BPL ಕಾರ್ಡ್‌ದಾರರೇ ಇಲ್ಲಿ ಗಮನಿಸಿ | ಸಾರವರ್ಧಿತ ಅಕ್ಕಿಯ ಕುರಿತು ಇಲ್ಲಿದೆ ಮಾಹಿತಿ

ಸರ್ಕಾರವು ಬಡತನ ವರ್ಗದ ಜನರಿಗೆ ಅನೇಕ ರೀತಿಯಲ್ಲಿ ಸಹಾಯ ಹಸ್ತವನ್ನು ಚಾಚಿದೆ. ಬಡವರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು ಅವುಗಳಲ್ಲಿ ಪಡಿತರ ಚೀಟಿಯು ಒಂದು. ಬಡತನ ರೇಖೆಗಿಂತ ಕೆಳಗಿನ ವರ್ಗದವರಿಗೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ಉಚಿತ ಅಕ್ಕಿಯನ್ನು ವಿತರಿಸುತ್ತಿದ್ದಾರೆ. ಇನ್ನು ಮುಂದೆ ಸಾರವರ್ಧಿತ ಅಕ್ಕಿಯನ್ನು ವಿತರಿಸುವಂತೆ ವಿಜಯನಗರದ ಜಿಲ್ಲಾಧಿಕಾರಿ ಟಿ. ವೆಂಕಟೇಶ ಅವರು ತಿಳಿಸಿದ್ದಾರೆ.

ದಿನನಿತ್ಯದ ಆಹಾರದಲ್ಲಿ ಸಂಪೂರ್ಣ ಪೋಷಕಾಂಶಗಳು ಲಭ್ಯವಾಗದೇ ಇರುವ ಕಾರಣದಿಂದಾಗಿ ಅನೀಮಿಯ, ಇರುಳು ಕುರುಡುತನದಂತಹ ರೋಗಗಳು ಬರಬಹುದಾಗಿದೆ. ಅಲ್ಲದೇ, ಹೆಚ್ಚಾಗಿ ಮಹಿಳೆಯರು ಹಾಗೂ ಮಕ್ಕಳು ಅಪೌಷ್ಟಿಕತೆಗೆ ಬಲಿಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇದನ್ನು ತಪ್ಪಿಸಲು ಹೆಚ್ಚಿನ ಪೋಷಕಾಂಶದ ಅಗತ್ಯತೆ ಇರುವುದರಿಂದಾಗಿ, ಜನಸಾಮಾನ್ಯರಲ್ಲಿನ ಅಪೌಷ್ಟಿಕತೆ ಹೋಗಲಾಡಿಸಿ ಆರೋಗ್ಯ ವೃದ್ಧಿಸಬೇಕು.

ಈ ಉದ್ದೇಶದಿಂದ, ಸಾರ್ವಜನಿಕ ವಿತರಣಾ ಪದ್ಧತಿಯ ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡಲಾಗುವ ಪ್ರತಿ 50 ಕೆ.ಜಿಯ ಅಕ್ಕಿಯ ಚೀಲದಲ್ಲಿ ಅರ್ಧ ಕೆಜಿಯಷ್ಟು ಪೋಷಕಾಂಶಗಳಾದ ವಿಟಮಿನ್ ಎ ಮತ್ತು ಡಿ, ಐರನ್, ಫೋಲಿಕ್ ಆಸಿಡ್, ಬಿ ಕಾಂಪ್ಲೇಕ್ಸ್, ಜಿಂಕ್ ಹಾಗೂ ಅಯೋಡಿನ್ ಭರಿತ ಸಾರವರ್ಧಿತ ಅಕ್ಕಿ ಬೆರೆಸಿ 2022 ನೇ ಮೇ ತಿಂಗಳಿನಿಂದ ನ್ಯಾಯಬೆಲೆ ಅಂಗಡಿಯಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸಾರವರ್ಧಿತಗೊಳಿಸಿರುವ(ಫೋರ್ಟಿಫೈಡ್) ಅಕ್ಕಿಯಲ್ಲಿ ಕೆಲವೊಂದು ಅಕ್ಕಿಯ ಕಾಳುಗಳು ಹೊಳಪಿನಿಂದ ಕೂಡಿದ್ದೂ, ನೋಡಲು ಪ್ಲಾಸ್ಟಿಕ್ ಅಕ್ಕಿಯ ರೀತಿಯಲ್ಲಿ ಕಾಣಿಸುತ್ತದೆ. ಹಾಗಾಗಿ ಸಾರ್ವಜನಿಕರು ಯಾವುದೇ ಆತಂಕಕ್ಕೊಳಗಾಗದೇ ವಿತರಣೆ ಮಾಡಲಾಗುತ್ತಿರುವ ಸಾರವರ್ಧಿತ ಅಕ್ಕಿಯನ್ನು ಉಪಯೋಗಿಸಿ ಆರೋಗ್ಯವಂತರಾಗಲು ಅವರು ಕೋರಿದ್ದಾರೆ. ಸಾರ್ವಜನಿಕ ವಿತರಣಾ ಪದ್ಧತಿಯಡಿ ಬಿಡುಗಡೆ ಮಾಡುವ ಅಕ್ಕಿಯನ್ನು ಸ್ವಂತಕ್ಕೆ ಮಾತ್ರ ಉಪಯೋಗಿಸಬೇಕು. ಕಾಳಸಂತೆಯಲ್ಲಿ, ಅಂಗಡಿಗಳಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಅಂತಹ ಕುಟುಂಬಕ್ಕೆ ನೀಡಿದ ಪಿ.ಹೆಚ್.ಹೆಚ್, ಅಂತ್ಯೋದಯ(ಬಿ.ಪಿ.ಎಲ್,ಎಎವೈ) ಪಡಿತರ ಚೀಟಿಯನ್ನು ರದ್ದುಪಡಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Leave A Reply

Your email address will not be published.