15 ತಿಂಗಳುಗಳಿಂದ ಬೆಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲೇ ಕೊಳೆತು ಹೋಗುತ್ತಿದೆ ಕೊರೋನಾ ಗೆ ಬಲಿಯಾದ 2 ಶವಗಳು!! | ಆಸ್ಪತ್ರೆಯ ಈ ಅಮಾನವೀಯ ಪ್ರಕರಣ ತಡವಾಗಿ ಬೆಳಕಿಗೆ

ಬೆಂಗಳೂರು:2019 ಡಿಸೆಂಬರ್ ನಲ್ಲಿ ಪ್ರಾರಂಭವಾದ ಕೊರೋನ ಅದೆಷ್ಟೋ ಜನರ ಪ್ರಾಣ ಪಡೆದಿದೆ.ಇಡೀ ಜನತೆಯೇ ಬೆಚ್ಚಿಬಿದ್ದ ಸನ್ನಿವೇಶವಾಗಿತ್ತು.ಹಲವು ಕುಟುಂಬಗಳ ಕಣ್ಣೀರ ಧಾರೆಯೇ ಹರಿದಿತ್ತು. ಇಷ್ಟೆಲ್ಲಾ ವ್ಯಥೆ ಅನುಭವಿಸಿದರೂ, ಆಸ್ಪತ್ರೆ ಸಿಬ್ಬಂದಿಗಳ ಬೇಜವಾಬ್ದಾರಿ ಮಾತ್ರ ನಿಲ್ಲಲಿಲ್ಲ.ಹೌದು.ಬೆಂಗಳೂರಿನ ರಾಜಾಜಿನಗರದ ಇಎಸ್​ಐ ಆಸ್ಪತ್ರೆಯಲ್ಲಿ ಕೋರೊನಾ ಸೋಂಕಿಗೆ ಬಲಿಯಾಗಿದ್ದ ವಿಧವೆ ಸಹಿತ ಇಬ್ಬರ ಮೃತದೇಹಗಳು ಸಿಬ್ಬಂದಿಯ ಬೇಜವಾಬ್ದಾರಿಯಿಂದಾಗಿ 15 ತಿಂಗಳ ಕಾಲ ಅಂತ್ಯಸಂಸ್ಕಾರವನ್ನೂ ಕಾಣದೆ ಶವಾಗಾರದ ಶೈತ್ಯಪೆಟ್ಟಿಗೆಯಲ್ಲಿ ಕೊಳೆಯುತ್ತಿದ್ದ ಪ್ರಕರಣ ಶನಿವಾರ ಬೆಳಕಿಗೆ ಬಂದಿದೆ.

ಪ್ರಕರಣದ ವಿವರ :

ಕೋರೊನಾ ಸೋಂಕು ತಗುಲಿದ್ದ ಚಾಮರಾಜಪೇಟೆಯ 40 ವರ್ಷದ ಮಹಿಳೆ ದುರ್ಗಾ ಮತ್ತು 35 ವರ್ಷದ ಕೆ.ಪಿ. ಅಗ್ರಹಾರದ ಮುನಿರಾಜು ಚಿಕಿತ್ಸೆಗೆಂದು ಕಾರ್ವಿುಕರ ವಿಮಾ ಆಸ್ಪತ್ರೆ ಇಎಸ್​ಐಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ 2020ರ ಜುಲೈನಲ್ಲಿ ಅಸುನೀಗಿದ್ದರು. ಬಳಿಕ ಶವಗಳನ್ನು ಶವಾಗಾರದ ಶೈತ್ಯಾಗಾರಕ್ಕೆ ಸ್ಥಳಾಂತರಿಸಲಾಗಿತ್ತು. ಇದರ ನಡುವೆ ಇಎಸ್​ಐ ಆಸ್ಪತ್ರೆಯಲ್ಲಿ ಹೊಸ ಶವಾಗಾರ ತೆರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಹಳೆಯ ಶವಾಗಾರ ಬಂದ್ ಮಾಡಲಾಗಿತ್ತು. ದುರ್ದೈವವೆಂದರೆ, ಮುಚ್ಚಲ್ಪಟ್ಟ ಹಳೆಯ ಶವಾಗಾರದಲ್ಲಿ ಈ ಇಬ್ಬರು ನತದೃಷ್ಟರ ಕಳೇಬರ ಉಳಿದುಕೊಂಡಿದ್ದವು. ಆನಂತರ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಹಳೆ ಶವಾಗಾರದ ಕಡೆ ಕಣ್ಣೆತ್ತಿಯೂ ನೋಡಿಲ್ಲ. ಮೃತರ ಕುಟುಂಬ ಸದಸ್ಯರು ಸಹ ಆಸ್ಪತ್ರೆಗೆ ಹೋಗಿ ವಿಚಾರಿಸುವ ಪ್ರಯತ್ನ ಮಾಡಿಲ್ಲ ಎನ್ನಲಾಗುತ್ತಿದೆ.

ಹಳೆಯ ಶವಾಗಾರ ಪರಿಶೀಲಿಸುವುದಕ್ಕಾಗಿ ಮೊನ್ನೆ ನ.27ರಂದು ಬಾಗಿಲು ತೆಗೆದು ನೋಡಿದಾಗ ಶೈತ್ಯಾಗಾರದಲ್ಲಿ ಮಹಿಳೆ ಮತ್ತು ಪುರುಷನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಸ್ಪತ್ರೆ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಇದು ದಿಗ್ಭ್ರಮೆಗೊಳಿಸಿದೆ. ಬಳಿಕ ರಾಜಾಜಿನಗರ ಠಾಣೆಗೆ ವಿಷಯ ಮುಟ್ಟಿದೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು 2 ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಕೊಳೆತ ಶವಗಳ ಮುಖ ಚಹರೆ ಪತ್ತೆಯಾಗಿರಲಿಲ್ಲ. ದಾಖಲೆ ಪರಿಶೀಲಿಸಿದಾಗ ಮೃತರ ಗುರುತು ಗೊತ್ತಾಗಿದೆ. ವಿಳಾಸ ಮತ್ತು ಸಂಬಂಧಿಕರ ಮೊಬೈಲ್ ನಂಬರ್ ಪಡೆದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

ಇದು ಇಎಸ್​ಐ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. 2019ರ ಡಿಸೆಂಬರ್​ನಲ್ಲಿ ಕರೊನಾ ಕಾಣಿಸಿಕೊಂಡು, 2020ರ ಮಾರ್ಚ್​ನಲ್ಲಿ ಭಾರತದಲ್ಲಿ ಲಾಕ್​ಡೌನ್ ವಿಧಿಸಲಾಯಿತು.ಸಾವನ್ನಪ್ಪಿದ್ದವರ ಶವವನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡದೆ ಬಿಬಿಎಂಪಿ ವತಿಯಿಂದಲೇ ಕರೊನಾ ಮಾರ್ಗಸೂಚಿ ಪ್ರಕಾರ ಶವ ಸಂಸ್ಕಾರ ನಡೆಸಲಾಗುತ್ತಿತ್ತು. ಮೊದಲ ಅಲೆಯಲ್ಲಿ ಇದೇ ಮಾರ್ಗಸೂಚಿ ಪಾಲನೆ ಮಾಡಲಾಯಿತು. ಮೊದಲ ಅಲೆಯಲ್ಲೇ ದುರ್ಗಾ ಮತ್ತು ಮುನಿರಾಜು ಕರೊನಾ ಸೋಂಕು ತಗುಲಿ ಚಿಕಿತ್ಸೆಗೆಂದು ಇಎಸ್​ಐ ಆಸ್ಪತ್ರೆಗೆ ದಾಖಲಾಗಿದ್ದು,ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಶವಗಳನ್ನು ಶವಗಾರಕ್ಕೆ ಸ್ಥಳಾಂತರ ಮಾಡಿದ್ದಾರೆ. ಮೃತರ ಕುಟುಂಬಕ್ಕೆ ವಿಷಯ ತಿಳಿಸಿದ ಬಳಿಕ ಶವ ಸಂಸ್ಕಾರಕ್ಕೆ ಬಿಬಿಎಂಪಿಗೆ ಹಸ್ತಾಂತರ ಮಾಡಬೇಕಿತ್ತು. ಅದನ್ನು ಮಾಡದೆ ಕರ್ತವ್ಯ ಲೋಪ ಎಸಗಿದ್ದಾರೆ ಎನ್ನಲಾಗುತ್ತಿದೆ.

ಎರಡು ಶವಗಳು ಕೊಳೆತ ಸ್ಥಿತಿಯಲ್ಲಿದ್ದರಿಂದ ಮುಖ ಚಹರೆ ಸಿಗದೆ ದೊಡ್ಡ ತಲೆನೋವಾಗಿತ್ತು. ಕೊನೆಗೆ ಒಂದೂವರೆ ವರ್ಷದಿಂದ ಮೃತರಾದವರ ಪಟ್ಟಿ ಮತ್ತು ಹಸ್ತಾಂತರ ಮಾಡಿದ ಶವಗಳ ವಿವರವನ್ನು ಸುದೀರ್ಘವಾಗಿ ಪರಿಶೀಲನೆ ನಡೆಸಿದಾಗ ಗುರುತು ಗೊತ್ತಾಗಿದೆ. ಪೊಲೀಸರು, ದುರ್ಗಾ ಅವರ ಅಣ್ಣನ ಮೊಬೈಲ್ ನಂಬರ್ ಪಡೆದು ಕರೆ ಮಾಡಿ ವಿಷಯ ಮುಟ್ಟಿಸಿದರೂ ಪ್ರಯೋಜನವಾಗಿಲ್ಲ. ಮತ್ತೊಂದೆಡೆ ಮುನಿರಾಜು ಕಡೆಯವರ್ಯಾರೂ ಸಂಪರ್ಕಕಕ್ಕೆ ಸಿಕ್ಕಿಲ್ಲ. ಹೀಗಾಗಿ ರಾಜಾಜಿನಗರ ಪೊಲೀಸರು ಸೋಮವಾರ ಕೆ.ಪಿ. ಅಗ್ರಹಾರಕ್ಕೆ ಭೇಟಿ ಕೊಟ್ಟು ಮುನಿರಾಜು ಅವರ ಪಾಲಕರು ಮತ್ತು ಸಂಬಂಧಿಕರ ಬಗ್ಗೆ ಮಾಹಿತಿ ಕಲೆ ಹಾಕಲು ನಿರ್ಧರಿಸಿದ್ದಾರೆ.

ಒಟ್ಟಾರೆ ಈ ಪರಿಸ್ಥಿತಿ ಕಂಡರೆ ಒಮ್ಮೆಗೆ ಅಯ್ಯೋ ಎನಿಸುತ್ತದೆ. ಆದರೆ ಇದಕ್ಕೆ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ ಎನ್ನಬೇಕೆ!?, ಮನೆಯವರು ಶವವನ್ನು ಮನೆಗೆ ತೆಗೆದುಕೊಂಡು ಹೋಗದೆ ಅವರ ನಿರ್ಲಕ್ಷ ಎನ್ನಬೇಕೆ!?, ಆದ್ರೆ ಈಗ ಮಾತ್ರ ಶವದ ನತದೃಷ್ಟ ಎಂದು ಹೇಳಬೇಕಷ್ಟೆ ಅಲ್ಲವೇ!!??

Leave A Reply

Your email address will not be published.