ಬೆಳ್ತಂಗಡಿ ಒಟ್ಟು 6 ಪಾಸಿಟಿವ್ | ಮುಂಬೈ ಕೋರೋನಾಗೆ ಬೆದರಿದ ಕ್ಲೀನ್ ಆಂಡ್ ಗ್ರೀನ್ ತಾಲೂಕು
ಬೆಳ್ತಂಗಡಿ : ಮುಂಬೈನಿಂದ ಬೆಳ್ತಂಗಡಿಗೆ ಬಂದು ಕ್ವಾರೆಂಟೈನ್ ಆಗಿದ್ದ ಒಟ್ಟು ಆರು ಮಂದಿಗೆ ಕೊರೋನಾ ದೃಢಪಡುವುದರ ಮೂಲಕ ಕೊರೋನಾದ ಗಾಢ ಛಾಯೆ ಬೆಳ್ತಂಗಡಿಯ ಮೇಲೆ ಬಿದ್ದಿದೆ.
ಇವತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟು 14 ಮಂದಿಗೆ ಪಾಸಿಟಿವ್ ಬಂದಿದೆ. ಅವುಗಳಲ್ಲಿ ಬೆಳ್ತಂಗಡಿಯ ಸೋಂಕಿತರು 6 ಜನ.
ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲ್ಯ ಶಾಲೆಯಲ್ಲಿ ಮುಂಬೈನಿಂದ ಆಗಮಿಸಿದ ಒಂದೇ ಕುಟುಂಬದ 10 ಜನರಿದ್ದ ಪೈಕಿ ಒಂದೇ ಕುಟುಂಬದ 45 ವರ್ಷದ ಮಹಿಳೆ ಮತ್ತು 43 ವರ್ಷದ ಪುರುಷರಿಗೆ ಪಾಸಿಟಿವ್ ವರದಿ ಬಂದಿದೆ.
ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾರಾವಿ ಸರಕಾರಿ ಪ್ರೌಢಶಾಲೆಯಲ್ಲಿ ಮುಂಬೈನಿಂದ ಆಗಮಿಸಿದ 6 ಜನರಲ್ಲಿ 28 ವರ್ಷ ಮತ್ತು 42 ವರ್ಷದ ಇಬ್ಬರು ಪುರುಷರ ವರದಿ ಪಾಸಿಟಿವ್ ಆಗಿದೆ.
ಇನ್ನು ಸುಲ್ಕೇರಿಯ ಶ್ರೀರಾಮ ಶಾಲೆಯಲ್ಲಿ ಮೇ 24ರಂದು ಮುಂಬೈಯಿಂದ ಬಂದ 6 ಜನರನ್ನು ಕೊರಂಟೈನ್ ಗೆ ಒಳಪಡಿಸಲಾಗಿತ್ತು. ಇವರಿಗೆ ಕ್ವಾರೆಂಟೈನ್ ಇಂದು ಕೊನೆಗೊಳ್ಳುತ್ತಿದ್ದು, ಇವರಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಿದೆ.
ಎಲ್ಲರನ್ನೂ ಮಂಗಳೂರಿನ ವೆನ್ಲಾಕ್ ಕೊರೊನಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಕ್ಲೀನ್ ಆಂಡ್ ಗ್ರೀನ್ ತಾಲೂಕು ಈಗ ಮುಂಬೈನ ಆಮದು ಕೊರೋನಾದ ಅವಕೃಪೆಯಿಂದ ಕೆಂಪಾಗುತ್ತಿದೆ.