ರೈತನೋರ್ವನ ಕೈಚಳಕ : ಹುಲಿಯಾಗಿ ಬದಲಾದ ನಾಯಿ, ಯಾಕೆಂದು ತಿಳಿದರೆ ಖುಷಿ ಪಡ್ತೀರ
ಹಗಲಿರುಳು ಎನ್ನದೆ ಶ್ರಮಿಸುವ ರೈತರು ಬೆಳೆದ ಬೆಳೆ ಕೈ ಸೇರುವ ಹೊತ್ತಿಗೆ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿ ಉಂಟಾಗಿ ನಿರೀಕ್ಷಿತ ಬೆಲೆ ಸಿಗದೆ ಇರುವ ನಡುವೆ ಕಾಡು ಪ್ರಾಣಿಗಳ ಹಾವಳಿಯಿಂದ ತತ್ತರಿಸಿ ಹೋಗುವ ಮಂದಿಯೆ ಹೆಚ್ಚು. ಈ ನಿಟ್ಟಿನಲ್ಲಿ ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸುವ ಸಲುವಾಗಿ ರೈತರು ಮಾಡುವ ಹರಸಾಹಸ ಅಷ್ಟಿಷ್ಟಲ್ಲ!! ಮನುಷ್ಯನ ಗೊಂಬೆ, ಲೌಡ್ ಸ್ಪೀಕರ್, ಜಾಗಟೆ-ಗಂಟೆ, ತೆಂಗಿನ ಮರಗಳಿಗೆ ತಗಡು ಬಡಿಯುವುದನ್ನೆಲ್ಲಾ ಮಾಡಿ ನೋಡಿದ ರೈತರು ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಹೌದು!!!ಹನೂರು ತಾಲೂಕಿನ ಅಜ್ಜೀಪುರ ಗ್ರಾಮದಲ್ಲಿ ಹುಲಿ ವೇಷಧಾರಿ ನಾಯಿಯೊಂದು ಓಡಾಡುತ್ತಿದ್ದುಸದ್ಯ ಇದು ರೈತರೊಬ್ಬರ ಹೊಸ ಕೈ ಚಳಕ ಎನ್ನಲಾಗಿದೆ. ಈ ಮೊದಲು ಎಲ್ಲ ಪ್ರಯೋಗ ನಡೆಸಿ ಸದ್ಯ ಹುಲಿಯಂತ ನಾಯಿಯನ್ನು ಕರೆ ತಂದಿದ್ದಾರೆ ಎನ್ನಲಾಗಿದೆ. ಹುಲಿ ಹಾಗೂ ಸಿಂಹ ಎರಡೂ ಹೆಸರುಗಳ ಮಿಶ್ರಣದಿಂದ ಲೈಗರ್ ಎಂಬ ಪದ ಹುಟ್ಟಿದ್ದು ಗೊತ್ತಿರುವ ವಿಚಾರವೇ!!ಅದೇ ರೀತಿ, ಇಲ್ಲೊಂದು ನಾಯಿ ಡೈಗರ್ ಆಗಿದೆ.
ಈ ಹೊಸ ಐಡಿಯಾದಿಂದ ವನ್ಯಜೀವಿಗಳು, ಮಂಗಗಳು ಹೆದರುತ್ತಿದೇಯೋ ಇಲ್ಲವೋ ಎಂದು ತಿಳಿದು ಬಂದಿಲ್ಲ. ಆದರೆ ಈ ನಡುವೆ ವಾಹನ ಸವಾರರು ಬೆಚ್ಚಿ ಬೀಳಿಸುತ್ತಿದೆ. ಅಜ್ಜೀಪುರ ರಸ್ತೆಯು ರಾಜ್ಯ ಹೆದ್ದಾರಿಯಾಗಿದ್ದು ನಿತ್ಯ ನೂರಾರು ವಾಹನಗಳು ಸಂಚಾರ ನಡೆಸುತ್ತಿದ್ದು, ಆದರೆ ಇದ್ದಕ್ಕಿದ್ದಂತೆ ಪ್ರತ್ಯಕ್ಷ ಆಗುವ ಈ ಡೈಗರ್ ಕಂಡು ಜನ ಹೆದರುತ್ತಿದ್ದಾರೆ.
ನಾಯಿಗೆ ಹುಲಿ ರೂಪದ ಬಣ್ಣ ಬಳಿದಿರುವ ಹಿನ್ನೆಲೆ ಸಂಚರಿಸುವ ಸಾರ್ವಜನಿಕರು ಹಾಗೂ ದಾರಿಹೋಕರು ಹುಲಿ ರೂಪದ ನಾಯಿಯನ್ನು ನೋಡಿ ಭಯಭೀತರಾಗಿದ್ದು, ಇದು ನಿಜವಾದ ಹುಲಿ ಯಲ್ಲ ಎಂಬ ಸತ್ಯ ಅರಿವಾಗುತ್ತಿದ್ದಂತೆ ಭಯದಲ್ಲಿ ಉಸಿರು ಬಿಗಿ ಹಿಡಿದವರು ಉಳಿದೇನೋ ಬಡಪಾಯಿ ಎಂದುಕೊಂಡು ನಿಟ್ಟುಸಿರು ಬಿಡುವ ಪ್ರಕರಣ ಕೂಡ ಇದ್ದು, ಒಟ್ಟಿನಲ್ಲಿ ಕಳೆದ ಎರಡು ದಿನಗಳಿಂದ ಈ ಗ್ರಾಮದಲ್ಲಿ ಡೈಗರ್ ಹವಾ ನೋಡಿ ಜನ ಸುಸ್ತಾಗಿದ್ದಾರೆ ಎನ್ನಲಾಗಿದೆ. ರೈತನ ಹೊಸ ಪ್ರಯತ್ನ ಎಷ್ಟರಮಟ್ಟಿಗೆ ಯಶಸ್ಸು ಗಳಿಸಲಿದೆ ಎಂದು ಕಾದು ನೋಡಬೇಕಾಗಿದೆ.