‘ ಬೆಳ್ತಂಗಡಿ ವಿಮಾನ ನಿಲ್ದಾಣ ಪ್ರಾಜೆಕ್ಟ್ ರಿಜೆಕ್ಟ್ ಮಾಡಿ ‘ |ವೀರೇಂದ್ರ ಹೆಗ್ಗಡೆಯವರಿಗೆ ಪ್ರಸಿದ್ಧ ಪರಿಸರ ಹೋರಾಟಗಾರ ಆರ್. ಚಂದ್ರಶೇಖರ್ ಆಗ್ರಹ

ಬೆಳ್ತಂಗಡಿಯ ವಿಮಾನ ನಿಲ್ದಾಣದ ಸಾಧಕ ಭಾದಕ ಬಗ್ಗೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ. ಅವುಗಳಲ್ಲಿ ಆಯ್ದ ಕೆಲವನ್ನು ಒಂದೊಂದಾಗಿ ಪ್ರಕಟಿಸಲಿದ್ದೇವೆ.
ಮೊದಲಿಗೆ, ಕರುನಾಡು ಕಂಡ ಖ್ಯಾತ ಪರಿಸರವಾದಿ, ಸಾಮಾಜಿಕ ಕಾರ್ಯಕರ್ತರೂ, ಶಿಕ್ಷಣ, ರಾಜಕೀಯ, ಸಾಮಾಜಿಕ ಕ್ಷೇತ್ರದ ಮಾಧ್ಯಮ ವಿಶ್ಲೇಷಕರು ಕೂಡಾ ಆಗಿರುವ ಬೆಂಗಳೂರಿನ ಆರ್. ಚಂದ್ರಶೇಖರ್ ಅವರು ಬೆಳ್ತಂಗಡಿ ವಿಮಾನ ನಿಲ್ದಾಣ ಪ್ರಾಜೆಕ್ಟ್ ನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ – ಸಂಪಾದಕ.

ಬೆಳ್ತಂಗಡಿಯಲ್ಲಿ ವಿಮಾನ ನಿಲ್ದಾಣ ಮಾಡಬೇಕೆಂದು   ಮಾನ್ಯ ವಸತಿ ಸಚಿವರಾದ ಸೋಮಣ್ಣ ಅವರು ವ್ಯಕ್ತ ಪಡಿಸಿದ್ದಾರೆ. ಆದರೆ ಈ ವಿಮಾನ ನಿಲ್ದಾಣ ಬೆಳ್ತಂಗಡಿಯಲ್ಲಿ ಬೇಕಾ ಬೇಡವಾ ಅನ್ನೋ ಆಲೋಚಿಸುವ ಸಂದರ್ಭ ಬಂದಿದೆ.

ಈಗಾಗಲೇ ಮಂಗಳೂರಿನಲ್ಲಿ, ಕರ್ನಾಟಕದ ಎರಡನೇ ಅತೀ ದೊಡ್ಡ ವಿಮಾನ ನಿಲ್ದಾಣ ಇದೆ. ಅದನ್ನು ಸಹ ವಿಸ್ತಾರ ಗೊಳಿಸುವ ಮನವಿ ಕೂಡಾ ಇದೆ. ಇಂತಹ ಸಂದರ್ಭದಲ್ಲಿ ಬೆಳ್ತಂಗಡಿಯಲ್ಲಿ ವಿಮಾನ ನಿಲ್ದಾಣ ಬೇಕಾ ಅನ್ನೋ ಪ್ರಶ್ನೆ. ಸಚಿವರು ಹೇಳುವ ಪ್ರಕಾರ, ಶ್ರೀ ಕ್ಷೇತ್ರ ಧರ್ಮಸ್ಥಳ, ಇಲ್ಲಿಗೆ ಬರುವ ಭಕ್ತರುಗಳಿಗಾಗಿ ವಿಮಾನ ನಿಲ್ದಾಣ ಮಾಡುವುದಾಗಿ ಸುಮಾರು 100 ಕೋಟಿ ಅಂದಾಜು ಮೊತ್ತದೊಂದಿಗೆ 100 ಎಕ್ರೆ ಭೂಮಿಯಲ್ಲಿ ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ.

ಕರ್ನಾಟಕದ ಪಾಲಿಗೆ ಧರ್ಮಸ್ಥಳ ಪೂಜನೀಯ ಸ್ಥಳ ಹಾಗೂ ಪವಿತ್ರ ಸ್ಥಳ. ಇಲ್ಲಿಗೆ ಸಾವಿರಾರು ಜನ  ಭಕ್ತರು ಬರುತ್ತಾರೆ ನಿಜ. ಆದರೆ ಇಲ್ಲಿಗೆ ಬರುವ ಶೇಕಡಾ 100ರ ಲ್ಲಿ ಸುಮಾರು 99% ಶೇಕಡಾ ಜನ ಮಧ್ಯಮ ವರ್ಗ ಮತ್ತು ಕೆಳ ವರ್ಗದವರಾಗಿದ್ದಾರೆ. ಹಾಗಿರುವಾಗ ವಿಮಾನದಲ್ಲಿ   ಇವರುಗಳು ಶ್ರೀ ಮಂಜುನಾಥನ ದರ್ಶನಕ್ಕೆ ಬರಲು ಆರ್ಥಿಕ ಸ್ಥಿತಿ ಗತಿ ಅವರಿಗೆ ಇರುವುದಿಲ್ಲ. ಅಲ್ಲದೆ, ಒಳ್ಳೆಯ ಆರ್ಥಿಕ ಸ್ಥಿತಿ ಉಳ್ಳವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಒಂದು ಅಲ್ಲಿಂದ ಕೇವಲ ಒಂದೂವರೆ ಘಂಟೆಗಳ ಪ್ರಯಾಣ ಮಾಡಿ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆಯಬಹುದು.

ಅಲ್ಲದೆ, ಈಗಾಗಲೇ ಹಾಸನದಲ್ಲಿ ವಿಮಾನ ನಿಲ್ದಾಣ ಕಾರ್ಯ ಆರಂಭವಾಗಿದೆ. ಹಾಸನವು ಮುಂದಿನ ಕಾಲದಲ್ಲಿ ಕಮರ್ಷಿಯಲ್ ಆಗಿ ಅಭಿವೃದ್ಧಿ ಆಗುವ ಸ್ಥಳವಾಗಿದೆ. ಹಾಸನದಲ್ಲಿ ವಿಮಾನ ನಿಲ್ದಾಣ ಆದಾಗ ಸುತ್ತಲಿನ ಕೊಡಗು, ಮತ್ತು ದಾವಣಗೆರೆಗೆ ಸಂಪರ್ಕ ಸುಲಭ ಸಾಧ್ಯ ಇದೆ. ಹೀಗಿರುವಾಗ, ಪರಿಸರದ ವಾತಾವರಣ ಹಾಳುಮಾಡುವುದು ಏಕೆ?

ನಾನು ಒಬ್ಬ ಪರಿಸರವಾದಿಯಾಗಿ ಹೇಳುವುದಾದರೆ, ಬೆಳ್ತಂಗಡಿಯಲ್ಲಿ ವಿಮಾನ ನಿಲ್ದಾಣ ಆದಾಗ ಕೇವಲ 100 ಎಕ್ರೆ ಮಾತ್ರ ಡೆವಲಪ್ ಆಗಲ್ಲ. ಅದರ ಜೊತೆಗೆ ಅಲ್ಲೊಂದು ಊರು ಸೃಷ್ಟಿ ಆಗತ್ತೆ. ಅಲ್ಲಿರುವ ಬೆಟ್ಟ ಗುಡ್ಡ ಪ್ರಾಣಿ ಸಂಕುಲ ನಾಶ ಆಗಿ ಪರಿಸರ ಮಾಲಿನ್ಯ ಉಂಟಾಗುವುದು ಸಹಜ. ಎಲ್ಲೋ ವಿಮಾನವು ಆಗಸದಲ್ಲಿ ನಮ್ಮ ನೆತ್ತಿಯ ಮೇಲೆ, ಹಲವು ಕಿಲೋಮೀಟರುಗಳ ಎತ್ತರದಲ್ಲಿ ಹಾರಿಹೋಗುವುದು ಬೇರೆ, ವಿಮಾನ ಒಂದೂರಿನ ನೆಲದಲ್ಲಿ ಇಳಿದು ಮಾಲಿನ್ಯ ನಿರ್ಮಿಸುವುದು ಬೇರೆ.

ಈಗಾಗಲೇ ಕೊಡಗಿನಲ್ಲಿ ಹೋಮ್ ಸ್ಟೇಗಳು ವ್ಯಾಪಾರಿಕರಣ  ಆದ ಕಾರಣ ಪ್ರಕೃತಿ ವಿಕೋಪಕ್ಕೆ ಒಳಗಾಗಿ ಗುಡ್ಡಗಳು ಕುಸಿದು ಅಕಾಲಿಕ ಮಳೆ ಸೃಷ್ಟಿ ಆಗಿದ್ದು ಚಳಿಗಾಲದಲ್ಲೂ ಮಳೆಯಾಗುತ್ತಿದೆ. ಕರ್ನಾಟಕದಲ್ಲಿ 365 ದಿವಸದಲ್ಲಿ ಯಾವಾಗ ಬೇಕಾದರೂ ಮಳೆ ಸುರಿಯಬಹುದು : ಅನ್ನೋದು ಊಹೆ ಮಾಡೋಕು ಸಾಧ್ಯವಿಲ್ಲ. ಯಾವ ಬುದ್ಧಿವಂತರು ಈ ವಿಮಾನ ನಿಲ್ದಾಣದ ಮನವಿಯನ್ನು ಮಾಡಿರುತ್ತಾರೆ ಅನ್ನೋದು ದೊಡ್ಡ ಯಕ್ಷ ಪ್ರಶ್ನೆ ಆಗಿಯೇ ಉಳಿದಿದೆ ?!!

ಜನತೆಗೆ ಶ್ರೀ ಧರ್ಮಸ್ಥಳದ ಬಗ್ಗೆ ಹೆಚ್ಚಿನ ಗೌರವ ಇದೆ. ಧರ್ಮಸ್ಥಳದ ಧಾರ್ಮಿಕ ಸ್ಥಳದ ಮೂಲ ಉದ್ದೇಶವೇ ಪ್ರಕೃತಿಯನ್ನು ಕಾಪಾಡಿ ಗ್ರಾಮೀಣ ಪ್ರದೇಶವನ್ನು ಉಳಿಸುವುದಾಗಿದೆ. ಆದ್ದರಿಂದ ಇಲ್ಲಿ ವಿಮಾನ ನಿಲ್ದಾಣ ಮಾಡುವುದು ಸರಿಯಲ್ಲ. ನಮ್ಮ ಸರ್ಕಾರಕ್ಕೆ ಪರಿಸರ ನಾಶ ಮಾಡಿ ಆ ನಂತರ ಪರಿಸರವನ್ನು ಮರು ನಿರ್ಮಾಣ ಮಾಡುವ ಇಚ್ಛಾ ಶಕ್ತಿ ಇಲ್ಲ ಅನ್ನೋದು ನಾವು ಈಗಾಗಲೇ ಹಲವು ಬಾರಿ ನೋಡಿರುತ್ತೇವೆ.

ಯಾರೋ ಒಬ್ಬರು, ಹರೀಶ್ ಪೂಂಜಾ ಎಂಬ ಶಾಸಕರ ಒತ್ತಾಯಕ್ಕೆ ಮಣಿದು100 ಎಕ್ರೆ ಜಾಗದಲ್ಲಿ ವಿಮಾನ ನಿಲ್ದಾಣ ಮಾಡಿದ್ದಾದರೆ ಮುಂದಿನ ದಿನಗಲ್ಲಿ ಆಗುವ ಪ್ರಕೃತಿಯ ಮುನಿಸು, ಬೆಳ್ತಂಗಡಿಯ ಸುತ್ತಮುತ್ತಲಿನ ಪ್ರದೇಶದ ಜನರನ್ನು ಅತೀ ದೊಡ್ಡ ಸಮಸ್ಸೆಯಾಗಿ ಮುಂದಿನ ಪೀಳಿಗೆಯವರನ್ನು ಕಾಡಲಿದೆ. ಇವತ್ತಿನ ಎಂಡೋ ಸಲ್ಫಾನ್ ಸಮಸ್ಯೆ ಇದೇ ತಾಲೂಕಿನಲ್ಲಿ ಬಗೆಹರಿಸಲು ಆಗದೆ ಕುಳಿತಿರುವುದು ನಮ್ಮ ಕಣ್ಣ ಮುಂದೆಯೇ ಇದೆ.

ಸನ್ಮಾನ್ಯ ವೀರೇಂದ್ರ ಹೆಗ್ಡೆಯವರು ಈ ವಿಮಾನ ನಿಲ್ದಾಣದ ಮನವಿಯನ್ನು ರಿಜೆಕ್ಟ್ ಮಾಡಬೇಕು. ಯಾಕಂದ್ರೆ ಇವರು ಪರಿಸರವಾದಿ ಮತ್ತು ಬುದ್ದಿವಂತರು. ಅವರು ಸಮಾಜ ಕಂಡಂತ ದಾರ್ಶನಿಕರು, ಇವರು ಪರಿಸರದ ಎಲ್ಲ ಆಗುಹೋಗುಗಳನ್ನು ಗಮನಿಸಿದವರು. ಆದ್ದರಿಂದ ವೀರೇಂದ್ರ ಹೆಗ್ಡೆಯವರು ಯಾರ ಒತ್ತಾಯಕ್ಕೂ ಮಣಿಯದೆ ಈ ವಿಮಾನ ನಿಲ್ದಾಣ ಅನುಮೋದನೆಯನ್ನು ನಿಲ್ಲಿಸಬೇಕಾಗಿ ಓರ್ವ ಪರಿಸರ ವಾದಿಯಾಗಿ ನಾನು ವಿನಂತಿ ಮಾಡಿಕೊಳ್ಳುತ್ತಿದ್ದೇನೆ.

ಅದಲ್ಲದೆ, ಮಂಗಳೂರು ಅಭಿವೃದ್ಧಿ ಹೊಂದಿದ ಪ್ರದೇಶ. ಆದ್ದರಿಂದ ಅಲ್ಲಿನ ವಿಮಾನ ನಿಲ್ದಾಣ ವನ್ನು ವಿಸ್ತಾರಗೊಳಿಸಿ ಸರಿಯಾಗಿ ಬಳಸಿದ್ದೇ ಆದಲ್ಲಿ ಸುತ್ತಮುತ್ತಲಿನ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡಕ್ಕೆ ಸಂಪರ್ಕ ಸುಲಭವಾಗುತ್ತೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ವ್ಯಾಪಾರಿಕರಣಗೊಳಿಸಬಹುದು. ಆದ್ದರಿಂದ ಬೆಳ್ತಂಗಡಿಯಲ್ಲಿ ಪ್ರಕೃತಿ ನಾಶ ಮಾಡಿ ವಿಮಾನ ನಿಲ್ದಾಣ ನಿರ್ಮಿಸೋದು ಪರಸರಕ್ಕೆ ನಾವು ಮಾಡುವ ದ್ರೋಹ. ಧರ್ಮಸ್ಥಳ ಒಂದು ಧಾರ್ಮಿಕ ಕ್ಷೇತ್ರ. ಧಾರ್ಮಿಕ ಕ್ಷೇತ್ರದಲ್ಲಿ ಪರಿಸರವೇ ದೇವರು. ಪರಿಸರ ನಾಶ ಮಾಡಿ ದೇವರನ್ನು  ಪೂಜಿಸುವುದರಲ್ಲಿ ಅರ್ಥವಿಲ್ಲ. ಪರಿಸರಕ್ಕೆ ವ್ಯಭಿಚಾರ ಮಾಡಿ ದೇವರ ದರ್ಶನ ಮಾಡುವ ಅವಶ್ಯಕತೆ ಇಲ್ಲ. ಬೆಳ್ತಂಗಡಿಗೆ ವಿಮಾನ ನಿಲ್ದಾಣ ಬೇಕಿಲ್ಲ. ನೀವೇ ನಿಧಾನವಾಗಿ ಯೋಚಿಸಿ, ನಿರ್ಧಾರ ತೆಗೆದುಕೊಳ್ಳಿ.

Leave A Reply

Your email address will not be published.