ಕೋವಿಡ್ ವಾರಿಯರ್ಸ್ಗಳ 50 ಲಕ್ಷ ರೂ. ವಿಮಾ ರಕ್ಷಣೆಯನ್ನು ಮತ್ತೆ ಒಂದು ವರ್ಷಕ್ಕೆ ವಿಸ್ತರಿಸಿ ಆದೇಶ
ಕೋವಿಡ್ ವಾರಿಯರ್ಸ್ ಗಳ 50 ಲಕ್ಷ ರೂ. ವಿಮಾ ರಕ್ಷಣೆಯನ್ನು ಮತ್ತೆ ಒಂದು ವರ್ಷಕ್ಕೆ ವಿಸ್ತರಿಸಿ ಕೇಂದ್ರ ಆದೇಶ ಹೊರಡಿಸಿದೆ.
ಕಳೆದ ವರ್ಷ ಕೋವಿಡ್ 19 ಪರಿಹಾರ ಪ್ಯಾಕೇಜ್ನ ಭಾಗವಾಗಿ ಘೋಷಿಸಿದ ಈ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ನಡಿ ಮಾರ್ಚ್ 24ರಂದು ಮುಕ್ತಾಯಗೊಂಡಿತ್ತು. ಕಳೆದ ತಿಂಗಳು ಅವಧಿ ಮುಗಿದ ನಂತರ ಮಧ್ಯಂತರ ವ್ಯವಸ್ಥೆಯಾಗಿ ಏಪ್ರಿಲ್ 24ರವರೆಗೆ ಕೋವಿಡ್ ವಾರಿಯರ್ಸ್ ಗಳ ವಿಮಾ ಯೋಜನೆಯನ್ನು ವಿಸ್ತರಿಸಲಾಗಿತ್ತು.
ಇದೀಗ ಈ ಪ್ಯಾಕೇಜ್ ಅನ್ನು ಮುಂದುವರೆಸಿದ್ದು, ಇದರಿಂದ ಸುಮಾರು 22 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷತಾ ಬಲ ನೀಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ನ್ಯೂ ಇಂಡಿಯಾ ಅಶ್ಯೂರೆನ್ಸ್ನೊಂದಿಗಿನ ಒಪ್ಪಂದದ ನಂತರ ಇತ್ತೀಚಿನ ವಿಸ್ತರಣೆಯು ಮುಂದಿನ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಇಲ್ಲಿಯವರೆಗೂ 287 ಕ್ಲೈಮ್ಗಳನ್ನು ಈ ಯೋಜನೆಯಡಿ ಇತ್ಯರ್ಥಪಡಿಸಲಾಗಿದೆ.
ಸಾಂಕ್ರಾಮಿಕ ರೋಗದ ಬೃಹತ್ ಎರಡನೇ ಅಲೆ ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಕನಿಷ್ಠ 6 ತಿಂಗಳವರೆಗೆ ವಿಸ್ತರಿಸಬೇಕೆಂದು ಭಾರತೀಯ ವೈದ್ಯಕೀಯ ಸಂಘವು ಆರೋಗ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಮನವಿ ಮಾಡಿತ್ತು. ಆದರೆ ಕೇಂದ್ರವು ಒಂದು ವರ್ಷದವರೆಗೆ ವಿಸ್ತರಿಸಿ ಕೊರೋನಾ ವಾರಿಯರ್ಸ್ ನ ಬೆನ್ನಿಗೆ ನಿಂತಿದೆ.