ಕೊರೊನಾ ವಾರಿಯರ್ಸ್ಗೆ ಜೀವ ಬೆದರಿಕೆ | ಬಂಟ್ವಾಳದಲ್ಲಿ 7 ಮಂದಿ ವಿರುದ್ಧ ಪ್ರಕರಣ
ಲಾಕ್ಡೌನ್ ಇದ್ದರೂ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದುದನ್ನು ಪ್ರಶ್ನಿಸಿದ ಸರಕಾರಿ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಸೋಮವಾರದಂದು ಬಂಟ್ವಾಳದಲ್ಲಿ ನಡೆದಿದೆ.
ಬಂಟ್ವಾಳ ಪುರಸಭೆಯ ಪರಿಸರ ಅಭಿಯಂತರರಾದ ವೀರಪ್ಪ ಕೆ. ಎಂಬವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಗಳೊಂದಿಗೆ ಕರ್ತವ್ಯದ ನಿಮಿತ್ತ ಕಾರಿನಲ್ಲಿ ಬಂಟ್ವಾಳ ಕಸಬ ಗ್ರಾಮದ ಬಾರೆಕಾಡು ಎಂಬಲ್ಲಿಗೆ ತಲುಪಿದಾಗ ಮಧ್ಯಾಹ್ನ 1.00 ಗಂಟೆಗೆ ರಫೀಕ್ ಎಂಬವರ ಅಂಗಡಿ ತೆರೆದಿದ್ದು, ಅಂಗಡಿಯ ಎದುರು ಸುಮಾರು 5 ರಿಂದ 10 ಜನರು ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಗುಂಪಾಗಿ ಸೇರಿರುವುದು ಕಂಡುಬಂದಿದೆ.
ಲಾಕ್ ಡೌನ್ ಇರುವುದರಿಂದ ಅಂಗಡಿ ಮುಚ್ಚುವಂತೆ ಸೂಚನೆ ನೀಡಿದರೂ ಅಂಗಡಿಯನ್ನು ಮುಚ್ಚದೆ ಉದ್ದೇಶ ಪೂರ್ವಕವಾಗಿ ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಲ್ಲದೆ ಕಾರಿನ ಚಾಲಕ ವೀರಪ್ಪರವರಿಗೆ ಗುಂಪಿನಲ್ಲಿದ್ದ ಒರ್ವ ವ್ಯಕ್ತಿಯು ಶರ್ಟಿನ ಕಾಲರ್ ನ್ನು ಹಿಡಿದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ವೇಳೆ ಪೊಲೀಸ್ ಸಿಬ್ಬಂದಿ ಜಗಳ ಬಿಡಿಸಿದ್ದು, ಅಂಗಡಿಯ ಮಾಲಕ ಬಾರೆಕಾಡು ನಿವಾಸಿ ಯೂಸುಫ್ ಎಂಬವರ ಪುತ್ರ ರಫೀಕ್ (48) ಹಾಗೂ ಖಾದರ್, ಹನೀಫ್, ಬದ್ರು, ಹ್ಯಾರೀಸ್, ಇಮ್ತೀಯಾಜ್, ರೆಹಮತ್ಲು ಎಂಬವರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ 143, 147, 269, 270, 353, 506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.