ನಾಗರ ಪಂಚಮಿಯಂದು ಹುತ್ತಕ್ಕೆ ಕೋಳಿ ಬಲಿ ಕೊಡುವ ವಿಚಿತ್ರ ಪದ್ಧತಿ ; ಇದರ ಹಿಂದೆಯೂ ಇದೆ ಕಾರಣ!

ವಿಜಯನಗರ: ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬ ಎಂದರೆ ಅದು ನಾಗರ ಪಂಚಮಿ. ಶ್ರಾವಣ ಶುದ್ಧ ಪಂಚಮಿಯಿಂದ ಈ ಹಬ್ಬ ಆಚರಿಸಲ್ಪುಡುತ್ತದೆ. ಈ ದಿನ ಹಾವಿಗೆ ಹಾಲೆರೆದು, ಪೂಜಿಸಿ, ಸಕಲ ಇಷ್ಟಾರ್ಥಗಳೂ ಪ್ರಾಪ್ತಿಯಾಗುವಂತೆ ನಾಗದೇವನನ್ನು ಬೇಡುವುದು ವಾಡಿಕೆ. ಈ ದಿನ ಶೇಷ ನಾಗ ಮತ್ತು ಶ್ರೀ ವಿಷ್ಣುವನ್ನು ಭಕ್ತಿಯಿಂದ ಸ್ತುತಿಸಲಾಗುತ್ತದೆ.

ಆದರೆ, ನಾವೆಲ್ಲ ನಾಗರ ಪಂಚಮಿಯಂದು ನಾಗಪ್ಪನಿಗೆ ಹಾಲೆರೆದು ಪ್ರಾರ್ಥಿಸಿದರೆ, ಇಲ್ಲೊಂದು ಗ್ರಾಮದಲ್ಲಿ ರಕ್ತದ ಅಭಿಷೇಕ ಮಾಡುತ್ತಾರಂತೆ. ಹೌದು. ಈ ಗ್ರಾಮದಲ್ಲಿ ಕೋಳಿ‌ಕುಯ್ದು ಹುತ್ತಕ್ಕೆ ರಕ್ತವನ್ನು ಬಿಡುತ್ತಾರೆ. ಇಂತಹುದೊಂದು ಆಚರಣೆ ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿ ನಡೆಯುತ್ತದೆ.

ನಾಗರ ಪಂಚಮಿಯನ್ನು ಕೊರಚ ಮತ್ತು‌ ಕೊರಮ ಸಮುದಾಯದವರು ಈ ರೀತಿ ಆಚರಿಸಿದ್ದಾರೆ. ಆದರೆ, ಯಾವುದೇ ಒಂದು ಆಚರಣೆಗೆ ಕಾರಣವು ಇದ್ದೇ ಇರುತ್ತದೆ. ಅದರಂತೆ ಇಲ್ಲಿನ ಜನರ ಈ ರೀತಿಯ ಸೇವೆಗೂ ಒಂದು ಕಾರಣವಿದೆ.

ಬುಡಕಟ್ಟು ಸಮುದಾಯಕ್ಕೆ ಸೇರಿದ ಇವರು, ಈ ಹಿಂದೆ ಅಡವಿಯಲ್ಲಿ ವಾಸ ಮಾಡುತ್ತಿದ್ದರು. ಈಜಲು ಗಿಡ, ಹುಲ್ಲುಗಳಿಂದ ಹಗ್ಗ ಸೇರಿ ಮತ್ತಿತರ ವಸ್ತು ತಯಾರಿಸುತ್ತಿದ್ದರು. ಆಗ ಹಾವುಗಳ ಕಡಿತಕ್ಕೊಳಗಾಗಿ ಜನ ಸಾಯುತ್ತಿದ್ದರಂತೆ. ಈ ಬಗ್ಗೆ ಹಿರಿಯರ ಸಲಹೆ ಮೇರೆಗೆ ನಾಗರ ಪಂಚಮಿ ದಿನದಂದು ಕೋಳಿ ಬಲಿ ಕೊಟ್ಟು ರಕ್ತವನ್ನು ಹಾಲಿನಂತೆ ಹುತ್ತಕ್ಕೆ ಎರೆಯುತ್ತಾರಂತೆ.

ಇದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಾಗಿದ್ದು, ಹಾವಿನ ಹುತ್ತಕ್ಕೆ ರಕ್ತ ಎರೆದರೆ ಮನುಷ್ಯರನ್ನು ಹಾವು ಕಚ್ಚುವುದಿಲ್ಲ ಎಂಬುದು ಇಲ್ಲಿನ ಪದ್ಧತಿ. ಒಟ್ಟಾರೆ, ಈ ಲೋಕದಲ್ಲಿ ಏನೆಲ್ಲಾ ಪದ್ಧತಿಗಳು ಇದೆ ಎಂಬುದು ಅವರವರ ಆಚರಣೆಯಿಂದ ತಿಳಿದು ಬರುತ್ತಿದೆ ಅಷ್ಟೇ..

Leave A Reply

Your email address will not be published.