ಆಮ್ ಆದ್ಮಿ ಅನ್ ಶೇಕೆಬಲ್ | ಅಹಂಕಾರದ ಗೂಳಿ ಅಮಿತ್ ಶಾಗೆ ತೀವ್ರ ಮುಖಭಂಗ !
ಈ ದಿನ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ಎಣಿಕೆ ಕಾರ್ಯ ಆರಂಭವಾಗಿದ್ದು ಮೊದಲ ಹಂತದ ಚುನಾವಣೆ ದಿಕ್ಸೂಚಿ ಆಡಳಿತ ಪಕ್ಷ ಆಮ್ ಆದ್ಮಿಗೆ ಭರ್ಜರಿ ಬಹುಮತ ನೀಡುವ ಎಲ್ಲ ಸಂದೇಶಗಳನ್ನು ರವಾನಿಸುತ್ತಿದೆ.
ಕಳೆದ ಸಲ ಎಎಪಿ ಇರುವ ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ 67 ಕ್ಷೇತ್ರಗಳನ್ನು ಬಾಚಿ ಕೊಂಡು ಬೀಗಿ ನಿಂತಿತ್ತು. ಈ ಸಲ 67 ಸೀಟುಗಳು ಬರದೇ ಹೋದರೂ 60 ಸೀಟುಗಳ ಮೇಲೆ ಖಚಿತ. ಬಿಜೆಪಿ ಕಳೆದ ಬಾರಿ ಮೂರು ಸ್ಥಾನಗಳನ್ನು ಪಡೆದಿದ್ದರೆ, ಈ ಸಲ ಸುಮಾರು 10 ಸ್ಥಾನಗಳನ್ನು ಪಡೆಯುವ ಸನ್ನಿವೇಶ ಕಾಣುತ್ತಿದೆ. ಕಾಂಗ್ರೆಸ್ಸಂತೂ ಶೂನ್ಯ ಸಂಪಾದನೆಯಲ್ಲಿ ಕಳೆದುಕೊಳ್ಳುವುದಕ್ಕೂ ಏನಿಲ್ಲ- ಪಡೆದುಕೊಳ್ಳುವುದು ಕೂಡ ಏನೂ ಇಲ್ಲ ಎಂಬಂತಹ ಸ್ಥಿತಿಯಲ್ಲಿದೆ.
ಎಎಪಿಯನ್ನು ಏನಕೇನ ಮಣಿಸಿ ಗೆಲ್ಲಲೇಬೇಕೆಂದು ಹಠ ಕಟ್ಟಿ ನಿಂತಿದ್ದರು ಬಿಜೆಪಿಯ ಚಾಣಕ್ಯ ಅಮಿತ್ ಶಾ.
ಆದರೆ ಮೋದಿಯ ಇಮೇಜು, ಚಾಣಕ್ಯನ ತಂತ್ರಗಳು ಬಿಜೆಪಿಯ ರಾಷ್ಟ್ರೀಯವಾದ – ಊಹೂಂ, ಬಿಜೆಪಿಯ ಈ ತಂತ್ರಗಳು ರಾಜ್ಯದ ಮಟ್ಟದಲ್ಲಿ ಕೆಲಸ ಮಾಡುವುದಿಲ್ಲವೆಂದು ಮಗದೊಮ್ಮೆ ಸಾಬೀತಾಗುತ್ತಿದೆ.
ಛತ್ತಿಸ್ಗರ್, ರಾಜಸ್ಥಾನ್ ಮಹಾರಾಷ್ಟ್ರ ಮಧ್ಯಪ್ರದೇಶ, ಪಂಜಾಬ್ ಮತ್ತು ಜಾರ್ಖಂಡ್ ರಾಜ್ಯಗಳು ಬಿಜೆಪಿಯ ಕೈಯಿಂದ ಈಗಾಗಲೇ ಜಾರಿಕೊಂಡು ಹೋಗಿವೆ. ಕೈಯಲ್ಲಿ ಕಡ್ಡಿ ಪರಕೆ ಹಿಡಿದುಕೊಂಡು ಭ್ರಷ್ಟಾಚಾರ ಸ್ವಚ್ಛತೆಗೆ ಒಬ್ಬಂಟಿಯಾಗಿ ಬೀದಿಗಿಳಿದಿದ್ದ ಅರವಿಂದ ಕೇಜ್ರಿವಾಲ್ ಅವರು ಮಾಡಿದ್ದೂ ಅದನ್ನೇ. ಜನರಿಗೆ 24 ಗಂಟೆ ಉಚಿತ ವಿದ್ಯುತ್ ನೀಡಿದರು. ಮಹಿಳೆಯರಿಗೆ ಬಸ್ಸು ಮತ್ತು ಮೆಟ್ರೋಗಳಲ್ಲಿ ಉಚಿತ ಸಾರಿಗೆ ವ್ಯವಸ್ಥೆ ನಗರಗಳಲ್ಲಿ ಉಚಿತ ವೈ-ಫೈ ಸೌಲಭ್ಯ, ವ್ಯಾಪಾರಿ ವಲಯಕ್ಕೆ ವ್ಯಾಪಾರ ವ್ಯವಹಾರ ನಡೆಸಲು ಸುಲಭ ವ್ಯವಸ್ಥೆ, ಉಚಿತ ಕುಡಿವ ನೀರು ನೀಡಿದರು.
ಆಮ್ ಆದ್ಮಿಯ ಕಳೆದ ಚುನಾವಣೆಯಲ್ಲಿ ಒಟ್ಟು 70 ಅಂಶಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ಅವುಗಳಲ್ಲಿ ಹಲವನ್ನು ಈಡೇರಿಸಿದೆ. ಕಳೆದ ಪ್ರಣಾಳಿಕೆಯಂತೆ ಒಟ್ಟು 500 ಹೊಸ ಶಾಲೆಗಳನ್ನು ಕರೆಯುವುದಾಗಿ ಆಮ್ ಆದ್ಮಿ ಘೋಷಿಸಿತ್ತು. ಆದರೆ ಅದರಲ್ಲಿ ಕೇವಲ 30 ಹೊಸ ಶಾಲೆಗಳನ್ನು ತೆರೆಯಲು ಶಕ್ತವಾಗಿತ್ತು. ಮತ್ತೆ ಹಲವು ಬೇಡಿಕೆಗಳನ್ನು ಈಡೇರಿಸಲು ಆಗಿರಲಿಲ್ಲ. ಆದರೂ ಭ್ರಷ್ಟಾಚಾರವಿಲ್ಲದ ಸರಳ ಆಡಳಿತ ಕೊಟ್ಟ ಆಮ್ ಆದ್ಮಿಯ ಕೈಯನ್ನು ಜನ ಬಿಡಲಿಲ್ಲ .
ಅದೇ ಕಾರಣಕ್ಕೆ ಇವತ್ತು ಅರವಿಂದ ಕೇಜ್ರಿವಾಲ್ ಅವರು ತಮ್ಮ ಮತ್ತೆ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರುತ್ತಿದ್ದಾರೆ.
ಬಿಜೆಪಿಯ ಈ ಸಾಲು ಸಾಲು ಸೋಲಿಗೆ ಕಾರಣವೇನು?
ಈ ಸಾಲು ಸಾಲು ಸೋಲುಗಳ ಹಿಂದಿನ ಕಾರಣ ಬಿಜೆಪಿಗೆ ಇನ್ನೂ ಅರಿವಾಗುತ್ತಿಲ್ಲ ಎಂಬುದೇ ವಿಪರ್ಯಾಸ. ಹಳ್ಳಿಗಳಲ್ಲಿ ರಾಜ್ಯಮಟ್ಟದಲ್ಲಿ ಜನರು ಪ್ರಾದೇಶಿಕ ಸಮಸ್ಯೆಗಳ ಪರಿಹಾರಕ್ಕೆ, ಮೂಲಭೂತ ಸೌಕರ್ಯ ಕುಡಿಯುವ ನೀರು, ಒಳ್ಳೆಯ ರಸ್ತೆಗಳು, ಉತ್ತಮ ವೈದ್ಯಕೀಯ ಸೌಕರ್ಯ, ಉಚಿತ ವಿದ್ಯುತ್ ಮುಂತಾದ ಸಮಸ್ಯೆಗಳಿಗೆ ಸ್ಪಂದಿಸುವ ರಾಜಕೀಯ ಪಕ್ಷಗಳಿಗೆ ಮಣೆ ಹಾಕುತ್ತಾರೆ.
ಅಷ್ಟೇ ಅಲ್ಲ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೇಂದ್ರದ ಅಮಿತ್ ಶಾ ಮತ್ತು ಇತರ ನಾಯಕರುಗಳು ಯಾವ ರೀತಿ ನಡೆಸಿಕೊಂಡಿದ್ದಾರೆ ಎಂಬುದು ನಮಗೆಲ್ಲ ತಿಳಿದಿದೆ. ಇದು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಒಂದೊಮ್ಮೆ ಸಾಲುಸಾಲು ಗೆಲುವುಗಳನ್ನು ಕಂಡು ಆ ಗೆಲುವಿನಿಂದ ಕಾನ್ಫಿಡೆನ್ಸ್ ಅನ್ನು ಪಡೆದುಕೊಂಡು ಕೊಬ್ಬಿದ್ದ ಅಮಿತ್ ಶಾ ರಲ್ಲಿ ಅಹಂಕಾರ ಬೆಳೆದುಬಿಟ್ಟಿತ್ತು. ಕರ್ನಾಟಕದ ಮುಖ್ಯಮಂತ್ರಿ ಹಲವು ಬಾರಿ ಅವರನ್ನು ಭೇಟಿ ಮಾಡಲು ಹೋದಾಗ, ಭೇಟಿ ಯಾಗಲು ಒಪ್ಪದೇ ಹಲವು ಬಾರಿ ಅವಮಾನಿಸಿ ವಾಪಸ್ಸು ಕಳಿಸಿದ್ದರು.
ಮೊನ್ನೆ ಕರ್ನಾಟಕದ 12 ಜನ ಶಾಸಕರು ಗಳನ್ನು ಉಪ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬಂದ ನಂತರ ಕೂಡ ಮಂತ್ರಿಮಂಡಲ ವಿಸ್ತರಣೆಗೆ ಎರಡು ತಿಂಗಳುಗಳ ಕಾಲ ಕಾಯಿಸಿ ಒಟ್ಟಾರೆ ಜನಮಾನಸದಲ್ಲಿ ಕೇಂದ್ರ ನಾಯಕರುಗಳ ವರ್ತನೆಯ ಬಗ್ಗೆ ಪಕ್ಷಾತೀತವಾಗಿ ತೀವ್ರ ಬೇಸರ ಉಂಟು ಮಾಡುವ ಸನ್ನಿವೇಶ ಸೃಷ್ಟಿಯಾಗಿತ್ತು. ಕರ್ನಾಟಕ ಮಾತ್ರವಲ್ಲ ದೇಶದ ಇತರ ರಾಜ್ಯಗಳಲ್ಲಿಯೂ ಕೂಡ ಸ್ಥಳೀಯ ನಾಯಕತ್ವವನ್ನು ಬೆಳೆಸದೆ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಗುಲಾಮರ ತರ ಅಮಿತ್ ಶಾ ಟ್ರೀಟ್ ಮಾಡಿದ್ದರು.
ಅಲ್ಲದೆ ದೇಶವನ್ನು ಎಪ್ಪತ್ತು ವರ್ಷ ಕಪಿಮುಷ್ಠಿಯಲ್ಲಿಟ್ಟುಕೊಂಡು ಆಳಿದ ಕಾಂಗ್ರೆಸ್ ಯುದ್ಧಕ್ಕೆ ಮೊದಲೇ ಶಸ್ತ್ರದ ಜತೆಗೆ ಅಂಗಿ ಲುಂಗಿ ಪ್ಯಾಂಟು- ಎಲ್ಲ ತೆಗೆದಿಟ್ಟು ಬರಿಯ ಬನಿಯನ್ ನಲ್ಲಿ ಥೇಟು ‘ಆಮ್ ಆದ್ಮಿ’ ಯ ಥರ ನಿಂತು ಪೆಕರನಂತೆ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ನೋಡುತ್ತಿದೆ. ಒಳಗೊಳಗೇ AAP ಯಾ ಜತೆ ಒಳ ಒಪ್ಪಂದ ಆಗಿರಬಹುದೆನ್ನುವಸ್ಟರ ಮಟ್ಟಿಗೆ ಕಾಂಗ್ರೆಸ್ಸಿನದು ಸ್ಥಿತಪ್ರಜ್ಞತೆ ! ಈ ಒಂದು ಅಂಶ ಕೂಡಾ ಬಿಜೆಪಿ ದೆಹಲಿಯಲ್ಲಿ ಅಧಿಕಾರಕ್ಕೇರುವಲ್ಲಿ ವಿಫಲವಾಗಲು ಕಾರಣ.
ಅಲ್ಲದೆ ಮೊನ್ನೆ ನಡೆದ ಶಹೀನ್ ಬಾಗ್ ಮತ್ತು ಜಾಮೀಯಾ ಪ್ರತಿಭಟನೆಗಳ ಪರಿಣಾಮ ಹಿಂದುತ್ವದ ಮತಗಳು ಪೊಲರೈಸ್ ಆಗಿ, ಗೆಲುವು ತಮ್ಮದೇ ಅಂತ ಓವರ್ ಕಾಂಫಿಡೆನ್ಸಿನಲ್ಲಿತ್ತು ಬಿಜೆಪಿ. ಆದರೆ ದೆಹಲಿ ವಿಧಾನಸಭೆಯ ಮಟ್ಟದಲ್ಲಿ ಅದು ನಿರೀಕ್ಷಿತ ಪರಿಣಾಮ ಬೀರಿದಂತಿಲ್ಲ. ಮತ್ತೊಂದು ಕಡೆ, ಕಾಂಗ್ರೆಸ್ ನ ಎಲ್ಲ ಸಾಂಪ್ರದಾಯಿಕ ಮತಗಳು ಸೀ೦ಟಿ ಹಾಕಿದಂತೆ ಆಪ್ ಗೆ ಬಿದ್ದಿದೆ.
ಬಿಜೆಪಿಯ ಅಮಿತ್ ಷಾ ಮತ್ತಿತರ ಕೇಂದ್ರ ನಾಯಕರುಗಳ ಅಹಂಕಾರಕ್ಕೆ ದೆಹಲಿಯ ಸಿಟಿ ಮಂದಿ ಒಳ್ಳೆಯ ಕಡು-ನಾಟಿ ಔಷಧಿ ಅರೆದಿದ್ದಾರೆ. ಆಮ್ ಆದ್ಮಿಯ ಅರವಿಂದ ಕೇಜ್ರಿವಾಲ್ ಮತ್ತೆ ಮೂರನೆಯ ಬಾರಿಗೆ ಮುಖ್ಯಮಂತ್ರಿ ಗಾದಿಯ ಮೇಲೆ ಕುಳಿತುಕೊಳ್ಳಲಿದ್ದಾರೆ.