ಬೆಳ್ಳಾರೆ | ಕುಡುಕರ ಕಷ್ಟ ನೋಡಿ ಗೋಂಕುದ ಗಂಗಸರ ಮಾರಲು ಹೊರಟ ವ್ಯಕ್ತಿ ಆರೆಸ್ಟ್ !
ಬೆಳ್ಳಾರೆ : ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿರುವ ಕಾರಣ ಮದ್ಯದಂಗಡಿಗಳು ಬಂದಾಗಿದೆ. ಕುಡಿಯಲು ಮದ್ಯವಿಲ್ಲದೆ ದಿಕ್ಕೇ ತೋಚದಂತಾದ ಜನರು ತಮ್ಮ ಎಂದಿನ ಸಾಂಪ್ರದಾಯಿಕ ರಸಾಯನ ಪದ್ಧತಿಗೆ ಮರಳಿದ್ದಾರೆ. ಹೀಗೆ ತಮ್ಮ ಮನೆಯಲ್ಲಿ ಅಥವಾ ಪಕ್ಕದ ಗೇರು ಹಾಡಿಯಲ್ಲಿ ಸಿಗುವ ಗೇರು ಹಣ್ಣಿನ ಸಾರಾಯಿ ತಯಾರಿಕೆಗೆ ಮುಂದಾದ ವ್ಯಕ್ತಿಯೊಬ್ಬರು ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಳ್ಳಿಗಳಲ್ಲಿ ಗೇರು ಹಣ್ಣು ಬಿಡುವ ಸಂದರ್ಭದಲ್ಲಿ ಗೇರು ಹಣ್ಣುಗಳನ್ನು ಬೇಯಿಸುವುದು ಮಾಮೂಲು ಮತ್ತು ಅದೊಂದು ರೀತಿ ಸ್ವಾವಲಂಬನೆ ! ಎಲ್ಲೂ ಮಾಲು ಸಿಗದ ಸಮಯ, ತಾವು ಬೇಯಿಸಿ ಮನೆಯಲ್ಲಿಯೇ ಇಟ್ಟು ಕುಡಿಯುತ್ತಿದ್ದರೆ, ಯಾರಿಗೂ ಗೊತ್ತಾಗುತ್ತಿರಲಿಲ್ಲ. ಆದರೆ ಈತ ಮಧ್ಯ ಸಿಗದ ಈ ಪರಿಸ್ಥಿತಿಯನ್ನು ನೋಡಿ ಕುಡುಕರಿಗೆ ಸಹಾಯವನ್ನೂ, ಜತೆಗೆ ಒಂದಷ್ಟು ಲಾಭವನ್ನೂ ಮಾಡಲು ಹೋಗಿದ್ದಾನೆ. ಖಡಕ್ ಮಾಲಿನ ಘಾಟು ಊರ ತುಂಬಾ ಹರಡಿ ನಂತರ ಪೊಲೀಸರ ಮೂಗಿಗೂ ಬಡಿದಿದೆ.
ಬೆಳ್ಳಾರೆಯ ಕಲ್ಲೋಣಿಯ ಜನಾರ್ದನ ಎಂಬವರೇ ತಮ್ಮ ಮನೆಯಲ್ಲಿ ಕಳ್ಳಭಟ್ಟಿ ತಯಾರಿಸಲು ಮುಂದಾದ ವ್ಯಕ್ತಿ. ಈತನಿಂದ ಅಬಕಾರಿ ಇಲಾಖೆಯ ಅಧಿಕಾರಿಗಳು ಗೇರು ಹಣ್ಣಿನ ರಸಾಯನ, ಅದಕ್ಕೆ ಸಂಬಂಧಿಸಿದ ಕುದಿ ಮಂಡೆ, ಪೈಪುಗಳು, ಪಾತ್ರೆಗಳನ್ನು ಮತ್ತು ಸಂಸ್ಕರಿಸಿದ ಗಂಗಸರವನ್ನು ನಿನ್ನೆ ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ದೊರೆತ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಸುಳ್ಯದ ಅಬಕಾರಿ ಇಲಾಖೆಯ ಉಪ ನಿರೀಕ್ಷಕಿ ರಾಧಾ ಎಸ್.ಪಿ. ನೇತೃತ್ವದ ತಂಡ ಈ ದಾಳಿ ನಡೆಸಿದೆ.