ದೇಶಾದ್ಯಂತ ಮದರ್ ತೆರೆಸಾ ಚಾರಿಟಿಯ ಬ್ಯಾಂಕ್ ಖಾತೆ ಸ್ಥಗಿತ !! | ಭಾರಿ ಚರ್ಚೆಗೆ ಗ್ರಾಸವಾಗಿದ್ದ ಈ ವಿಚಾರದ ಕುರಿತು ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ

ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾದ ಮದರ್ ತೆರೆಸಾ ಚಾರಿಟಿಯ ಬ್ಯಾಂಕ್ ಖಾತೆ ಸ್ಥಗಿತ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಚಾರಿಟಿಯೇ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಮನವಿ ಮಾಡಿತ್ತು ಎಂದು ಹೇಳಿದೆ.

ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದ್ದು, ‘ಮದರ್ ತೆರೇಸಾ ಮಿಷನರೀಸ್ ಆಫ್ ಚಾರಿಟಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿಲ್ಲ. ಕೋಲ್ಕತ್ತ ಮೂಲದ ಈ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಲಿಖಿತ ಮನವಿ ಮೂಲಕ ಖಾತೆಗಳನ್ನು ರದ್ದುಗೊಳಿಸುವಂತೆ ಕೋರಿತ್ತು’ ಎಂದು ಸಚಿವಾಲಯ ತಿಳಿಸಿದೆ.

ಡಿಸೆಂಬರ್ 25ರಂದು ಈ ಸಂಸ್ಥೆಗೆ ವಿದೇಶಿ ಅನುದಾನಗಳನ್ನು ಪಡೆಯಲು ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ಪರವಾನಗಿ ನಿರಾಕರಿಸಲಾಗಿತ್ತು ಎಂಬ ವಿಷಯವನ್ನು ಗೃಹ ಸಚಿವಾಲಯ ಈ ಸಂದರ್ಭದಲ್ಲಿ ದೃಢಪಡಿಸಿದೆ. ಪರವಾನಗಿ ನೀಡುವುದರಿಂದ ವ್ಯತಿರಿಕ್ತ ಪರಿಣಾಮಗಳುಂಟಾಗುತ್ತವೆ ಎಂಬುದನ್ನು ಪರಿಶೀಲಿಸಿದ ಬಳಿಕವೇ ನಿರಾಕರಿಸಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

‘ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅದರಲ್ಲಿರುವ ವ್ಯತಿರಿಕ್ತ ಅಂಶಗಳನ್ನು ಪರಿಗಣಿಸಿ ಮಿಷನರಿ ಆಫ್ ಚಾರಿಟಿಯ ಪರವಾನಗಿ ನವೀಕರಣ ಮನವಿಯನ್ನು ತಿರಸ್ಕರಿಸಲಾಗಿದೆ. ಮಿಷನರಿ ಆಫ್ ಚಾರಿಟಿಯ FCRA ನೋಂದಣಿ 2021ರ ಡಿಸೆಂಬರ್ 31ರ ತನಕ ಊರ್ಜಿತದಲ್ಲಿರುತ್ತೆ’ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಬಗ್ಗೆ ಮಿಷನರೀಸ್ ಆಫ್ ಚಾರಿಟಿ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಮಿಷನರೀಸ್ ಆಫ್ ಚಾರಿಟಿ ಬ್ಯಾಂಕ್ ಖಾತೆಗಳನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ ಎಂಬ ವರದಿಗಳ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಘಾತ ವ್ಯಕ್ತಪಡಿಸಿದ್ದರು. ಆ ಬಳಿಕ ಈ ವಿಚಾರ ಸಾಕಷ್ಟು ವಿವಾದ ಹಾಗೂ ಗೊಂದಲಕ್ಕೆ ಕಾರಣವಾಗಿತ್ತು. ‘ಮದರ್ ತೆರೇಸಾ ಮಿಷನರೀಸ್ ಆಫ್ ಚಾರಿಟಿಗೆ ಸೇರಿದ ಎಲ್ಲ ಬ್ಯಾಂಕ್ ಖಾತೆಗಳನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿರೋ ಸುದ್ದಿಯನ್ನು ಕ್ರಿಸ್ಮಸ್ ಸಂದರ್ಭದಲ್ಲೇ ಕೇಳಿ ನನಗೆ ಆಘಾತವಾಗಿದೆ. ಇದರಿಂದ 22,000 ರೋಗಿಗಳು ಹಾಗೂ ನೌಕರರಿಗೆ ಆಹಾರ ಮತ್ತು ಔಷಧವಿಲ್ಲದಂತಾಗಿದೆ. ಕಾನೂನು ಎಲ್ಲಕ್ಕಿಂತ ಮೇಲಾದರೂ ಮಾನವೀಯ ಕಾರ್ಯಗಳ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಬಾರದು’ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದರು.

Leave A Reply

Your email address will not be published.