ಯೋಧರ ಆರ್ಮಿ ಕ್ಯಾಂಟೀನ್ ಮದ್ಯಕ್ಕೂ ತಟ್ಟಿತು ಬೆಲೆ ಏರಿಕೆ ಬಿಸಿ?

Bengaluru: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈಗಾಗಲೇ ಕರ್ನಾಟಕದಲ್ಲಿ ಮೂರು ಬಾರಿ ಮದ್ಯದ ದರ ಏರಿಕೆ ಮಾಡಲಾಗಿದೆ. ಈಗ ಮದ್ಯ ಮಾರಾಟಗಾರರ ಪರವಾನಗಿ ದರ ಹೆಚ್ಚಳ ಮಾಡುವುದಕ್ಕೂ ಕೂಡ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದರಿಂದ ಮದ್ಯ ಮಾರಾಟಗಾರರು ಹಾಗೂ ಮದ್ಯ ಪ್ರಿಯರು ಕಂಗಾಲಾಗಿ ಕುಳಿತಿದ್ದರೆ, ಇಷ್ಟೇ ಸಾಲದು ಎಂದು ಇದೀಗ ಆರ್ಮಿ ಕ್ಯಾಂಟೀನ್ಗೆ ಪೂರೈಕೆ ಮಾಡುವ ಮದ್ಯದ ತೆರಿಗೆ ಹೆಚ್ಚಳಕ್ಕೂ ಅಬಕಾರಿ ಇಲಾಖೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಮದ್ಯ ಮಾರಾಟಗಾರರು ಪ್ರತಿಕ್ರಿಯಿಸಿ, ಆರ್ಮಿ ಕ್ಯಾಂಟೀನ್ ಹೆಸರಿನಲ್ಲಿ ಸಾಕಷ್ಟು ಮದ್ಯವು ಬ್ಲಾಕ್ನಲ್ಲಿ ಮಾರಾಟವಾಗುತ್ತಿದ್ದು, ಕೆಲವರು ಲಾಭಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ದರ ಏರಿಕೆ ಮಾಡಿದರೆ ಇದಕ್ಕೆ ಬ್ರೇಕ್ ಬೀಳಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 70 ಕ್ಕೂ ಅಧಿಕ ಆರ್ಮಿ ಕ್ಯಾಂಟೀನ್ಗಳಿದ್ದು, ಎಲ್ಲಾ ಆರ್ಮಿ ಕ್ಯಾಂಟೀನ್ಗಳಿಗೂ ಅಬಕಾರಿ ಇಲಾಖೆ ರಿಯಾಯಿತಿ ದರದಲ್ಲಿ ಮದ್ಯವನ್ನು ಮಾರಾಟ ಮಾಡುತ್ತದೆ. ಬಾರ್, ವೈನ್ ಸ್ಟೋರ್ ಗಳಲ್ಲಿ ಎಂಆರ್ಪಿಪಿ ಮತ್ತು ಎಂಎಸ್ಐಎಲ್ ಗಳಲ್ಲಿ ಒಂದು ಫುಲ್ ಬಾಟಲ್ ಗೆ 2000 ರುಪಾಯಿ ಇದ್ದರೆ, ಒಂದು ಫುಲ್ ಬಾಟಲ್ ಮದ್ಯ ಆರ್ಮಿ ಕ್ಯಾಂಟೀನ್ ನಲ್ಲಿ 500 ರುಪಾಯಿ ಅಷ್ಟೇ ಇರುತ್ತದೆ. ಸದ್ಯಕ್ಕೆ ಒಬ್ಬ ಯೋಧನಿಗೆ ಪ್ರತಿ ತಿಂಗಳು 2 ರಿಂದ 3 ಬಾಟಲ್ ಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಈಗ ಅದರ ಮೇಲೂ ಸರ್ಕಾರ ಕಣ್ಣು ಹಾಕಿದೆ.
ಯೋಧರ ಮದ್ಯದ ತೆರಿಗೆ ಹೆಚ್ಚಳ ಪ್ರಸ್ತಾಪದ ಬಗ್ಗೆ ಪ್ರತಿಕ್ರಿಯಿಸಿದ ಜನರು, ಈಗಾಗಲೇ ಜನಸಾಮಾನ್ಯ ಕುಡಿಯುವ ಮದ್ಯದ ದರವನ್ನು ಸರ್ಕಾರ ಏರಿಕೆ ಮಾಡಿದ್ದು, ಇದೀಗ ದೇಶ ಕಾಯುವ ಯೋಧರಿಗೆ ನೀಡುವ ಮದ್ಯದ ದರವನ್ನು ಕೂಡಾ ಹೆಚ್ಚಿಸಲು ಚಿಂತನೆ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯೋಧರಿಗೆ ಮತ್ತು ಮಾಜಿ ಯೋಧರಿಗೆ ರಿಯಾಯಿತಿ ದರದಲ್ಲಿ ನೀಡುವ ಮದ್ಯದ ತೆರಿಗೆಯನ್ನು ಹೆಚ್ಚಿಸಲು ಸರ್ಕಾರ ಈಗಾಗಲೇ ಚಿಂತನೆ ನಡೆಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
Comments are closed.