ಆತ ಕರ್ತವ್ಯಕ್ಕೆ ಹಾಜರಾಗಿದ್ದು ಆಕ್ಸಿಜನ್ ಸಿಲಿಂಡರ್ ಜೊತೆಗೆ | ಇಲ್ಲಿದೆ ಕಂಪ್ಲೀಟ್ ಸ್ಟೋರಿ

ಕೊರೊನಾ ಸೋಂಕಿನಿಂದ ಬಳಲುತ್ತಿದ್ದರೂ ರಜೆ ನೀಡಲು ನಿರಾಕರಿಸಿದ ಕಾರಣಕ್ಕೆ ಕೋಪಗೊಂಡ ಬ್ಯಾಂಕ್ ಸಿಬ್ಬಂದಿಯೊಬ್ಬರು ಆಕ್ಸಿಜನ್ ಸಿಲಿಂಡರ್ ಸಹಿತ ಕೆಲಸಕ್ಕೆ ಹಾಜರಾಗಿರುವ ಘಟನೆ ಜಾರ್ಖಂಡ್‌ನ ಬೊಕೊರಾದಲ್ಲಿ ನಡೆದಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಉದ್ಯೋಗಿ ಅರವಿಂದ್ ಕುಮಾರ್ ಈ ರೀತಿ ಮಾಡಿದ್ದು, ಇವರ ಕುರಿತ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕೊರೊನಾ ಸೋಂಕಿಗೆ ತುತ್ತಾಗಿದ್ದ ಅರವಿಂದ್ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಸ್ವಲ್ಪ ದಿನದ ನಂತರ ಪರೀಕ್ಷೆ ಮಾಡಿಸಿದಾಗ ನೆಗಟಿವ್ ವರದಿ ಬಂದಿತ್ತು. ಆದರೆ ಉಸಿರಾಟದ ತೊಂದರೆಯಿಂದಾಗಿ ಮನೆಯಲ್ಲಿಯೇ ಆಕ್ಸಿಜನ್ ಸಪೋರ್ಟ್ ಮೂಲಕ ರೆಸ್ಟ್ ಮಾಡುತ್ತಿದ್ದರು. ಅಲ್ಲದೇ ಶ್ವಾಸಕೋಶದಲ್ಲಿ ಸೋಂಕು ತಗುಲಿದ್ದರಿಂದ ವೈದ್ಯರು ವಿರಾಮ ತೆಗೆದುಕೊಳ್ಳುವಂತೆ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಸಂಪೂರ್ಣ ವೈದ್ಯಕೀಯ ದಾಖಲೆಯೊಂದಿಗೆ ಅವರು, ಬ್ಯಾಂಕ್ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ರಜೆಗಾಗಿ ಮನವಿ ಮಾಡಿದ್ದರು. ಆದರೂ ಕೆಲಸಕ್ಕೆ ಹಾಜರಾಗುವಂತೆ ಒತ್ತಡ ಹಾಕಲಾಗಿದೆ. ಅದೇ ಸಿಟ್ಟಿನಿಂದ ಕೆಲಸಕ್ಕೂ ಹಾಜರಾಗಿದ್ದಾರೆ. ಆದರೆ ಆಕ್ಸಿಜನ್ ಸಿಲಿಂಡರ್ ಸಹಿತವಾಗಿಯೇ ಹಾಜರಾಗಬೇಕಾಯಿತು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದರಿಂದ ಬೇಸರಗೊಂಡ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಆದರೆ ಅಧಿಕಾರಿಗಳು‌ ರಾಜೀನಾಮೆಯನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಕುಟುಂಬದವರು ಬ್ಯಾಂಕ್‌ಗೆ ಬಂದು ವಿಚಾರಿಸಿದಾಗ, ಹಿರಿಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.