Makara Sankrati 2023 : ಸಂಕ್ರಾಂತಿ ಈ ವರ್ಷ 14 ಅಥವಾ 15 ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ
ಹಿಂದೂ ಧರ್ಮದಲ್ಲಿ ಪೂಜೆ ಪುನಸ್ಕಾರಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಪ್ರತಿ ಹಬ್ಬದ ಆಚರಣೆ ಕೂಡ ಧರ್ಮದ ಕ್ರಮ ಪ್ರಕಾರ ನಡೆಸಲಾಗುತ್ತದೆ. ಪ್ರತಿಯೊಂದು ಹಬ್ಬದ ಆಚರಣೆಗೂ ಕೂಡ ಅದರದ್ದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಪ್ರತಿ ವರ್ಷ ಜನವರಿ ತಿಂಗಳಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಹಿಂದೂ ಧಾರ್ಮಿಕ ಸೂರ್ಯ ದೇವರಿಗೆ ಸಮರ್ಪಿಸಲಾಗುತ್ತದೆ. ಸೂರ್ಯನು ತನ್ನ ಪಥವನ್ನು ಬದಲಿಸುವ ದಿನವನ್ನು ದೇಶದಾದ್ಯಂತ ವಿವಿಧ ಹೆಸರು , ಆಚರಣೆ, ಸಂಪ್ರದಾಯಗಳಲ್ಲಿ ಆಚರಣೆ ಮಾಡಲಾಗುತ್ತದೆ.
ಮಕರ ಸಂಕ್ರಮಣದ ಆಚರಣೆಯ ಹಿಂದೆ ಅನೇಕ ಧಾರ್ಮಿಕ ನಂಬಿಕೆಗಳಿವೆ. ಇದರ ಜೊತೆಗೆ ಪುರಾಣ ಮತ್ತು ಜ್ಯೋತಿಷ್ಯದ ಅನುಸಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ನಂಬಿಕೆಯಿದೆ. ಈ ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಗುಜರಾತ್‌ನಲ್ಲಿ ಇದನ್ನು ಉತ್ತರಾಯಣ ಎಂಬ ಹೆಸರಿನಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದರೆ, ತಮಿಳುನಾಡಿನಲ್ಲಿ ಇದನ್ನು ಪೊಂಗಲ್ ಎಂದು, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ನಲ್ಲಿ ಮಾಘಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ನಮ್ಮ ದಕ್ಷಿಣ ಭಾರತದ ಜನರು ಆಚರಿಸುವ ದೊಡ್ಡ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದಾಗಿದ್ದು, ಆದರೆ ಈ ವರ್ಷ ಸಂಕ್ರಾಂತಿಯನ್ನು ಜನವರಿ 14 ಅಥವಾ ಜನವರಿ 15 ರಂದು ಯಾವಾಗ ಆಚರಿಸಬೇಕು ಎನ್ನುವ ಗೊಂದಲ ಹೆಚ್ಚಿನವರಲ್ಲಿ ಮನೆ ಮಾಡಿದೆ. ಮಕರ ಸಂಕ್ರಾಂತಿಯ ರಾಶಿ ಬದಲಾವಣೆ ರಾತ್ರಿಯಲ್ಲಿ ಆಗುತ್ತಿರುವ ಹಿನ್ನೆಲೆ ಹೆಚ್ಚಿನವರಿಗೆ ಯಾವಾಗ ಹಬ್ಬದ ಆಚರಣೆ ಮಾಡಬೇಕು ಎನ್ನುವ ಗೊಂದಲ ಮೂಡಿದೆ.
ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವುದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಆ ದಿನವೇ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ವಾತಾವರಣದಲ್ಲಿ ಸಹ ಕೆಲ ಬದಲಾವಣೆಯಾಗುತ್ತದೆ. ಸೂರ್ಯನು ಉತ್ತರಾಯಣದಲ್ಲಿದ್ದಾಗ, ಹಗಲಿನ ಸಮಯ ಕ್ರಮೇಣ ಹೆಚ್ಚಾಗುತ್ತದೆ. ಚಳಿಗಾಲದ ಗಾಳಿ ಕಡಿಮೆಯಾಗುತ್ತಿದ್ದಂತೆ ತಾಪಮಾನವು ಕ್ರಮೇಣ ಏರುತ್ತದೆ. ಈ ಬಾರಿ ರಾತ್ರಿ ವೇಳೆಯಲ್ಲಿ ಸೂರ್ಯನ ರಾಶಿಯ ಬದಲಾವಣೆ ಆಗುತ್ತಿರುವುದರಿಂದ ಹಬ್ಬವನ್ನು ಯಾವಾಗ ಆಚರಿಸಬೇಕು ಎಂಬ ಬಗ್ಗೆ ಹಲವು ಅನುಮಾನಗಳು ಮೂಡಿವೆ.
ಸಾಮಾನ್ಯವಾಗಿ ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಸ್ನಾನ ಮತ್ತು ದಾನಗಳನ್ನು ಮಾಡಲಾಗುತ್ತದೆ. ಪಂಚಾಂಗದ ಪ್ರಕಾರ ಸೂರ್ಯನ ಮಕರ ಸಂಕ್ರಾಂತಿ ಮುಹೂರ್ತವು ಜನವರಿ 14 ರ ಶನಿವಾರದಂದು ರಾತ್ರಿ 08:45 ಕ್ಕೆ ಇರುತ್ತದೆ. ಈ ನಡುವೆ ಸಂಕ್ರಾಂತಿ ಸ್ನಾನ ಮತ್ತು ದಾನವನ್ನು ರಾತ್ರಿಯಲ್ಲಿ ಮಾಡಬಾರದು ಎಂಬ ನಂಬಿಕೆ ಕೂಡ ಇದೆ. ಹೀಗಾಗಿ, ಸೂರ್ಯೋದಯವಾದಾಗ ಮಕರ ಸಂಕ್ರಾಂತಿ ಸ್ನಾನ ಮಾಡಬೇಕು ಎಂಬುದು ಬಲ್ಲವರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಈ ವರ್ಷ ಮಕರ ಸಂಕ್ರಾಂತಿಯನ್ನು 15ನೇ ಜನವರಿ 2023 ಭಾನುವಾರದಂದು ಆಚರಣೆ ಮಾಡಬೇಕು ಎಂಬುದು ಪಂಡಿತರ ಮಾತು.
ಮಕರ ಸಂಕ್ರಾಂತಿಯ ದಿನ ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣವನ್ನು ಪ್ರವೇಶಿಸುವ ಹಿನ್ನೆಲೆ ಆ ದಿನದಿಂದ ಹಳೆಯ ಕರ್ಮಗಳು ಅಂತ್ಯವಾಗುವ ಜೊತೆಗೆ ಮದುವೆ, ಗೃಹ ಪ್ರವೇಶ ಮೊದಲಾದ ಶುಭ ಕಾರ್ಯಕ್ರಮಗಳನ್ನು ನಡೆಸಲು ಶುಭ ಗಳಿಗೆ ಆರಂಭವಾಗುತ್ತದೆ. ಮಕರ ಸಂಕ್ರಾಂತಿಯನ್ನು ಸೂರ್ಯನು ಮಕರ ರಾಶಿಯಲ್ಲಿ ಸಂಕ್ರಮಿಸುವ ದಿನದಂದು ಆಚರಿಸಲಾಗುತ್ತದೆ.
ಈ ವರ್ಷ ಜನವರಿ 14 ರಂದು (ಶನಿವಾರ) ರಾತ್ರಿ 08.45 ಕ್ಕೆ ಸೂರ್ಯ ಮಕರ ರಾಶಿಯಲ್ಲಿ ಸಂಚರಿಸುತ್ತಿರುವ ಹಿನ್ನೆಲೆ ಮಕರ ಸಂಕ್ರಾಂತಿ ಮುಹೂರ್ತ ಜನವರಿ 14 ರಂದು ಬರಲಿದೆ ಎನ್ನಲಾಗುತ್ತಿದೆ. ಮಕರ ಸಂಕ್ರಾಂತಿಯನ್ನು ಜನವರಿ 15 ರಂದು (ಭಾನುವಾರ) ಬೆಳಗ್ಗೆ 07:15 ರಿಂದ ಸಂಜೆ 05:46 ರವರೆಗೆ ಆಚರಣೆ ಮಾಡಬಹುದು ಜೊತೆಗೆ ಬೆಳಗ್ಗೆ 07:15 ರಿಂದ 09:00 ವರೆಗೆ ಆಚರಣೆ ಮಾಡಬಹುದು ಎಂಬುದು ಪಂಡಿತರ ಅಭಿಪ್ರಾಯವಾಗಿದೆ.
ಈ ಬಾರಿ ಮಕರ ಸಂಕ್ರಾಂತಿ ಭಾನುವಾರ ಬರಲಿದೆ. ಇದರ ಜೊತೆಗೆ ಭಾನುವಾರ ಸೂರ್ಯನಿಗೆ ಮೀಸಲಾದ ವಾರ ಎಂಬ ನಂಬಿಕೆ ಕೂಡ ಇದ್ದು , ಆದಿತ್ಯ ವಾರ ಸೂರ್ಯನ ಪೂಜೆ ಮಾಡಲಾಗುತ್ತದೆ. ಆದರೆ ಈ ಬಾರಿ ಮಕರ ಸಂಕ್ರಾಂತಿ ಹಬ್ಬ ಕೂಡ ಅದೇ ದಿನ ಬರುವ ಹಿನ್ನೆಲೆ ಸೂರ್ಯನನ್ನು ಪೂಜಿಸುವುದರಿಂದ ಹೆಚ್ಚು ಫಲ ದೊರೆಯಲಿದೆ ಎನ್ನಲಾಗಿದೆ.