ನಕಲಿ ಪಾಸ್ ಪೋರ್ಟ್ ಬಳಸಿ ವಿದೇಶಕ್ಕೆ ಪರಾರಿಯಾಗಿದ್ದ ಕೊಲೆ ಆರೋಪಿ ಬಂಧನ

ಉಡುಪಿ :  ಇಪ್ಪತ್ತು ವರ್ಷಗಳ ಹಿಂದೆ ನಡೆದಿದ್ದ ಮಜೂರು ಕರಂದಾಡಿ ಗುತ್ತು ಜಯರಾಮ ಶೆಟ್ಟಿ ಎಂಬವರ ಕೊಲೆ ಪ್ರಕರಣದಲ್ಲಿ ಆಪಾದಿತನಾಗಿ ತಲೆ ಮರೆಸಿಕೊಂಡಿದ್ದ ಆರೋಪಿ ಕಾಪು ಬಡಾ ಎರ್ಮಾಳ್ ನಿವಾಸಿ ಇಲಿಯಾಸ್ ಯಾನೆ ಮಹಮ್ಮದ್ ಹಸನ್ (45) ಎಂಬಾತನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಜಯರಾಮ ಶೆಟ್ಟಿ ಅವರನ್ನು 2000ನೇ ಇಸವಿಯಲ್ಲಿ ಅವರ ಸಹೋದರ ಉದಯ ಶೆಟ್ಟಿ ಯಾನೆ ದಾಡೆ ಉದಯ ಎಂಬಾತ ಆಸ್ತಿ ತಕರಾರಿನ ಹಿನ್ನೆಲೆಯಲ್ಲಿ ಸುನಿಲ್ ಶೆಟ್ಟಿ, ಇಲಿಯಾಸ್ ಯಾನೆ ಮಹಮ್ಮದ್ ಹಸನ್ ಮತ್ತು ಅಬೂಬಕ್ಕರ್ ಸಿದ್ದಿಕ್ ಎಂಬವರೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದ.

ಆಗ ಎಲ್ಲ ಆರೋಪಿಗಳ ಬಂಧನವಾಗಿ ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದ್ದಾಗ, 2007ರಿಂದ ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಬಳಿಕ ಮಹಮ್ಮದ್ ರಫೀಕ್ ಎಂಬ ನಕಲಿ ಪಾಸ್‌ಪೋರ್ಟ್ ಮಾಡಿಸಿಕೊಂಡು ಸೌದಿ ಅರೇಬಿಯಕ್ಕೆ ಪರಾರಿ ಆಗಿದ್ದ.

ಇತ್ತೀಚೆಗೆ ಹಸನ್ ಊರಿಗೆ ಬಂದ ಮಾಹಿತಿ ಪಡೆದ ಕಾಪು ಠಾಣೆ ವಾರಂಟ್ ಸಿಬ್ಬಂದಿ ಹೆಡ್ ಕಾನ್ ಸ್ಟೇಬಲ್‌ಗಳಾದ ಸುಧಾಕರ ಭಂಡಾರಿ, ರಫೀಕ್, ರವೀಂದ್ರ, ಪಿ.ಸಿ. ಸಂದೇಶ್ ಭಂಡಾರಿ ಈತನನ್ನು ಬಂಧಿಸಿ ಕರೆತಂದಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave A Reply

Your email address will not be published.