ಬೈಕ್, ಟಿವಿ, ಫ್ರಿಡ್ಜ್ ಇರುವ ಮನೆಯ ಬಿಪಿಎಲ್ ಕಾರ್ಡ್ ರದ್ದು ಎಂಬುದು ಸುಳ್ಳು ಸುದ್ದಿ !! | ಸ್ಪಷ್ಟನೆ ನೀಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

ಬೆಂಗಳೂರು: ಮೊನ್ನೆಯಷ್ಟೇ ಒಂದು ಸುಳ್ಳು ಸುದ್ದಿ ಹರಡಿದ್ದು, ಇದೀಗ ಈ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ. ಬೈಕ್, ಟಿವಿ, ಫ್ರಿಡ್ಜ್ ಇದ್ದವರ BPL ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ತಿಳಿಸಿದೆ.

ಹೌದು. ಬೈಕ್, ಫ್ರಿಡ್ಜ್, ಟಿವಿ ಇದ್ದರೂ BPL ಕಾರ್ಡ್ ರದ್ದು ಮಾಡಲಾಗುತ್ತೆ ಎನ್ನುವ ಒಂದು ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿತ್ತು. ಆದರೆ, ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಈ ಬಗ್ಗೆ ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ ಸ್ಪಷ್ಟನೆ ಕೊಟ್ಟಿದೆ.

ಅಕ್ರಮ ಬಿಪಿಎಲ್ ಕಾರ್ಡ್​ಗಳನ್ನು ರದ್ದುಗೊಳಿಸುವ ಭರದಲ್ಲಿ ರಾಜ್ಯ ಸರ್ಕಾರ ಆತುರದ ಹೆಜ್ಜೆಯಿಟ್ಟಿದೆಯೇ ಎಂಬ ಅನುಮಾನಗಳು ಸಹ ಮೂಡಿದ್ದವು. ಹೀಗಾಗಿ ಬಿಪಿಎಲ್​ ಕಾರ್ಡ್ ಇರುವ ಟಿವಿ,ಬೈಕ್ ಅಥವಾ ಪ್ರಿಡ್ಜ್ ಹೊಂದಿದ್ದವರಿಗೆ ಆತಂಕ ಕಾರಣವಾಗಿತ್ತು. ಆದರೆ ಇದೀಗ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತೆ ಶಮ್ಲಾ ಇಕ್ಬಾಲ್ ನೀಡಿರುವ ಸ್ಪಷ್ಟೀಕರಣ ಎಲ್ಲ ಗುಮಾನಿಗಳಿಗೂ ತೆರೆ ಎಳೆದಿದೆ.

ಬಡತನ ರೇಖೆಗಿಂತ ಕೆಳಗಿರುವವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಈಮುನ್ನ ಬಿಪಿಎಲ್ ಪಡಿತರು ಮೂರು ಹೆಕ್ಟೇರ್ ಭೂಮಿಯನ್ನು ಹೊಂದಿದ್ದರೆ ಅಥವಾ ವಾರ್ಷಿಕ ಆದಾಯವು 1.28 ಲಕ್ಷ ರೂ. ಇದ್ದವರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತಿತ್ತು. ಈಮುನ್ನ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ್ ಕತ್ತಿ ಕಾರ್ಯಕ್ರಮವೊಂದರಲ್ಲಿ ಬಿಪಿಎಲ್​ ಕಾರ್ಡ್​ ಹೊಂದಿದ್ದವರು ಟಿವಿ,ಬೈಕ್ ಅಥವಾ ಪ್ರಿಡ್ಜ್ ಹೊಂದಿದ್ದಲ್ಲಿ ಬಿಪಿಎಲ್ ಕಾರ್ಡ್​ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದರು. ಅವರ ಈ ಹೇಳಿಕೆ ನಂತರ ರಾಜ್ಯದ ಅಲ್ಲಲ್ಲಿ ಬಿಪಿಎಲ್ ಕಾರ್ಡ್ ರದ್ದುಗೊಂಡ ಸುದ್ದಿಗಳು ಸಹ ವರದಿಯಾಗಿದ್ದವು.

ಬೈಕ್, ಟಿ.ವಿ, ಫ್ರಿಡ್ಜ್ ಹೊಂದಿದ್ದರೆ ಬಿಪಿಎಲ್ ಕಾರ್ಡ್ ರದ್ದು ವಿಚಾರವಾಗಿ ಸ್ಪಷ್ಟನೆ ಕೊಟ್ಟಿರುವ ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ,ಈ ರೀತಿ ಯಾವುದೇ ಆದೇಶವನ್ನು ಸರ್ಕಾರ ಹೊರಡಿಸಿಲ್ಲ ಎಂದು ತಿಳಿಸಿದರು.

ಬೈಕ್, ಟಿವಿ, ಫ್ರಿಡ್ಜ್ ಹೊಂದಿರೋ ಕುಟುಂಬದವರು ಆದ್ಯತಾ ಪಡಿತರ ಪಡೆಯಲು ಅರ್ಹರಾಗಿರುತ್ತಾರೆ. ಇದು ಸರ್ಕಾರ ನಿಗದಿಪಡಿಸಿರೋ ಮಾನದಂಡದಲ್ಲೇ ಅವಕಾಶ ಇದೆ. ಮೂರು ಹೆಕ್ಟೇರ್ ಗಿಂತ ಹೆಚ್ಚು ಜಮೀನು ಇರುವ ಮತ್ತು ವಾರ್ಷಿಕ 1.20ಲಕ್ಷಕ್ಕಿಂತ ಹೆಚ್ಚು ಆದಾಯ ಇರುವ ಕುಟುಂಬ ಸ್ಥಿತಿಗತಿ ಪರಿಶೀಲಿಸಿ. ಬಿಪಿಎಲ್ ಕಾರ್ಡಿನಿಂದ ಎಪಿಎಲ್ ಕಾರ್ಡಿಗೆ ವರ್ಗಾವಣೆ ಮಾಡಲು ಡಿಸಿಗಳಿಗೆ ಆದೇಶ ಎಂದು ಸ್ಪಷ್ಟಪಡಿಸಿದೆ.

ಯಾವುದೇ ಅಧಿಕಾರಿ ಆಧಾರ ರಹಿತವಾಗಿ ಕಾರ್ಡ್ ರದ್ದುಪಡಿಸಿದರೆ ತಹಶೀಲ್ದಾರ್ ಅಥವಾ ಡಿಸಿಗಳಿಗೆ ದೂರು ನೀಡಬಹುದು ಎಂದು ಆಹಾರ ಇಲಾಖೆ ಹೇಳಿದೆ.

Leave A Reply

Your email address will not be published.