ದಾಡಿ ಪ್ರಾಣಬಿಟ್ಟ ಸುದ್ದಿ ನೀವು ಓದಿದ್ದೀರಿ. ಅಲ್ಲಿ ನದಿಗೆ ಮೀನು ಹಿಡಿಯಲು ಅಡಿಕೆ ಗಿಡಕ್ಕೆ, ಕೊಳೆ ರೋಗಕ್ಕೆ ಬಳಸುವ ಮೈಲುತುತ್ತು ಪದಾರ್ಥ ಬೆರೆಸಿದ್ದರಿಂದ ಸಾವಿರಾರು ಮೀನುಗಳ ಮಾರಣ ಹೋಮ ನಡೆದಿತ್ತು. ಸುಮಾರು ಎರಡು ಕಿಲೋಮೀಟರ್ ದೂರದವರೆಗೆ ಮೀನುಗಳು ಸಾವನ್ನಪ್ಪಿದ್ದವು. ಇದೇ ವಿಷಪೂರಿತ ನೀರನ್ನು ಕುಡಿದು ನವಿಲುಗಳು ಕೂಡಾ ಸಾವನ್ನಪ್ಪಿದ್ದು ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ಸುತ್ತ ಮುತ್ತಲ ಅಣಿಯೂರು, ಪಿಲಿಕಳ, ನೆರಿಯಾ, ಉಂಬಾಜೆ ಮುಂತಾದ ಊರಿನವರು ತಮ್ಮ ಜೀವನಾವಶ್ಯಕತೆಗಾಗಿ ಇದೇ ನೀರನ್ನು ಅವಲಂಬಿಸಿದ್ದರು. ಈ ನದೀ ನೀರು ಮಲಿನತೆ ಮತ್ತು ಮೀನು ಮರಣದ ಕುರಿತು ಸೂಕ್ತ ತನಿಖೆಯನ್ನು ನಡೆಸಿ ಆರೋಪಿಗಳ ಪತ್ತೆ ಹಚ್ಚುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು. ಅಂತೆಯೇ ಅರಣ್ಯ ಇಲಾಖೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ಧರ್ಮಸ್ಥಳದ ಉಪ ನಿರೀಕ್ಷಕರಾದ ಓಡಿಯಪ್ಪನವರ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಆರೋಪಿಗಳಾದ ನೆರಿಯದ ಹಟ್ಟಾಡಿಯ ನಿವಾಸಿಗಳಾದ ರಫೀಕ್, ಅಶ್ರಫ್ ಮತ್ತು ಹನೀಫ್ ನನ್ನು ಬಂಧಿಸಿದ್ದಾರೆ.