ಪರಿಸರದ ತೊಟ್ಟಿಲಿನಂತಹ ಬೆಳ್ತಂಗಡಿಗೆ ವಿಮಾನ ನಿಲ್ದಾಣ ಬೇಕಾ ? | ಬೇಕು-ಬೇಡಗಳ ಮಧ್ಯೆ ವಿಮಾನ ಇಳಿಸಲು ಹೊರಟ ಮೇಧಾವಿಗಳು ಯಾರು ?!

ಮತ್ತೆ ಅಮ್ಮ ಕರೆದಿದ್ದಾಳೆ. ನೇತ್ರಾವತಿ ಸಹಾಯಕ್ಕಾಗಿ ಆರ್ತನಾದ ಹಾಕಿದ್ದಾಳೆ. ತನ್ನ ಸಹಜ ಸೌಂದರ್ಯದಿಂದ, ಎಂದಿನ ಮುಗ್ಧತೆಯಿಂದ ಹಳ್ಳಿಯ ಆರೋಗ್ಯಕರ ಬಾಳು ಬದುಕುತ್ತಿರುವ ಜನರ ಅಸ್ತಿತ್ವಕ್ಕೆ ಒಂದು ದೊಡ್ಡ ಪೆಟ್ಟು ಬೀಳುವ ಸನ್ನಿವೇಶ ಮತ್ತೊಮ್ಮೆ ಉಂಟಾಗಿದೆ. ಕಾರಣ ವೈಯಕ್ತಿಕ ಸ್ವಾರ್ಥಕ್ಕಾಗಿ ಬೆಳ್ತಂಗಡಿ ತಾಲೂಕಿನ ಹಳ್ಳಿಯನ್ನು ದಿಲ್ಲಿ ಮಾಡಲು ಹೊರಟ ಧರ್ಮಕಾರಿಣಿ ಮತ್ತು ರಾಜಕಾರಣ !

ಬೆಳ್ತಂಗಡಿಗೆ ಇನ್ಮುಂದೆ ವಿಮಾನ ಬಂದು ನಿಲ್ಲುತ್ತಂತೆ. ಇನ್ನು ಬೆಳ್ತಂಗಡಿ ಪೂರ್ತಿ ಅಭಿವೃದ್ದಿ ಆಗುತ್ತೆ. ಹರೀಶ್ ಪೂಂಜಾ ನಾಯಕತ್ವದ ಇಲ್ಲಿ ಇನ್ಮುಂದೆ ಬಡವರೇ ಇರೋದಿಲ್ಲ. ಇಲ್ಲಿ ಮುಂದಕ್ಕೆ ಕೂಲಿ ಕೆಲಸಕ್ಕೆ ಯಾರೂ ಹೋಗಬೇಕಿಲ್ಲ. ಶೀಘ್ರದಲ್ಲಿ ನಮ್ಮ ತಾಲೂಕು, ವಿಶ್ವದಲ್ಲೇ ‘ ದ ಮೋಸ್ಟ್ ಡೆವೆಲಪ್ಡ್ ‘ ತಾಲೂಕು. ಇನ್ನು ಮುಂದಕ್ಕೆ ನಮ್ಮಲ್ಲಿ ಎಲ್ಲರೂ ಶ್ರೀಮಂತರು. ತಾಲೂಕಿನಲ್ಲಿ ಒಟ್ಟು 100 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ಆಗತ್ತೆ. ಫಳಫಳ ಹೊಳೆಯುವ ವಿಮಾನಗಳು ಬಂದು ನಿಂತು ಮತ್ತೆ ಆಕಾಶಕ್ಕೆ ಖುಷಿಯಿಂದ ಹಾರ್ತವೆ. ಹಕ್ಕಿಗಳಂತಹ, ಉದ್ದನೆಯ ಕಾಲುಗಳ ಗಗನ ಸಖಿಯರು ಮತ್ತಷ್ಟು ಕುಳುಕುತ್ತಾ ಬಂದು ಬೆಳ್ತಂಗಡಿಯ ಮಣ್ಣಿನಲ್ಲಿ ಇಳಿದು ಊರವರಲ್ಲಿ ಒಬ್ಬರಾಗಿ ಇರ್ತಾರೆ. ದೇಶದಲ್ಲಿ ಅಚ್ಚೆ ದಿನ್ ಬರುತ್ತೋ ಇಲ್ಲವೋ ಗೊತ್ತಿಲ್ಲ, ಬೆಳ್ತಂಗಡಿಯಲ್ಲಂತೂ ಅವತ್ತು ಮೋದಿ ಹೇಳಿದ್ದ ‘ ಆಚ್ಚೇ ದಿನ್ ‘ ಪಕ್ಕಾ. ಇಂತಹದೊಂದು ಅಶಾಭಾವನೆ ಅಥವಾ ಕಲ್ಪನೆ ಅಥವಾ ಭ್ರಮೆ ಜನರಲ್ಲಿ ಕೆಲವರಲ್ಲಾದರೂ ಮೂಡಿದ್ದರೆ ಆಶ್ಚರ್ಯವಿಲ್ಲ. ನಿಜಕ್ಕೂ ಅಂತದ್ದು ಏನಾದ್ರೂ ಆಗತ್ತಾ ?

ಇತ್ತೀಚೆಗೆ ತರಾತುರಿಯಲ್ಲಿ ವಸತಿ ಸಚಿವ ಮಿನಿಸ್ಟರ್ ಸೋಮಣ್ಣ ಬಂದು 100 ಕೋಟಿ ಬಿಡುಗಡೆ ಮಾಡಿ ಹೋದರು. ತಕ್ಷಣ ಬೆಳ್ತಂಗಡಿ ತಾಲೂಕಿನಲ್ಲಿ ತರಾತುರಿಯಲ್ಲಿ ಒಂದು ಸರ್ವೇ ಕಾರ್ಯ ಕೂಡಾ ನಡೆದಿದೆ. ವಿಮಾನ ನಿಲ್ದಾಣಕ್ಕೆ ಜಾಗ ಹುಡುಕುವ ಕಾರ್ಯ ಪ್ರಾರಂಭ ಆಗಿದೆ. ಈಗ ಇಲ್ಲಿ ಉದ್ಭವವಾಗಿರುವ ಪ್ರಶ್ನೆ ಏನೆಂದರೆ ಬೆಳ್ತಂಗಡಿಯಂತಹ ಪ್ರದೇಶಕ್ಕೆ ವಿಮಾನ ನಿಲ್ದಾಣ ಬೇಕಾ ಎನ್ನುವುದು?

ಬೆಳ್ತಂಗಡಿ ಅತ್ತ ಪಶ್ಚಿಮ ಘಟ್ಟಗಳ ತಪ್ಪಲಿನ ಪ್ರದೇಶ. ಅದು ಎಲ್ಲಾ ಕಡೆಗಳಿಂದಲೂ ಕಾಡುಗಳಿಂದ ಆವೃತವಾದ ಊರು. ಬೆಳ್ತಂಗಡಿ ತಾಲೂಕು ಇರುವುದು ಮಂಗಳೂರಿನಿಂದ ಕೇವಲ ಒಂದೂವರೆ ಗಂಟೆಗಳ ಪ್ರಯಾಣದ ದೂರದಲ್ಲಿ. ಅಷ್ಟು ಹತ್ತಿರದಲ್ಲಿ ಮಂಗಳೂರಿನಲ್ಲಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಅದು ರಾಜ್ಯದ ಎರಡನೆಯ ಅತಿ ದೊಡ್ಡ ವಿಮಾನ ನಿಲ್ದಾಣ. ಹೀಗಿರುವಾಗ ಬೆಳ್ತಂಗಡಿಗೆ ಯಾಕೆ ಬೇಕು ಮತ್ತೊಂದು ವಿಮಾನ ನಿಲ್ದಾಣ ? ಬೆಳ್ತಂಗಡಿಯಲ್ಲಿ ಅಂತದ್ದೇನಿದೆ ಕೈಗಾರಿಕೆಗಳು ? ಮುಂದೆ ಸದ್ಯೋಭವಿಷ್ಯದಲ್ಲಿ ಇಂಡಸ್ಟ್ರಿಯಲ್ ಹಬ್ ಬರುವ ಸಾಧ್ಯತೆ ಇದೆಯಾ ಬೆಳ್ತಂಗಡಿಗೆ ? ಸುತ್ತ ಮುತ್ತ ಕೊರಳು ಉಳುಕುವಷ್ಟು ಇಣುಕು ಹಾಕಿದರೂ ಅಂಥದ್ದು ಏನೂ ಕಂಡು ಬರುತ್ತಿಲ್ಲ !!

ಇಲ್ಲಿನ ಜನರಿಗೆ ಕೃಷಿ ಮಾಡೋದು ಮಾತ್ರ ಗೊತ್ತು. ಸಿಕ್ಕ ಹಬ್ಬದ ಮತ್ತು ಬಿಡುವಿನ ಸಮಯದಲ್ಲಿ ವಾಲಿಬಾಲ್ ಆಡುತ್ತಾ, ಕಬಡ್ಡಿ ಮ್ಯಾಚಿನ ಕನವರಿಕೆಯಲ್ಲೆ ಹುಡುಗರು ಸದಾ ಇರುತ್ತಾರೆ. ಅದರ ಜತೆಗೆ ಭಜನಾ ಕಾರ್ಯಕ್ರಮ. ಇದು ಬಿಟ್ಟರೆ ತಮ್ಮ ಕೃಷಿ ಮತ್ತು ಆ ಸಂಬಂಧಿತ ಕೆಲಸ ಕಾರ್ಯ. ಇಂಥ ಊರಿಗೆ ವಿಮಾನ ಇಳಿಸಲು ಹೊರಟಿದ್ದಾರೆ. ಇದು ಯಾವ ಪುರುಷಾರ್ಥಕ್ಕೆ ?

ಡಾ.ವೀರೇಂದ್ರ ಹೆಗ್ಗಡೆಯವರು ಹಲವು ಪರಿಸರ ಸಂಬಂಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರು. ರಾಜ್ಯದ ದೇಶದ ಹಲವು ಪರಿಸರ ತಜ್ಞರ ಮತ್ತು ಪರಿಸರಾಸಕ್ತರ ಜತೆ ಕೆಲಸ ಮಾಡಿದವರು. ಇಂತಹಾ ಸ್ಥಿತಿಯಲ್ಲಿ, ಬೆಳ್ತಂಗಡಿಯಂತಹ ಗ್ರಾಮ್ಯ ಸೊಗಡಿನ ಊರಿಗೆ ವಿಮಾನ ನಿಲ್ದಾಣವನ್ನು ತರುತ್ತಿರುವುದು ಯಾವ ಕಾರಣಕ್ಕೂ ಶೋಭೆಯಲ್ಲ.

ಇಷ್ಟೆಲ್ಲಾ ಪರಿಸರ ಪ್ರೇಮಿಗಳು, ತಜ್ಞರು ಪರಿಸರ ಹೋರಾಟಗಾರರು ದಕ್ಷಿಣ ಕನ್ನಡದಲ್ಲಿ ಮತ್ತು ಇಡೀ ರಾಜ್ಯದಲ್ಲಿ ಇದ್ದರೂ ಈ  ವಿಮಾನ ನಿಲ್ದಾಣಕ್ಕೆ ಯಾರು ಕೂಡಾ ವಿರೋಧ ವ್ಯಕ್ತ ಪಡಿಸುತ್ತಿಲ್ಲ. ಒಂದೇ ಒಂದು ಪ್ರತಿಭಟನೆ ನಡೆದಿಲ್ಲ. ಒಂದು ಚುರುಕ್ ಚೂರು ದನಿ ಕೂಡಾ ಯಾರೂ ಎತ್ತುತ್ತಿಲ್ಲ.

ಮೊನ್ನೆ, ಪರಿಸರ ಪ್ರೇಮಿಗಳ ಗುಂಪೊಂದು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುವ ಗಂಡಸರು ಅಂಗಿ ಮತ್ತು ಬನೀನು ಬಿಚ್ಚಿಬಿಟ್ಟು ಹೋಗೋದು ಯಾಕೆ ಎಂದು ಒಳ ಉಡುಪಿಗೆ ಕೊಕ್ಕೆ ಇಟ್ಟಿದ್ದರು. ಧಾರ್ಮಿಕ ದತ್ತಿ ಇಲಾಖೆಗೆ ದೂರು ಕೂಡ ನೀಡಿದ್ದರು. ಅಲ್ಲ ಸ್ವಾಮಿ, ಪರಿಸರಕ್ಕೂ ಅಂಗಿ ಬನೀನು ಲುಂಗಿಗೂ ಎತ್ತಣದ ಸಂಬಂಧವಯ್ಯಾ ?!

ಬೆಳ್ತಂಗಡಿಯಲ್ಲಿ ಜರೂರಾಗಿ ಬಗೆಹರಿಸಬೇಕಾದ ಹಲವಾರು ಸಮಸ್ಯೆಗಳಿವೆ. ಒಂದು ಕಡೆ ಪ್ರವಾಹ ಭೀತಿ. ಅತ್ತ ಗುಡ್ಡ ಜರಿಯುತ್ತಿದೆ. ಇಲ್ಲಿ ಹರಿಯುವ ನದಿಗಳಂತೂ ಯಾವತ್ತೂ ಸರಿ ಮಾಡಲಾಗದ ಸ್ಥಿತಿ ತಲುಪಿವೆ. ಅಂಗಿ ಬನೀನ್ ಪ್ರೀತಿಯ ಪರಿಸರ ಪ್ರೇಮಿಗಳೇ, ನಿಮಗೆ ಅಂಗಿ ಬನೀನು ಚಡ್ಡಿ ಲುಂಗಿ ಇಟ್ಕೊಂಡ್ ಮಾತ್ರ ಹೋರಾಟ ಮಾಡಬೇಕೆಂದರೆ ಅದೂ ಇಲ್ಲಿ ಸಾಧ್ಯ. ಇವತ್ತು ನೇತ್ರಾವತಿಯ ಕೆಳ ಹರಿವಿನ ನೀರಿನಲ್ಲಿ ಯಾವುದೇ ಜಲಚರ ಬದುಕುಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೇ ವರ್ಷಗಳ ಹಿಂದೆ ತಿಳಿನೀರಿನಿಂದ ಜುಳು ಜುಳು ಹರಿಯುತ್ತಿದ್ದ ನದಿ ಇವತ್ತು ಬೂದಿ ಬಣ್ಣದ ಕೊಳಚೆ ನೀರಿನ ತೊಟ್ಟಿ. ಈಗಾಗಲೇ ನೇತ್ರಾವತಿಗೆ ಧರ್ಮಸ್ಥಳದಲ್ಲಿ ಡ್ಯಾಮ್ ನಿರ್ಮಾಣ ಆಗಿದೆ. ನೀರು ಬಿಟ್ಟಾಗ ಒಮ್ಮೆಲೆ ಡ್ಯಾಮಿನ ಕೆಳ ಭಾಗ ತುಂಬಿ ಹರಿಯುತ್ತದೆ. ಉಳಿದಂತೆ ನದಿ ನಿರ್ಜಲ. ಅಲ್ಲಿ ಹುಡುಕಿದರೆ ಸಿಗೋದು ಹರಿದ ಅಂಗಿ ಬನೀನು ಸೀರೆ ಲುಂಗಿ ಇಂತದ್ದೇ ಮನುಷ್ಯ ತ್ರಾಜ್ಯಗಳು. ಹೋರಾಟ ಮಾಡಬೇಕಿದ್ದರೆ ನಾವು ನದಿಗೆ ಬೀಳುವ ಅಂಗಿ ಲುಂಗಿಗಾಗಿ ಮಾಡಬೇಕಿದೆ.

ಅದೊಂದು ಸಮಸ್ಯೆ ಇದೆ ಬಿಡಿ ಬೆಳ್ತಂಗಡಿಯಲ್ಲಿ. ಅದು ಯಾವತ್ತೂ ಪರಿಹಾರ ಆಗಲ್ಲ, ಅದರ ಆಸೆ ಬಿಟ್ಟು ಬಿಡೋದು ಒಳ್ಳೇದು. ಸರಕಾರಗಳು ಬಂದವು, ಬಿದ್ದವು, ಸತ್ತವು. ಜೀವನ್ಮರಣ ಹೋರಾಟದಲ್ಲಿರುವ ಎಂಡೋ ಸಲ್ಫಾನ್ ಸಂತ್ರಸ್ಥರಿಗೆ ಒಂದು ನೆಮ್ಮದಿಯ ಬಾಳು ಕೊಡಲು ನಮಗೆ ಸಾಧ್ಯ ಆಗಿಲ್ಲ. ನಮ್ಮನ್ನೂ ಸೇರಿ ನಾವು ಈ ತಾಲೂಕಿನಲ್ಲಿ ಹುಟ್ಟಿದ್ದೇ ವೇಸ್ಟ್ ! ಅಧಿಕಾರಕ್ಕಾಗಿ ಪಿಪಾಸು ರಾಜಕಾರಣ ಪ್ರತಿ ಬಾರಿ ಪ್ರಾಮಿಸ್ ಮಾಡಿ ಪಲಾಯನ ಮಾಡಿದೆ. ಇಲ್ಲಿ ಯಾರು ಭರವಸೆ ಕೊಟ್ಟಿಲ್ಲ ಹೇಳಿ. ಆದರೆ ಯಾರಿಗೂ ನೈಜ ಅಂತಃಕರಣ ಇರುವ ಇಚ್ಛಾ ಶಕ್ತಿ ಇಲ್ಲ. ಎಲ್ಲರಿಗೂ ಲಾಭ ನಷ್ಟದ ಲೆಕ್ಕ. ಇಡೀ ದೇಶದ ಗ್ರಾಮಗಳನ್ನು ಅಭಿವೃದ್ದಿ ಮಾಡುತ್ತೇವೆ ಎಂದು ಹೊರಟವರಿಗೆ ಒಂದು ತಾಲೂಕಿನ ಸಮಸ್ಯೆಯನ್ನೇ ಬಗೆಹರಿಸಲು ಆಗಿಲ್ಲ. ಆ ಅಮಾಯಕ ಜನ ಸತ್ತ ದಿನ ಅದು ಪರಿಹಾರ ಆದಂತೆ ಬಿಡಿ !!

ಇವತ್ತೂ ಸರಿ, ಇಲ್ಲಿ ಕಟ್ಟಲು ನಿರ್ಧರಿಸಿದ ವಿಮಾನ ನಿಲ್ದಾಣವನ್ನು ನಿಲ್ಲಿಸಬೇಕು. ಅದೇ ದುಡ್ಡಲ್ಲಿ ಎಂಡೋ ಸಲ್ಫಾನ್ ಸಂತ್ರಸ್ಥರೂ ಸೇರಿ ಇತರರ ಕಣ್ಣೀರು ಒರೆಸುವ ಕಾರ್ಯ ನಡೆಯಬೇಕು. ಬೆಳ್ತಂಗಡಿ ಇನ್ನೊಂದು ಎಂಡೋ ಸಲ್ಫಾನ್ ಮಾದರಿಯ ಸಮಸ್ಯೆಗೆ ವಸ್ತುವಾಗಿ ಬಲಿ ಬೀಳಬಾರದು.

ವಿಮಾನಗಳ ದೊಡ್ಡ ಸದ್ದು ಶಬ್ದಮಾಲಿನ್ಯ ಮಾಡಿ ಹಕ್ಕಿ ಪ್ರಾಣಿಗಳನ್ನು ಗಲಿಬಿಲಿಗೊಳಿಸಿ ಓಡಿಸುವ ಮೊದಲು, ಹಾಲು ಹನಿಸುವ ಹಸು ಕೆಚ್ಚಲಲ್ಲೆ ಹಾಲು ಅದುಮಿ ಭಯದಿಂದ ಹಗ್ಗ ಜಗ್ಗಿಕೊಂಡು ಗೊಡ್ಡು ದನವಾಗುವ ಮುನ್ನ, ವಿಮಾನಗಳು ಭೂಮಿಯ ಕೆಳಪದರದಲ್ಲಿ ಉಂಟುಮಾಡುವ ಪಾರ್ಟಿಕ್ಯುಲೇಟ್ ಮ್ಯಾಟರ್ ನ ಹೆಚ್ಚಳದ ವಾಯುಮಾಲಿನ್ಯಗೊಳಿಸಿ ಜನರ ನೆತ್ತಿಯ ಮೇಲೆ ಕತ್ತಿ ತೂಗು ಹಾಕುವ ಮುಂಚಿತವಾಗಿ, ವಿಮಾನದ ಮೂಲಕ ಬರುವ ವಿಪರೀತ ಬುದ್ದಿವಂತರ ಮತ್ತು ಅಷ್ಟೇ ಬುದ್ದಿವಂತ ದುಶ್ಚಟಗಳ ಸಾಂಸ್ಕೃತಿಕ ಕಸ ತಂದು ಊರು ಕೆಡಿಸುವ ಮುಂಚಿತವಾಗಿ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ.

ಸ್ವಯಂ ಸೈಲೆಂಟ್ ಆಗಿರುವ ನೈಜ ಪರಿಸರ ಪ್ರೇಮಿಗಳು ಮೈ ಕೊಡವಿಕೊಂಡು ಎಚ್ಚೆತ್ತುಕೊಳ್ಳಬೇಕಿದೆ. ಕಾರಣ ಭೂತಾಯಿ ಆರ್ತನಾದ ಇಟ್ಟಿದ್ದಾಳೆ. ನೇತ್ರಾವತಿ ತನ್ನ ಮಕ್ಕಳ ಭವಿಷ್ಯಕ್ಕಾಗಿ ಜೋರಾಗಿ ಕೂಗು ಹಾಕಿದ್ದಾಳೆ. ಹುಲಿಯ ಬಾಯಿಗೆ ಸಿಲುಕಿದ ಹಸುಳೆಯನ್ನು ರಕ್ಷಿಸಲು ಎರಡು ಯೋಚಿಸದೆ ಬರಿಗೈಯಲ್ಲಿ ಧಾವಿಸುವ ತಾಯಿಯಂತೆ, ಪರಿಸರ ರಕ್ಷಣೆಗೆ ನಾವು ಬೈರಾಸ್ ಕೊಡವಿಕೊಂಡು ಎದ್ದು ನಿಲ್ಲಬೇಕಿದೆ. ದೊಡ್ಡ ಕೇಕೆ ಹಾಕಬೇಕಿದೆ. ಅಮ್ಮನ ಆರ್ತನಾದಕ್ಕೆ ಮಕ್ಕಳಾಗಿ ಸ್ಪಂದಿಸಬೇಕಿದೆ.

Leave A Reply

Your email address will not be published.