ತಿಂಗಳಾಂತ್ಯಕ್ಕೆ ಮಾರುಕಟ್ಟೆ ಪ್ರವೇಶಿಸಲಿವೆ ಟಾಪ್ 5 ಹೊಸ ಕಾರುಗಳು | ಆ ವಿನೂತನ ಕಾರುಗಳು ಯಾವುವು ಗೊತ್ತಾ?

ಹೊಸ ವರ್ಷ ಆರಂಭವಾಗುತ್ತಿದ್ದಂತೆ ಹೊಸ ಹೊಸ ವಿನ್ಯಾಸದ ಮೊಬೈಲ್ ಮಾದರಿಗಳು, ಬೈಕ್ ಮಾದರಿಗಳು ದಿನೇ ದಿನೇ ಮಾರುಕಟ್ಟೆಗೆ ಬಂದು ಸದ್ದು ಮಾಡುತ್ತಿವೆ. ಇದೀಗ ಭಾರತದಲ್ಲಿ ಹೊಸ ಕಾರುಗಳ ಅಬ್ಬರ ಹೆಚ್ಚುತ್ತಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳು ಮಾರುಕಟ್ಟೆ ಬರಲಿವೆ. ವಿಶೇಷವೆಂದರೆ ಎಲೆಕ್ಟ್ರಿಕ್ ಕಾರುಗಳು ಕೂಡ ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ.

ಭಾರತದಲ್ಲಂತೂ ಹೊಸ ವರ್ಷದ ಆರಂಭದಲ್ಲಿ ಕಾರುಗಳ ಮಾರಾಟವು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಶೀಘ್ರದಲ್ಲಿಯೇ ಮತ್ತಷ್ಟು ವಿನೂತನ ಕಾರುಗಳು ಬಿಡುಗಡೆಗಾಗಿ ಕಂಪೆನಿಗಳು ಸಿದ್ದವಾಗುತ್ತಿವೆ. ಹೊಸ ಕಾರುಗಳಲ್ಲಿ ಸಾಮಾನ್ಯ ಮಾದರಿಗಳ ಜೊತೆಗೆ ಎಲೆಕ್ಟ್ರಿಕ್ ಮತ್ತು ಸಿಎನ್ ಜಿ ಆವೃತ್ತಿಗಳು ಸಹ ಬಿಡುಗಡೆಯಾಗುತ್ತಿದ್ದು, ಮಾರುಕಟ್ಟೆ ಪ್ರವೇಶಿಸಲಿವೆ. ಬಿಡುಗಡೆಯಾಗಲಿರುವ ಪ್ರಮುಖ ಐದು ಹೊಸ ಕಾರು ಮಾದರಿಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಇವು ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ.

ಮಾರುತಿ ಸುಜುಕಿ ಜಿಮ್ನಿ
ಹೊಸ ಜಿಮ್ನಿ ಕಾರು ಹಲವಾರು ವಿಶೇಷತೆಗಳನ್ನ ಒಳಗೊಂಡಿರಲಿದ್ದು, ಇದು 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ. ಜೊತೆಗೆ ಹೊಸ ಕಾರಿನಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ನೀಡಲಾಗುತ್ತಿದ್ದು, ಇದು ಪರ್ಫಾಮೆನ್ಸ್ ಜೊತೆಗೆ ಹೆಚ್ಚಿನ ಇಂಧನ ದಕ್ಷತೆ ಹೊಂದಿರಲಿದೆ. ಹಾಗೆಯೇ ಹೊಸ ಕಾರು ಮಾದರಿಯು ವಿಶೇಷವಾಗಿ ಆಫ್ ರೋಡ್ ಪ್ರಿಯರಿಗಾಗಿ ನಿರ್ಮಾಣಗೊಂಡಿದ್ದು, ಭಾರತದಲ್ಲಿ ಇದು ಹೊಸ ಕ್ರೇಜ್ ಸೃಷ್ಠಿಸಲಿದೆ.

ಸಿಟ್ರನ್ ಇ ಸಿ3 ಎಲೆಕ್ಟ್ರಿಕ್
ಸಿಟ್ರನ್ ಇ ಸಿ3 ಎಲೆಕ್ಟ್ರಿಕ್ ಕಾರು 30.2kWh ಬ್ಯಾಟರಿ ಪ್ಯಾಕ್ ನೊಂದಿಗೆ ಅತ್ಯುತ್ತಮ ಮೈಲೇಜ್ ನೀಡಲಿದ್ದು, ಈ ಕಾರು ಈ ತಿಂಗಳಾಂತ್ಯಕ್ಕೆ ಮಾರುಕಟ್ಟೆ ಲಗ್ಗೆಯಿಡುವುದು ಬಹುತೇತ ಖಚಿತವಾಗಿದೆ. ಸಿಟ್ರನ್ ಹೊಸ ಇವಿ ಕಾರು ಪ್ರತಿ ಚಾರ್ಜ್ ಗೆ 320 ರಿಂದ 350 ಕಿ.ಮೀ ಮೈಲೇಜ್ ನೀಡಲಿದ್ದು, ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯಲಿದೆ. ಜೊತೆಗೆ ಹೊಸ ಕಾರು ಬೆಲೆಯಲ್ಲೂ ಗಮನಸೆಳೆಯಲಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 9 ಲಕ್ಷದಿಂದ ರೂ. 12 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

ಮಹೀಂದ್ರಾ ಥಾರ್
ಜನವರಿ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಹೊಸ ಕಾರುಗಳ ಪಟ್ಟಿಯಲ್ಲಿ ಮಹೀಂದ್ರಾ ಥಾರ್ 4×2 ವೆರಿಯೆಂಟ್ ಭಾರೀ ನೀರಿಕ್ಷೆ ಹುಟ್ಟುಹಾಕಿದೆ. ಥಾರ್ ಹೊಸ 4×2 ವೆರಿಯೆಂಟ್ ನಲ್ಲಿ 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದ್ದು, ಬೆಲೆ ವಿಚಾರವಾಗಿ ಗಮನಸೆಳೆಯಲಿದೆ. ಸದ್ಯ ಮಾರುಕಟ್ಟೆಯಲ್ಲಿ 4×4 ವೆರಿಯೆಂಟ್ ನಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಥಾರ್ ಕಾರು ಮಾದರಿಯು 2.0 ಲೀಟರ್ ಪೆಟ್ರೋಲ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದೆ. ಆದರೆ ಹೊಸ 4×2 ವೆರಿಯೆಂಟ್ ಕಡಿಮೆ ಫೀಚರ್ಸ್ ಗಳೊಂದಿಗೆ ಆಕರ್ಷಕ ಬೆಲೆಗೆ ಬಿಡುಗಡೆಯಾಗುತ್ತಿದ್ದು, ಇದೇ ತಿಂಗಳು 12ರಿಂದ ನಡೆಯಲಿರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡ ನಂತರವಷ್ಟೇ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಗ್ರ್ಯಾಂಡ್ ವಿಟಾರಾ ಸಿಎನ್ ಜಿ
ಬಿಡುಗಡೆಯಾಗಲಿರುವ ಹೊಸ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಹೊಸ ಗ್ರ್ಯಾಂಡ್ ವಿಟಾರಾ ಸಿಎನ್ ಜಿ ಕೂಡಾ ಪ್ರಮುಖವಾಗಿದೆ. ಹೊಸ ಕಾರು ಖರೀದಿಗಾಗಿ ಈಗಾಗಲೇ ಬುಕಿಂಗ್ ಸಹ ಸ್ವಿಕರಿಸಲಾಗುತ್ತಿದ್ದು, ಈ ತಿಂಗಳಾಂತ್ಯಕ್ಕೆ ಹೊಸ ಮಾದರಿಯು ರಸ್ತೆಗಿಳಿಯಲಿದೆ ಎನ್ನಲಾಗಿದೆ. ಹೊಸ ಗ್ರ್ಯಾಂಡ್ ವಿಟಾರಾದಲ್ಲಿ ಸದ್ಯ ಸಾಮಾನ್ಯ ಪೆಟ್ರೋಲ್ ಜೊತೆ ಪೆಟ್ರೋಲ್ ಹೈಬ್ರಿಡ್ ಮಾದರಿಯನ್ನು ಮಾರಾಟ ಮಾಡಲಾಗುತ್ತಿದೆ. ಇದೀಗ ಸಿಎನ್ ಜಿ ವರ್ಷನ್ ಪರಿಚಯಿಸಲಾಗುತ್ತಿದ್ದು, ಹೆಚ್ಚಿನ ಮೈಲೇಜ್ ಬಯಸುವ ಗ್ರಾಹಕರಿಗೆ ಇದು ಅತ್ಯುತ್ತಮ ಆಯ್ಕೆಯಾಗಲಿದೆ.

ಎಂಜಿ ಹೆಕ್ಟರ್ ಫೇಸ್ ಲಿಫ್ಟ್
ಇದು ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳ ಮಾರಾಟದಲ್ಲಿ ಸದ್ಯ ಮುಂಚೂಣಿಯಲ್ಲಿದ್ದು, ಇದೀಗ 2023ರ ಆವೃತ್ತಿಯೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಹೊಸ ಕಾರು ಮಾದರಿಯು ಈ ಬಾರಿ ಹಲವಾರು ಹೊಸ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ವಿನ್ಯಾಸದಲ್ಲಿ ಭಾರೀ ಬದಲಾವಣೆ ಪಡೆದುಕೊಳ್ಳಲಿದೆ. ಆದರೆ ಎಂಜಿನ್ ಆಯ್ಕೆ ಈ ಹಿಂದಿನಂತೆಯೇ ಮುಂದುವರಿಯಲಿದ್ದು, ಸುರಕ್ಷತೆಗಾಗಿ ಈ ಬಾರಿ ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಜೋಡಣೆ ಮಾಡಲಾಗಿದೆ.

Leave A Reply

Your email address will not be published.