ದ.ಕ : ದಸರಾ,ನವರಾತ್ರಿ ಮಾರ್ಗಸೂಚಿ ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ | ಹೀಗಿವೆ ಸೂಚನೆಗಳು..

ದಸರಾ, ನವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಅ.7ರಿಂದ ಅ.16ರ ವರೆಗೆ ಸೀಮಿತವಾಗಿ ಮಾರ್ಗಸೂಚಿಯನ್ನು ಪ್ರಕಟಿಸಿದ್ದು ಕೊರೊನಾ ಪಾಸಿಟಿವಿಟಿ ದರ ಏರಿಕೆಗೆ ಕಾರಣವಾಗದಂತೆ ಸರಳವಾಗಿ ಆಚರಿಸಬೇಕು ಎಂದು ತಿಳಿಸಿದೆ.

ಈ ಕುರಿತು ಮಾರ್ಗಸೂಚಿಯನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತುನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಡಾ| ರಾಜೇಂದ್ರ ಕೆ.ವಿ ಅವರು ಸೋಮವಾರ ಹೊರಡಿಸಿದ್ದಾರೆ.

ಸೂಚನೆಗಳು ಹೀಗಿವೆ..
-ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಆಡಳಿತ ಮಂಡಳಿ, ಅರ್ಚಕರು, ಸಿಬಂದಿ ಸೇರಿದಂತೆ ಎಲ್ಲ ವರ್ಗದವರು ಕೋವಿಡ್‌ ಸಮುಚಿತ ವರ್ತನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
– ದೇವಾಲಯಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಕೊರೊನಾ 2 ಲಸಿಕೆಗಳನ್ನು ಪಡೆದಿರುವ ಬಗ್ಗೆ ಪ್ರಮಾಣಪತ್ರವನ್ನು ಮೊಬೈಲ್‌ನಲ್ಲಿ ಹೊಂದಿದ್ದಲ್ಲಿ ಅಥವಾ ಪ್ರಮಾಣ ಪತ್ರದ ಪ್ರತಿಯನ್ನು ಹಾಜರುಪಡಿಸಿದಲ್ಲಿ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಬೇಕು
– ಭಕ್ತರು ಲಸಿಕೆ ಪಡೆಯದಿದ್ದಲ್ಲಿ ಅಂಥವರಿಗೆ ಲಸಿಕೆ ನೀಡಲು ಅನುಕೂಲವಾಗುವಂತೆ ಸಂಬಂಧಪಟ್ಟ ತಾಲೂಕು ಆರೋಗ್ಯಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ದೇವಾಲಯದ ಆವರಣದಲ್ಲಿ ಲಸಿಕಾ ಕೇಂದ್ರ ತೆರೆಯಬೇಕು.
– ಸಾರ್ವಜನಿಕರು ದೇವಾಲಯ/ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಒಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರದೆ ಸರದಿಯಲ್ಲಿ ತೆರಳುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.
– ಸಾಮಾಜಿಕ ಅಂತರವಿಲ್ಲದೆ ನಡೆಸುವ ಎಲ್ಲ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಕಾರ್ಯಕ್ರಮ ಆಯೋಜಕರು/ದೇವಸ್ಥಾನದ ಆಡಳಿತಾಧಿಕಾರಿಗಳು ಸ್ಥಳೀಯ ಆಡಳಿತದಿಂದ ಅನುಮತಿ ಪಡೆದಿರಬೇಕು.
– ಸ್ಥಳದಲ್ಲಿ ಸ್ಯಾನಿಟೈಸರ್‌, ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಪಾಲನೆಗೆ ಕ್ರಮ ಕೈಗೊಳ್ಳಬೇಕು, ಮಾರ್ಗಸೂಚಿ ಉಲ್ಲಂಘನೆಯಾದಲ್ಲಿ ಕಾರ್ಯಕ್ರಮದ ಆಯೋಜಕರು, ದೇವಸ್ಥಾನ ಆಡಳಿತಾಧಿಕಾರಿಯವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮ
– ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಾಂಗಣದ ಸಾಮರ್ಥ್ಯದ ಶೇ. 50 ಜನರಿಗೆ ಮಿತಿಗೊಳಿಸಿ ನಡೆಸಬೇಕು, ಅದಷ್ಟು ಮಟ್ಟಿಗೆ ಸಾರ್ವಜನಿಕರು ಮನೆಯಿಂದಲೇ ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ವಿವಿಧ ಮಾಧ್ಯಮಗಳ ಮೂಲಕ ನೇರಪ್ರಸಾರಕ್ಕೆ ಕಾರ್ಯಕ್ರಮದ ಆಯೋಜಕರು ಅನುವು ಮಾಡಿಕೊಡಬೇಕು.
– ಹುಲಿ ವೇಷಧಾರಿಗಳು ದೇವಸ್ಥಾನದ ಆವರಣದೊಳಗೆ, ಸಾರ್ವಜನಿಕ ಪ್ರದೇಶಗಳಲ್ಲಿ ಪ್ರದರ್ಶನ ನೀಡುವಾಗ ಜನಸಂದಣಿಯಾಗದಂತೆ ನೋಡಿಕೊಳ್ಳುವುದು, ಮಾಸ್ಕ್ ಧರಿಸದೆ ಸೇರುವ ಸಾರ್ವಜನಿಕರ ವಿರುದ್ಧ ನಿಯಮಾನುಸಾರ ದಂಡ ವಿಧಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
– ಸಂಬಂಧಪಟ್ಟ ಅಧಿಕಾರಿಗಳು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು.

Leave A Reply

Your email address will not be published.