ತನ್ನ ಬೈಕ್ ಗೆ ತಾನೇ ಬೆಂಕಿ ಹಚ್ಚಿಕೊಂಡ ಸವಾರ | ಸಂಚಾರ ನಿಯಮ ಉಲ್ಲಂಘನೆಗಾಗಿ ಪೋಲಿಸ್ ತಡೆದ ಹಿನ್ನೆಲೆ !

ರೂಲ್ಸ್ ಇರುವುದೇ ಬ್ರೇಕ್ ಮಾಡುವುದಕ್ಕೆ ಎಂದು ಹೆಚ್ಚಿನವರು ವಾಹನ ಸಂಚಾರ ಮಾಡುವಾಗ ಸ್ಪೀಡ್ ಆಗಿ ಹೋಗುವುದಲ್ಲದೆ ಅಪಾಯಕ್ಕೆ ಆಹ್ವಾನ ಕೊಡುವ ರೀತಿ ವರ್ತಿಸಿ, ನೋಡುಗರಿಗೂ ಕೂಡ ಮೈ ಜುಮ್ ಎನ್ನಿಸುವಷ್ಟು ಹೆದರಿಕೆ ಸೃಷ್ಟಿಸುವ ಪ್ರಸಂಗಗಳು ದಿನನಿತ್ಯದಲ್ಲಿ ಜರುಗುತ್ತಿರುತ್ತದೆ.

ಸಂಚಾರ ನಿಯಮ ಉಲ್ಲಂಘನೆಗಾಗಿ ನಿಲ್ಲಿಸಿದ ತನ್ನ ಬೈಕ್ ಅನ್ನು ಬೈಕ್‌ ಸವಾರ ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ ಘಟನೆ ವರದಿಯಾಗಿದೆ.

ಸೋಮವಾರ ಸಂಜೆ ಅಮೀರಪೇಟ್‌ನ ಮೈತ್ರಿವನಂನಲ್ಲಿ ಬೈಕ್ ಸವಾರ ತನ್ನ ಬೈಕ್ಗೆ ಸೀಮೆಣ್ಣೆ ಸುರಿದು ಹೊತ್ತಿಸಿದ ಘಟನೆ ನಡೆದಿದೆ. ಅಮೀರ್‌ಪೇಟ್‌ನಲ್ಲಿ ಮೊಬೈಲ್ ಫೋನ್ ಅಂಗಡಿಯನ್ನು ನಡೆಸುತ್ತಿರುವ ಎಸ್ ಅಶೋಕ್ ಎಂಬ ವ್ಯಕ್ತಿ ಸಂಚಾರಿ ನಿಯಮವನ್ನು ಪಾಲಿಸದೆ, ತಪ್ಪು ದಿಕ್ಕಿನಲ್ಲಿ ಪ್ರಯಾಣಿಸುತ್ತಿದ್ದಾಗ ಗಮನಿಸಿದ ಪೋಲೀಸರು ಆತನನ್ನು ತಡೆದಿದ್ದಾರೆ.

ಟ್ರಾಫಿಕ್ ಪೊಲೀಸ್ ಅಧಿಕಾರಿಯ ಪ್ರಕಾರ, ಬೈಕ್ ಸವಾರ ನಿತ್ಯ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದನೆಂದು ಮಾಹಿತಿ ನೀಡಿದ್ದು, ಹಾಗಾಗಿ ಬೈಕ್ ವಶ ಪಡಿಸಿಕೊಂಡಿದ್ದರೆಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಜಗಳವಾಗಿ, ಪೊಲೀಸರೊಂದಿಗೆ ಮಾತಿನ ಚಕಮಕಿಯಾಗಿ ಹತಾಶೆಗೊಂಡ ಬೈಕ್ ಸವಾರ ಸ್ವಲ್ಪ ಸಮಯದ ಬಳಿಕ ತನ್ನ ಅಂಗಡಿಯನ್ನು ಪ್ರವೇಶಿಸಿ, ಸೀಮೆಣ್ಣೆ ಬಾಟಲಿಯನ್ನು ತಂದು ತನ್ನ ಬೈಕ್‌ಗೆ ಸುರಿದು ಬೆಂಕಿ ಹಚ್ಚಿದ್ದಾನೆ.

ಇದನ್ನು ಗಮನಿಸಿದ ಸಂಚಾರಿ ಪೊಲೀಸರು ಸ್ಥಳೀಯ ಕಾನೂನು ಸುವ್ಯವಸ್ಥೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಧಾವಿಸಿ ಬೆಂಕಿ ನಂದಿಸಿದ್ದಾರೆ. ಅತ್ತೆ ಮೇಲಿನ ಸಿಟ್ಟು ಕೊತ್ತಿ ಮೇಲೆ ಎಂಬಂತೆ ಯಾರದೋ ಸಿಟ್ಟಿನಲ್ಲಿ ತನ್ನ ಬೈಕ್ ಗೆ ಬೆಂಕಿ ಹಚ್ಚಿದರೂ ಕೂಡ ನಷ್ಟ ಸಂಭವಿಸಿದ್ದು ಸವಾರನಿಗೆ ಎಂಬುದನ್ನೂ ಮರೆತಿರುವಂತೆ ಬೈಕ್ ಸವಾರ ವರ್ತಿಸಿದ್ದಾನೆ.

Leave A Reply

Your email address will not be published.