ಮೀನುಗಾರಿಕೆಗೆ ತೆರಳುವವರಿಗೆ ಸಿಹಿ ಸುದ್ದಿ | ಇನ್ನು ಮುಂದೆ ಬೋಟ್ನಲ್ಲಿ ಉಪ್ಪು ನೀರನ್ನೇ ಫಿಲ್ಟರ್ ಮಾಡಿ ತಯಾರಾಗಲಿದೆ ಸಿಹಿ ನೀರು !!

ದಕ್ಷಿಣ ಕನ್ನಡ:ಮೀನುಗಾರರಿಗೆ ಒಳ್ಳೆಯ ಸಿಹಿ-ಸುದ್ದಿ ದೊರಕಿದ್ದು, ಇನ್ನು ಮುಂದೆ ಆಳಕ್ಕೆ ಮೀನುಗಾರಿಕೆಗೆ ತೆರಳುವಾಗ ನೀರನ್ನು ಹಿಡಿದುಕೊಂಡೊಗುವ ಅಗತ್ಯವಿಲ್ಲ. ಬದಲಿಗೆ ಸಮುದ್ರದ ಉಪ್ಪು ನೀರನ್ನು ಬೋಟ್‌ನಲ್ಲಿಯೇ ಫಿಲ್ಟರ್ ಮಾಡಿ ಸಿಹಿನೀರಾಗಿ ಪಡೆಯುವ ತಂತ್ರಜ್ಞಾನ ಪ್ರಾರಂಭಿಸಲಾಗಿದೆ.

ಆಳಸಮುದ್ರ ಮೀನುಗಾರಿಕೆ ಒಂದು ವಾರಕ್ಕಿಂತ ಹೆಚ್ಚು ದಿನ ಸಮುದ್ರದ ಮಧ್ಯದಲ್ಲಿದ್ದುಕೊಂಡೇ ನಡೆಸುವ ಮೀನುಗಾರಿಕೆ ಆಗಿದೆ.ಈ ರೀತಿಯ ಮೀನುಗಾರಿಕೆಗೆ ಹೋಗುವಾಗ ಕುಡಿಯುವುದಕ್ಕೆ ನಿತ್ಯದ ಬಳಕೆಗೆ ಸಿಹಿನೀರನ್ನು ಬೋಟ್‌ನಲ್ಲಿ ಸಂಗ್ರಹಿಸಿ ಕೊಂಡೊಯ್ಯಲಾಗುತಿತ್ತು.ಆದರೆ ಇದೀಗ ಇದಕ್ಕೆ ಪರಿಹಾರ ಕಂಡು ಕೊಂಡಿದೆ.

ಇನ್ನು ಮುಂದೆ ಮೀನುಗಾರಿಕೆಗೆ ತೆರಳುವಾಗ ಸಿಹಿ ನೀರನ್ನು ಕೊಂಡೊಯ್ಯುವ ಅವಶ್ಯಕತೆ ಇಲ್ಲ.ಈ ಹೊಸ ತಂತ್ರಜ್ಞಾನವನ್ನು ಭಾರತದಲ್ಲಿಯೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಈ ಪ್ರಯೋಗ ನಡೆಸಲಾಗಿದೆ.

ಆಸ್ಟ್ರೇಲಿಯಾದ ಈ ತಂತ್ರಜ್ಞಾನವಾದ ,ಬೋಟ್‌ನಲ್ಲಿಯೇ ಉಪ್ಪು ನೀರನ್ನು ಸಿಹಿ ನೀರಾಗಿ ಫಿಲ್ಟರ್ ಮಾಡುವ ತಂತ್ರಜ್ಞಾನದ ಪ್ರಾತ್ಯಕ್ಷಿತೆಯನ್ನು ಮೀನುಗಾರಿಕ ಸಚಿವರಾದ ಎಸ್.ಅಂಗಾರ ಸಮ್ಮುಖದಲ್ಲೇ ನಡೆಸಲಾಯಿತು.

ಈ ತಂತ್ರಜ್ಞಾನ ಅಮೇರಿಕಾ, ಯುರೂಪ್‌ನಲ್ಲಿ ಈಗಾಗಲೇ ಬಳಕೆಯಲ್ಲಿದ್ದು,ಆಸ್ಟ್ರೇಲಿಯಾ ಮೂಲದ ರೆಯಾನ್ಸ್ ಎಂಬ ಕಂಪೆನಿ ಈ ಕಿಟ್‌ನ್ನು ತಯಾರಿಸುತ್ತಿದೆ. ಇಲ್ಲಿ ಬೋಟ್ ಸಂಚರಿಸುವಾಗಲೇ ಉಪ್ಪು ನೀರನ್ನು ಪೈಪ್ ಮೂಲಕ ಸಂಗ್ರಹಿಸಲಾಗುತ್ತದೆ. ಪೈಪ್‌ನಿಂದ ಬಂದ ಉಪ್ಪು ನೀರು ಶುದ್ಧೀಕರಿಸುವ ಯಂತ್ರದ ಒಳಗೆ ಪಂಪ್ ಆಗಿ ಬಳಿಕ ಫಿಲ್ಟರ್ ಆಗಿ ಸಿಹಿ ನೀರು ಇನ್ನೊಂದು ಪೈಪ್ ಮೂಲಕ ಹೊರ ಬರುತ್ತದೆ.

ಈ ರೀತಿ ಗಂಟೆಗೆ 168 ಲೀಟರ್ ನೀರು ಫಿಲ್ಟರ್ ಆಗಲಿದ್ದು, ದಿನವೊಂದಕ್ಕೆ 2000 ಲೀಟರ್ ನೀರು ಫಿಲ್ಟರ್ ಆಗುತ್ತದೆ. ಇದರಿಂದ ಸದ್ಯ ನೀರು ಸಂಗ್ರಹಿಸಿಡಲು ಬೋಟ್‌ನಲ್ಲಿ ಸ್ಥಳವಕಾಶ ಸಮಸ್ಯೆ ಜೊತೆ ಅಧಿಕ ಭಾರದ ಹೊರೆ ತಪ್ಪಿದಂತಾಗುತ್ತದೆ. ಮೀನುಗಾರರಿಗೆ ನಿತ್ಯ ಬಳಕೆಗೆ ಇದೇ ನೀರನ್ನು ಬಳಸಬಹುದಾಗಿದ್ದು, ಸಿಹಿ ನೀರು ಮುಗಿಯುತ್ತದೆ ಎಂಬ ಆತಂಕವು ಇರುವುದಿಲ್ಲ ಎಂದು ಕಂಪೆನಿ ಕನ್ಸಲ್‌ಟೆಂಟ್ ರಾಮಚಂದ್ರ ಬೈಕಂಪಾಡಿ ತಿಳಿಸಿದ್ದಾರೆ.

ಈ ಯಂತ್ರಕ್ಕೆ 4.60 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಕೇಂದ್ರ ಸರ್ಕಾರ ಐವತ್ತು ಶೇಕಡ ಸಬ್ಸಿಡಿ ನೀಡುವ ನಿರ್ಧಾರ ಮಾಡಿದೆ. ಇದೀಗ ರಾಜ್ಯ ಸರ್ಕಾರವೂ ಬೋಟ್ ಮಾಲೀಕರಿಗೆ ಈ ಯಂತ್ರ ಅಳವಡಿಕೆಗೆ ವಿಶೇಷ ಅನುದಾನ ನೀಡುವ ಚಿಂತನೆ ನಡೆಸಿದೆ. ಒಟ್ಟಿನಲ್ಲಿ ಇನ್ಮುಂದೆ ಮೀನುಗಾರರಿಗೆ ಸಿಹಿ ನೀರು ಸಮುದ್ರದಲ್ಲೇ ಲಭ್ಯವಾಗಲಿದ್ದು, ಸಿಹಿ ನೀರಿನ ತೊಂದರೆ ತಪ್ಪಲಿದೆ.

Leave A Reply

Your email address will not be published.