ಶಿಕ್ಷಕರ ಅವೈಜ್ಞಾನಿಕ ವರ್ಗಾವಣೆಗೆ ತಡೆಯೊಡ್ಡಿದ್ದ ವಿದ್ಯಾರ್ಥಿ ದಿವಿತ್ ರೈ | ಆತನ ಬಿಇ ಕಾಲೇಜು ಶುಲ್ಕ ಕಟ್ಟಿದ ಡಾ.ಜಿ.ಪರಮೇಶ್ವರ್

ಸರ್ಕಾರಿ ಶಾಲೆಗಳ ಶಿಕ್ಷಕರ ಅವೈಜ್ಞಾನಿಕ ವರ್ಗಾವಣೆ ತಡೆಯುವಂತೆ ಗಮನ ಸೆಳೆದು ಸುದ್ದಿಯಾಗಿದ್ದ ಪುತ್ತೂರಿನ ಬನ್ನೂರು ನಿವಾಸಿ, ವಿದ್ಯಾರ್ಥಿ ದಿವಿತ್ ರೈ ಎಂಜಿನಿಯರಿಂಗ್ ಕಲಿಕೆಗೆ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪ್ರೋತ್ಸಾಹ ನೀಡಿದ್ದು, ಕಾಲೇಜ್‌ನ ಶುಲ್ಕವನ್ನು ಭರಿಸಿ ಆದರ್ಶ ಮೆರೆದಿದ್ದಾರೆ.

ದಿವಿತ್ ರೈ

ದಿವಿತ್ ರೈ ಪುತ್ತೂರಿನ ಸರ್ಕಾರಿ ಹಾರಾಡಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಸರ್ಕಾರವು ಸರ್ಕಾರಿ ಶಾಲೆಗಳ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ನಡೆಸಲು ಸುತ್ತೋಲೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಆ ಸಂದರ್ಭದಲ್ಲಿ ಶಾಲಾ ಮಂತ್ರಿ ಮಂಡಲದಲ್ಲಿದ್ದ ದಿವಿತ್ ರೈ ಅವರು ಅಂದಿನ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ದೂರು ನೀಡಿ ತನ್ನ ಶಾಲೆಯ ಶಿಕ್ಷಕರ ವರ್ಗಾವಣೆ ತಡೆದಿದ್ದ. ಈತನ ದೂರಿನಿಂದಾಗಿ ಜಿಲ್ಲೆಯ ಬಹುತೇಕ ಶಿಕ್ಷಕರ ಅವೈಜ್ಞಾನಿಕ ವರ್ಗಾವಣೆ ರದ್ದಾಗಿತ್ತು.

ಬಾಲಕ ದಿವಿತ್‌ ರೈ ಅವರ ಈ ಕಾರ್ಯವನ್ನು ಮೆಚ್ಚಿದ ಗೃಹ ಸಚಿವ ಪರಮೇಶ್ವರ್ ಅವರು ಆತ ಹಾಗೂ ಆತನ ಕುಟುಂಬ ವನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ದಿವಿತ್‌ನ ವಿನಂತಿ ಮೇರೆಗೆ ಆತ ಕಲಿಯುತ್ತಿದ್ದ ಹಾರಾಡಿ ಶಾಲೆಗೆ 10 ಲಕ್ಷ ಅನುದಾನವನ್ನೂ ನೀಡಿದ್ದರು. ಈ ವೇಳೆ ದಿವಿತ್ ರೈಯನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸುವು ದಾಗಿಯೂ ಪರಮೇಶ್ವರ್ ತಿಳಿಸಿದ್ದರು.

ಸೌಟ್ ಗೈಡ್‌ನಲ್ಲಿ ಪಂಜಾಬ್‌ಗೆ ಹೋಗುವ ಸಂದರ್ಭದಲ್ಲೂ ಪ್ರಾಯೋಜಕತ್ವ ನೀಡಿದ್ದರು. ಇದೀಗ ದಿವಿತ್ ರೈ ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜ್‌ನಲ್ಲಿ ದಾಖಲಾಗಿದ್ದು, ಆತನ ಶುಲ್ಕವನ್ನು ಸಂಪೂರ್ಣವಾಗಿ ಡಾ. ಜಿ. ಪರಮೇಶ್ವರ್ ಭರಿಸಿದ್ದಾರೆ.

Leave A Reply

Your email address will not be published.