ನಾಳೆಯಿಂದ ರಾಜ್ಯದಲ್ಲಿ 6 ರಿಂದ 8 ತರಗತಿಗಳು ಆರಂಭ | ಕೊರೋನಾ ಮಾರ್ಗಸೂಚಿಗಳೊಂದಿಗೆ ಮತ್ತೆ ತೆರೆಯಲಿವೆ 18 ತಿಂಗಳು ಮುಚ್ಚಿದ್ದ ಶಾಲೆಗಳು !!

ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಲೇ ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡು ಒಂದೊಂದೇ ತರಗತಿಗಳು ಪ್ರಾರಂಭವಾಗುತ್ತಿದೆ. ಕಳೆದ ತಿಂಗಳ 23 ರಿಂದ 9, 10ನೇ ಮತ್ತು ಪಿಯು ತರಗತಿಗಳನ್ನು ಆರಂಭಿಸಿದ್ದ ಶಿಕ್ಷಣ ಇಲಾಖೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ 6 ರಿಂದ 8ನೇ ತರಗತಿ ಆರಂಭಿಸಲು ನಿರ್ಧರಿಸಿದೆ.

ಕಳೆದ ವಾರ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು, ಸೆಪ್ಟೆಂಬರ್ 6 ಅಂದರೆ ನಾಳೆಯಿಂದ 6, 7, 8 ನೇ ತರಗತಿ ಆರಂಭ ಆಗಲಿದೆ. ದಿನದಲ್ಲಿ ಅರ್ಧ ದಿನ ಮಾತ್ರ ಶಾಲೆ ಇರಲಿದ್ದು, ಬೆಳಗ್ಗೆ 10 ರಿಂದ 1.30 ರವರೆಗೆ ಮಾತ್ರ ತರಗತಿ ನಡೆಯಲಿದೆ. ಶಾಲೆಗಳ ಆರಂಭಕ್ಕೆ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಮಾರ್ಗಸೂಚಿಗಳು :

6, 7, 8ನೇ ತರಗತಿ ಆರಂಭಕ್ಕೆ ಸರ್ಕಾರ ಅನುಮತಿ ಕೊಟ್ಟಿದ್ದು, ಕೋವಿಡ್ ಮಾರ್ಗಸೂಚಿ ಅನ್ವಯ ಶಾಲೆಗಳ ಆರಂಭಕ್ಕೆ ಸೂಚಿಸಲಾಗಿದೆ. ಪಾಸಿಟಿವಿಟಿ ರೇಟ್ ಎರಡಕ್ಕಿಂತ ಕಡಿಮೆ ಇರುವಲ್ಲಿ ಮಾತ್ರ ಶಾಲೆ ಓಪನ್ ಮಾಡಲು ಅನುಮತಿ ನೀಡಿದ್ದಾರೆ. ಸೋಮವಾರದಿಂದ ಶುಕ್ರವಾರ, ಅಂದರೆ ಒಟ್ಟು 5 ದಿನ ಶಾಲೆ ತೆರೆಯಬೇಕು. ಉಳಿದ 2 ದಿನ ಶಾಲೆ ಸ್ವಚ್ಛಗೊಳಿಸಬೇಕು ಎಂದು ಸರ್ಕಾರ ಸೂಚಿಸಿದೆ.

ಶೇಕಡಾ 50ರಷ್ಟು ಮಕ್ಕಳು ಮಾತ್ರ ಶಾಲೆಗೆ ಹಾಜರಾಗಬೇಕು. ದಿನ ಬಿಟ್ಟು ದಿನ 50ರಷ್ಟು ಮಕ್ಕಳಿಗೆ ಕ್ಲಾಸ್ ನಡೆಯಲಿದೆ. ಶಾಲೆಗೆ ಬರುವುದಕ್ಕೆ ವಿದ್ಯಾರ್ಥಿಗಳಿಗೆ ಭೌತಿಕ ಹಾಜರಾತಿ ಕಡ್ಡಾಯವಾಗಿರುವುದಿಲ್ಲ. ಆನ್ಲೈನ್ ಅಥವಾ ಪರ್ಯಾಯ ವಿಧಾನದಲ್ಲೂ ಹಾಜರಾಗಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಶಾಲೆಗಳಲ್ಲಿ ಅಂತರ ಕಾಪಾಡಲು ಮಕ್ಕಳ ತಂಡ ರಚನೆಗೆ ಸೂಚಿಸಲಾಗಿದೆ. 15 ರಿಂದ 20 ವಿದ್ಯಾರ್ಥಿಗಳ ತಂಡವನ್ನು ರಚಿಸಬೇಕು. ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳಿಗೆ ನಿಯಮ ಪಾಲನೆ ಕಡ್ಡಾಯ. ಕಡ್ಡಾಯವಾಗಿ ವ್ಯಾಕ್ಸಿನ್ ಪಡೆದಿರಬೇಕು. ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ಸೂಚಿಸಿದೆ.

ಸದ್ಯಕ್ಕಿಲ್ಲ 1ರಿಂದ 5ನೇ ತರಗತಿ ಆರಂಭ

6 ರಿಂದ 8ನೇ ತರಗತಿ ಆರಂಭದ ಬೆನ್ನಲ್ಲೇ ಶಿಕ್ಷಣ ಸಚಿವರು ಪ್ರಾಥಮಿಕ ಶಾಲೆಗಳ ಆರಂಭದ ಉತ್ಸಾಹದಲ್ಲಿದ್ದರು. ಶೀಘ್ರದಲ್ಲಿಯೇ ಶಾಲೆ ಆರಂಭ ಮಾಡೋದಾಗಿ ಹೇಳಿದ್ದರು. ಆದರೆ ಶಿಕ್ಷಣ ಸಚಿವರ ಉತ್ಸಾಹಕ್ಕೆ ಆರೋಗ್ಯ ಇಲಾಖೆ ಶಾಕ್ ನೀಡಿದೆ. ಸದ್ಯ 1ರಿಂದ 5ರವರೆಗೆ ಪ್ರಾಥಮಿಕ ಶಾಲೆಗಳ ಆರಂಭದ ಚಿಂತನೆ ಇಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಕೇರಳ ಸೇರಿದಂತೆ ಪಕ್ಕದ ರಾಜ್ಯಗಳಲ್ಲಿ ಕೊರೋನಾ ಏರಿಕೆಯಾಗುತ್ತಿದೆ. ಅಲ್ಲದೆ ಸಾಲು ಸಾಲು ಹಬ್ಬಗಳು ಮುಂದೆ ಇವೆ. ಹೀಗಾಗಿ ಸದ್ಯ ಒಂದರಿಂದ ಐದರವೆಗಿನ ಪ್ರಾಥಮಿಕ ಶಾಲೆಗಳ ಆರಂಭದ ಚಿಂತನೆ ಸರ್ಕಾರದ ಮುಂದೆ ಇಲ್ಲ. ನಾಳೆಯಿಂದ ಆರಂಭವಾಗುವ 6ರಿಂದ 8ನೇ ತರಗತಿಗಳ ಸ್ಥಿತಿ ನೋಡಿ ಮುಂದೆ ಪ್ರಾಥಮಿಕ ಶಾಲೆ ಓಪನ್ ಸರ್ಕಾರ ಪ್ಲ್ಯಾನ್ ಮಾಡಲಿದೆ.

ಒಟ್ಟಿನಲ್ಲಿ ಕೊರೋನಾ ಮೂರನೇ ಅಲೆ ಆತಂಕದಲ್ಲೇ ಶಿಕ್ಷಣ ಇಲಾಖೆ ಶಾಲೆ ಆರಂಭಕ್ಕೆ ಮುಂದಾಗಿದೆ. ಈಗಾಗಾಲೇ ಶಾಲೆಗಳಲ್ಲಿ ಮಕ್ಕಳಿಗೆ ಬೇಕಾದ ಸಿದ್ಧತೆಗಳನ್ನು ಶಿಕ್ಷಣ ಇಲಾಖೆ ಮಾಡಿಕೊಂಡಿದೆ. ಮಕ್ಕಳು ಕೂಡ ಹೊಸ ಭರವಸೆಯೊಂದಿಗೆ ನಾಳೆಯಿಂದ ಶಾಲೆಗಳತ್ತ ಹೆಜ್ಜೆ ಹಾಕಲು ರೆಡಿಯಾಗುತ್ತಿದ್ದಾರೆ.

Leave A Reply

Your email address will not be published.