ಕೊರೋನಾ ವೈರಸ್ ಲಾಕ್ ಡೌನ್, ಇನ್ನು 3 ತಿಂಗಳು ಉಚಿತ ಗ್ಯಾಸ್ ಸಿಲಿಂಡರ್ ನೀಡಲು ರಾಜ್ಯದ ನಿರ್ಧಾರ
ಬೆಂಗಳೂರು : ಕೊರೋನಾ ವೈರಸ್ ನ ಹಾವಳಿಯಿಂದ ಉಂಟಾದ ಲಾಕ್ ಡೌನ್ ನಿಂದಾಗಿ ರಾಜ್ಯದ ಬಡ ಜನತೆ ಬವಣೆ ಪಡಬಾರದು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಒಂದು ನಿರ್ಧಾರ ಕೈಗೊಂಡಿದೆ. ಇನ್ನು ತಿಂಗಳ ಕಾಲ ಉಚಿತ ಗ್ಯಾಸ್ ಸಿಲಿಂಡರ್ ನೀಡಲು ಸರಕಾರ ನಿರ್ಧರಿಸಿದೆ.
ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಸಂಪುಟ ಸಭೆ ಬಳಿಕ ಮಾದ್ಯಮಗಳಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾಹಿತಿ ನೀಡಿದರು.
‘ಕೊರೋನಾ ವೈರಸ್ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ನಾಯಕತ್ವದ ಕೇಂದ್ರ ಸರ್ಕಾರ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಅಡುಗೆ ಅನಿಲದ ಉಚಿತ ವಿತರಣೆಗೆ ಕ್ರಮ ತೆಗೆದುಕೊಂಡಿದೆ. ಅದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಮುಂದಿನ ಮೂರು ತಿಂಗಳ ಅವಧಿಗೆ ಅಡುಗೆ ಅನಿಲ ಸಿಲಿಂಡರ್ ಉಚಿತವಾಗಿ ವಿತರಿಸಲಿದೆ. ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಈ ವಿತರಣೆ ನಡೆಯಲಿದ್ದು ಇದಕ್ಕಾಗಿ ರಾಜ್ಯ ಸರ್ಕಾರ ರೂ 27.52 ಕೋಟಿ ಖರ್ಚು ಮಾಡಲಿದೆ. ಸುಮಾರು 1 ಲಕ್ಷ ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಗಲಿದೆ ಎಂದು ಹೇಳಿದರು.