ಶಿಕ್ಷಕರ ದಿನಾಚರಣೆ | ಶಿಕ್ಷಕರ ಸಂಭ್ರಮ, ಸಡಗರ

ಸೆಪ್ಟೆಂಬರ್ 5 ,ಶಿಕ್ಷಕರ ಸಡಗರ, ಸಂಭ್ರಮದ ಮತ್ತು ಹಬ್ಬದ ದಿನ. ನಮ್ಮನ್ನು ನಾವೇ ಪ್ರೀತಿಸುವ ದಿನ.ಎಲ್ಲರ ಬಾಯಿಯಿಂದಲು ಹೊಗಳಿಸಿಕೊಳ್ಳುವ ದಿನ.

ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಕಾರಣ ಓರ್ವ ಮಹಾನ್ ವ್ಯಕ್ತಿ. ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ನಂತರದ ರಾಷ್ಟ್ರಪತಿ. ಅವರ ಹುಟ್ಟಿದ ಹಬ್ಬವನ್ನು ‘ಶಿಕ್ಷಕರ ದಿನಾಚರಣೆ’ ಯನ್ನಾಗಿ ಆಚರಿಸಲು ಕರೆಕೊಟ್ಟ ಧೀಮಂತ ವ್ಯಕ್ತಿ. ಅವರೇ ಡಾ.ಸರ್ವಪಲ್ಲಿ ರಾಧಾಕೃಷ್ಣನ್.

ಅವರಿಂದಾಗಿ ಇಂದು ಇಡೀ ದೇಶದಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ.ಈ ಶಿಕ್ಷಕರ ದಿನಾಚರಣೆಯನ್ನು ಪ್ರಾರಂಭಿಸಿದ ವರ್ಷ,1962 ಸೆಪ್ಟೆಂಬರ್ 5. ಈ ದಿನ ಶಿಕ್ಷಕರಿಗೆ ವಿಶೇಷ ಪುರಸ್ಕಾರಗಳನ್ನು ಕೊಡಲಾಗುತ್ತದೆ.

ರಾಷ್ಟ್ರಪ್ರಶಸ್ತಿ, ರಾಜ್ಯ ಪ್ರಶಸ್ತಿ, ಜಿಲ್ಲಾ ಪ್ರಶಸ್ತಿ ಗಳನ್ನು ಕೊಟ್ಟು ಪುರಸ್ಕರಿಸಲಾಗುತ್ತದೆ.ಎಲ್ಲಾ ಹುದ್ದೆಗಳಲ್ಲಿ ಅತೀ ಪವಿತ್ರವಾದ ಮತ್ತು ಪೂಜನೀಯ ಹುದ್ದೆ,ಅಥವಾ ಕೆಲಸ ,ಉದ್ಯೋಗವೆಂದರೆ ಅದು ಶಿಕ್ಷಕ ವೃತ್ತಿ.ಅದಕ್ಕೆ ಕಾರಣ,ಒಂದು ದೇಶದ ಭದ್ರ ಬುನಾದಿಯನ್ನು ಹಾಕುವ ಕೆಲಸವನ್ನು ಓರ್ವ ಶಿಕ್ಷಕ ಮಾಡುತ್ತಾನೆ.ಸಮಾಜದಲ್ಲಿ ಪ್ರತಿಯೊಬ್ಬರೂ ಬಹುವಚನದಿಂದ ಕೂಗುವ ಎರಡು ವೃತ್ತಿಗಳಲ್ಲಿ ಒಂದು ಶಿಕ್ಷಕ ವೃತ್ತಿ. ಇನ್ನೊಂದು ನಮ್ಮನ್ನು ವಿವಿಧ ರೋಗಗಳಿಂದ ಕಾಪಾಡುವ ವೈದ್ಯ ವೃತ್ತಿ.

ಹಾಗಾದರೆ ಓರ್ವ ಶಿಕ್ಷಕ ಸಮಾಜದಲ್ಲಿ ತನ್ನ ಛಾಪನ್ನು ಒತ್ತಬೇಕಾದರೆ,ಸಮಾಜದಲ್ಲಿ ತನ್ನ ಗೌರವವನ್ನು ಉಳಿಸಿಕೊಂಡು ಬರಬೇಕಾದರೆ ಏನು ಮಾಡಬೇಕು,ಸಮಾಜದಲ್ಲಿ ಎಲ್ಲಾ ಹುದ್ದೆಗಳಿಂದ ಭಿನ್ನವಾಗಿರಬೇಕಾದರೆ ತನ್ನ ವ್ಯಕ್ತಿತ್ವ ಹೇಗಿರಬೇಕು.ವೃತ್ತಿಗೆ ಕಪ್ಪು ಚುಕ್ಕಿ ಬರದಂತೆ ಇರಬೇಕಾದರೆ ಹೇಗೆ ನಡೆದುಕೊಳ್ಳಬೇಕು.ಹೀಗೆ ಹಲವಾರು ಪ್ರಶ್ನೆಗಳು ಬರುವುದು ಸಹಜ ತಾನೆ.ಸಮಾಜ ಶಿಕ್ಷಕರನ್ನು ಮೂರನೇ ಕಣ್ಣಾಗಿ ಪರಿಗಣಿಸುತ್ತದೆ.ಎಲ್ಲರ ಕಣ್ಣು ಶಿಕ್ಷಕರ ಮೇಲಿರುವ ಕಾರಣ, ಅವನು ಎಷ್ಟು ಜಾಗರುಕತೆಯಿಂದಿದ್ದರೂ ಸಾಲದು.ಶಿಕ್ಷಕರಾದವರು ಪ್ರೀತಿಯ, ಮಮತೆಯ ಸಾಕಾರ ಮೂರ್ತಿಯಾಗಿರಬೇಕಾಗುತ್ತದೆ.ಇಡೀ ಸಮಾಜ ತಮ್ಮ ಮುದ್ದಿನ ಮಕ್ಕಳನ್ನು ಶಿಕ್ಷಕರ ಸುಪರ್ದಿಗೆ ಒಪ್ಪಿಸುತ್ತಾರೆ.

ಒಂದು ಗಂಧದ ಕೊರಡು ಹೇಗೆ ಅರೆದಷ್ಟು ಪರಿಮಳವನ್ನು ಕೊಡುತ್ತದೆಯೋ ಅದೇ ರೀತಿ ಶಿಕ್ಷಕರ ಗುಣ ಕೂಡ ಅದೇ ರೀತಿ ಇರಬೇಕಾಗುತ್ತದೆ.ಶಿಕ್ಷಕ ಓರ್ವ ಉತ್ತಮ ಗೈಡ್ ಅಥವಾ ಮಾರ್ಗದರ್ಶಕ ಆಗಿರಬೇಕು.ಪುಟಾಣಿ ಮಕ್ಕಳಲ್ಲಿ ಅಭೂತಪೂರ್ವ ಪ್ರತಿಭೆಗಳಿರುತ್ತವೆ.ಅವುಗಳನ್ನು ಕಡಿಮೆಯಾಗದಂತೆ ನೋಡಿಕೊಳ್ಳುವ ಅಥವಾ ಪ್ರತಿಭೆಗೆ ಎಣ್ಣೆ ಹಾಕಿ ದೀಪ ಹಚ್ಚುವ ಕೆಲಸವನ್ನು ಮಾಡಬೇಕಾಗುತ್ತದೆ.ಶಿಕ್ಷಕರಾದವರು ಕಾಲ ಕಾಲಕ್ಕೆ ಅಪ್ ಡೇಟ್ ಆಗಲೇ ಬೇಕು.ಶಿಕ್ಷಕರು ಸಮಾಜದ ಶಿಲ್ಪಿಗಳು. ಸಮಾಜದ ಎಲ್ಲಾ ಆಗು ಹೋಗುಗಳಿಗೆ ಶಿಕ್ಷಕರೇ ಜವಾಬ್ದಾರರಾಗಿರುತ್ತಾರೆ.ಶಿಕ್ಷಕ ಅಕ್ಷರದಾತ ಆದರೆ ವಿದ್ಯೆ ಕೊಡುವವನಲ್ಲ.

ಅಕ್ಷರವನ್ನು ಕಲಿಸುವ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ.ವಿದ್ಯೆ ಮಗುವಿನಲ್ಲಿಯೇ ಇರುತ್ತದೆ.ಸಮಾಜದಲ್ಲಿ ಕಲ್ಲು ಮುಳ್ಳುಗಳನ್ನು ಸರಿಸಿ ದಾರಿ ತೋರಿಸುವನಿದ್ದರೆ ಅದು ಶಿಕ್ಷಕ ಮಾತ್ರ. ಸಮಾಜದಲ್ಲಿ,ಹಿರಿಯರಿಗೆ, ಕಿರಿಯರಿಗೆ, ಬುದ್ದಿ ಜೀವಿಗಳಿಗೆ ರಾಜಕೀಯ ವ್ಯಕ್ತಿಗಳಿಗೆ ಹೇಗೆ ಗೌರವ ‌ಕೊಡಬೇಕು ಎಂಬುದ‌ನ್ನು ಮತ್ತು ಅದರ ಅರ್ಥವನ್ನು ತಿಳಿಸುವವ ಶಿಕ್ಷಕ. ಶಿಕ್ಷಕ ಅಂದರೆ ವಿದ್ಯಾರ್ಥಿಯೊಂದಿಗೆ ಸದಾ ವಿದ್ಯಾರ್ಥಿಯಾಗಿರಬೇಕಾಗುತ್ತದೆ.ಶಿಕ್ಷಕ ಸಮಾಜದ ಅಥವಾ ವಿದ್ಯಾರ್ಥಿಗಳ ಪ್ರತಿಬಿಂಬಿವಾಗಿರಬೇಕು.ಶಿಕ್ಷಕ ವಿದ್ಯಾರ್ಥಿಗಳ ಉತ್ತಮ ಗೆಳೆಯನಾಗಿರಬೇಕು.ಶಿಕ್ಷಕರೆಂದರೆ ಸಹಕಾರ ಜೀವಿ.ಎಲ್ಲರೊಂದಿಗೂ ಬೆರೆಯುವ ಸಹಕಾರ ಮನೋಭಾವನೆಯನ್ನು ಹೊಂದಿರಬೇಕು.

ಶಿಕ್ಷಕರಾದವರು,’ಬದುಕು ಮತ್ತು ಬದುಕಲು ಬಿಡು’ ನಿಯಮದ ಪಾಲಕನಾಗಿರಬೇಕು.ಶಿಕ್ಷಕರಾದವರಿಗೆ ಶಾಲೆಯೊಳಗೆ ಹೋದ ಮೇಲೆ ಜಾತಿ ಧರ್ಮ ಗಳೆಲ್ಲವೂ ಒಂದೇ.ಅಲ್ಲಿ ಅವನು ವಿವಿಧತೆಯಲ್ಲಿ ಏಕತೆಯ ಸಾಕಾರಮೂರ್ತಿಯಾಗಿರಬೇಕು.ಉತ್ತಮ ಶಿಕ್ಷಕರು ಊರಿಗೆ,ಸಮಾಜಕ್ಕೆ ದಾರಿ ತೋರಿಸುವ ದೀಪಗಳಾಗಿರಬೇಕು.

ಓರ್ವ ಉತ್ತಮ ಶಿಕ್ಷಕ ಉತ್ತಮ ಪ್ರಾರಂಭಿಕ.ಅದೇ ರೀತಿ ಅತ್ತ್ಯುತ್ತಮ ಫಿನಿಶರ್ ಕೂಡಾ ಹೌದು. ಶಿಕ್ಷಕ ಓರ್ವ ಉತ್ತಮ ಮಧ್ಯವರ್ತಿ. ಒಂದು ದೇಶದ ಅಭಿವೃದ್ಧಿ ಮತ್ತು ಅವನತಿ ಓರ್ವ ಶಿಕ್ಷಕನ ಕೈಯಲ್ಲಿರುತ್ತದೆ.ತನ್ನ ಶಾಲೆ ಮತ್ತು ವೃತ್ತಿಯನ್ನೇ ದೇವರೆಂದು ನಂಬಿ ಕೆಲಸ ಮಾಡುವವನೇ ಶ್ರೇಷ್ಠ ಶಿಕ್ಷಕ. ಮಕ್ಕಳು ಪ್ರೀತಿಯಿಂದ ಕೊಡುವ ಗೌರವ ಮತ್ತು ನಮಸ್ಕಾರಗಳೇ ನಿಜವಾದ ಪ್ರಶಸ್ತಿ ಪುರಸ್ಕಾರಗಳು. ಸಮಾಜದಲ್ಲಿ ಸಿಗುವ ಗೌರವ, ಪ್ರೀತಿ, ನಂಬಿಕೆ ಮತ್ತು ಸಹಕಾರ ಯಾವ ಪ್ರಶಸ್ತಿಗಳಿಗೂ ಕಡಿಮೆಯಲ್ಲ.

ನಿಷ್ಠೆಯಿಂದ,ಬದ್ದತೆಯಿಂದ ಕರ್ತವ್ಯ ನಿರ್ವಹಿಸುವ ಶಿಕ್ಷಕನಿಗೆ ವರ್ಷಪೂರ್ತಿ ಪ್ರಶಸ್ತಿಗಳು ಸಿಗುತ್ತಲೇ ಇರುತ್ತವೆ.ಶಿಕ್ಷಕರಾದವರು ಕುರ್ಚಿಗೆ,ವೇದಿಕೆಗೆ ಸೀಮಿತರಾಗಿರಬಾರದು.ಭಯದಿಂದ,ಬೇಸರದಿಂದ,ಇನ್ನೊಬ್ಬರ ತೋರಿಕೆಗಾಗಿ ಕೆಲಸ ಮಾಡಬಾರದು.ಅದು ಶಿಕ್ಷಕ ವೃತ್ತಿಗೆ ಕಳಂಕ.ಗೌರವವನ್ನು ಕೇಳಿ ಪಡೆಯಬಾರದು,ಅದು ತನ್ನಿಂದ ತಾನೇ ಬರಬೇಕು.ವೃತ್ತಿಯನ್ನು ಶೋಕಿಗಾಗಿ ಮಾಡಬಾರದು.ತನ್ನ ಶಾಲೆಯ ಮತ್ತು ಮಕ್ಕಳ ಅಭಿವೃದ್ಧಿಯೇ ತನ್ನ ಮೊದಲ ಧ್ಯೇಯವಾಗಿರಬೇಕು.

ಶಾಲೆಯಿಂದ ಏನನ್ನೂ ಬಯಸದೇ ತನ್ನಿಂದ ಶಾಲೆಗೆ ಏನನ್ನಾದರೂ ಕೊಡುವ ಮನೋಭಾವ ಹೊಂದಿರಬೇಕು.ಡಾ ಸರ್ವಪಲ್ಲಿ ರಾಧಾಕೃಷ್ಣನ್ ಏನೋ ಒಂದು ಮಹದಾಸೆಯನ್ನಿಟ್ಟುಕೊಂಡು ತನ್ನ ಹುಟ್ಟಿದ ದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲು ಕರೆಕೊಟ್ಟಿರಬಹುದು.ಅದನ್ನು ನಾವು ಸಾಕಾರಗೊಳಿಸೋಣ.ಎಲ್ಲರಿಗೂ ಶಿಕ್ಷಕ ದಿನಾಚರಣೆಯ ಶುಭಾಶಯಗಳು.

ಬಾಲಕೃಷ್ಣ ಕೆ,ದೈಹಿಕ ಶಿಕ್ಷಣ ಶಿಕ್ಷಕರು,ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಸವಣೂರು

Leave A Reply

Your email address will not be published.