ತಂಗಳನ್ನ, ಜಗತ್ತಿನ ಉತ್ಕೃಷ್ಟ, ನಂಬರ್ 1 ಬ್ರೇಕ್ ಫಾಸ್ಟ್ ಅಂದ್ರೆ ನಂಬ್ತಿರಾ ?!

ಕನ್ನಡದಲ್ಲಿ ತಂಗಳನ್ನ, ಇಂಗ್ಲೀಷಿನಲ್ಲಿ ಸೋಕ್ಡ್ ರೈಸ್ ಅಂತ ಕರೆದರೆ, ತುಳುವಿನಲ್ಲಿ ತ೦ಞನವೆಂದೂ, ಮಲಯಾಳದಲ್ಲಿ ಪಝಕಂಜಿ , ತಮಿಳಿನಲ್ಲಿ ಪಝಯ ಸಾಧಮ್, ತೆಲುಗಿನಲ್ಲಿ ಸದ್ಧಿ ಅನ್ನಮು ಎಂದೂ ಕರೆಯುತ್ತಾರೆ. ಇದು ಕಡುಬಡವರ ಆಹಾರ. ಪಾಪರುಗಳ ಊಟ. ಈ ದಿನದ ಬಿಸಿ ಬಿಸಿಯಾದ ಹೈ ಕ್ಯಾಲೋರಿಯ ಬ್ಯಾಲೆನ್ಸ್ಡ್ಆಹಾರವೆಲ್ಲಿ ? ಈ ತಂಗಳನ್ನವೆಲ್ಲಿ?

ಆದರೆ ಕಾಲಚಕ್ರ ತಿರುಗಿದೆ. ಅಮೇರಿಕನ್ ನ್ಯೂಟ್ರಿಷನ್ ಅಸೋಸಿಯೇಷನ್ ಜಗತ್ತಿನ ವಿವಿಧ ಪ್ರದೇಶಗಳ, ವಿವಿಧ ದೇಶಗಳ, ವಿವಿಧ ಜನಾಂಗಗಳ ಆಹಾರ ಪದ್ಧತಿಯನ್ನು ಅಧ್ಯಯನ ಮಾಡಿ ನಮ್ಮತ೦ಗಳನ್ನವನ್ನು ಅತ್ಯಂತ ‘ಬೆಸ್ಟ್ ಬ್ರೇಕ್ ಫಾಸ್ಟ್ ‘ ಎಂದು ಸರ್ಟಿಫೈ ಮಾಡಿದೆ !ಹಿಂದೆಲ್ಲಾ ಹಳ್ಳಿಯ ಜನರು ತಾವು ಕೆಲಸಕ್ಕೆ ಹೋಗುವ ಮೊದಲು ರಾತ್ರಿ ಬಾಕಿ ಉಳಿದ ನೀರಿನಲ್ಲಿ ನೆನೆಸಿಟ್ಟ ಅನ್ನವನ್ನು 4 ಕಲ್ಲು ಉಪ್ಪು, ಒಂದು ಹಸಿಮೆಣಸು ಅದಕ್ಕೆ ನುಗ್ಗಿಸಿ, ಇರಿದು ಒಂದು ಕಪ್ಪು ಕೆನೆಮೊಸರು ಹಾಕಿ ಕಲಸಿಕೊಂಡು ತಿಂದು ಕೆಲಸಕ್ಕೆ ಹೋಗುತ್ತಿದ್ದರು.

ಹಾಗೆ ತಂಗಳನ್ನ ಜೊತೆ ಹಾಕಿ ತಿನ್ನಲು ಉಪ್ಪು-ಹಸಿಮೆಣಸುವೇ ಆಗಬೇಕಾಗಿಲ್ಲ. ಒಂದು ತುಂಡು ಉಪ್ಪಿನಕಾಯಿ, ಒಂದು ತುಂಡು ಸುಟ್ಟ ಕುರ್ಚಿ ಮೀನು, ಕೆಂಡದಲ್ಲಿ ಬಿಸುಟು ಸುಟ್ಟ ಒಣಮೆಣಸು, ತೆಂಗಿನಕಾಯಿ ಚಟ್ನಿ- ಯಾವುದಾದರೂ ಸರಿ ಹೊಂದಿಕೊಳ್ಳುತ್ತದೆ. ಹಾಗೆ ತಿಂದು ಗದ್ದೆಯ ಕೆಲಸಕ್ಕೆ ಹೊರಳಿದರೆ ಮಧ್ಯಾಹ್ನ 2 ಗಂಟೆಯವರೆಗೂ unshakable !

ಇವತ್ತು ಭಾರತವೂ ಸೇರಿ ದಕ್ಷಿಣ-ಪೂರ್ವ ಏಷ್ಯಾದ ಹಳ್ಳಿ ಜನರ ಒಂದು ಆಹಾರ ಪ್ರಕಾರ ಇದಾಗಿದೆ. ಭಾರತದಲ್ಲಿ ದಕ್ಷಿಣ ಭಾರತೀಯರಾದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರದಲ್ಲಿ ಬಳಕೆಯಲ್ಲಿರುವ ಆಹಾರ ಪದಾರ್ಥದ ಮಹತ್ವ ಒಂದೆರಡಲ್ಲ. ನೀರಿನಲ್ಲಿ ನೆನೆಸಿ ಇಡುವುದರಿಂದ ಅನ್ನದಲ್ಲಿರುವ ಲ್ಯಾಕ್ಟಿಕ್ ಆಸಿಡ್, ನ್ಯೂಟ್ರಿಷನ್ ಆಗಿ ದೇಹಕ್ಕೆಸಿಗಲಾರದ ಸ್ಥಿತಿಯಿಂದ, ಮನುಷ್ಯ ದೇಹ ಹೀರಿಕೊಳ್ಳಬಹುದಾದ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಗಳನ್ನು ಅಂಶಗಳನ್ನಾಗಿ ಬದಲಾಯಿಸುತ್ತದೆ. ಹನ್ನೆರಡು ಗಂಟೆ ನೆನೆಸಿಟ್ಟ 100 ಗ್ರಾಂ ಕುಚ್ಚುಲಕ್ಕಿಯಲ್ಲಿ 3.4 ಮಿಲಿ ಗ್ರಾಂ ಇದ್ದ ಕಬ್ಬಿಣದ ಅಂಶವು 73.91 ಮಿಲಿ ಗ್ರಾಂ ವರೆಗೆ, ಅಂದರೆ, ಕಬ್ಬಿಣದ ಅಂಶವು ಅಂದರೆ 2073 % ನಷ್ಟು ವೃದ್ಧಿಗೊಳ್ಳುತ್ತದೆ !

ಹೀಗೆ ತಂಗಳನ್ನ ತಿನ್ನುವುದರಿಂದ ಹೊಟ್ಟೆಯಲ್ಲಿನ ಅತಿಯಾದ ಉಷ್ಣದ ಅಂಶ ಕಡಿಮೆಯಾಗಿ ದೇಹವನ್ನು ತಂಪಾಗಿಸುತ್ತದೆ. ಹೊಟ್ಟೆಯಲ್ಲಿರುವ ಬೇಡದ ಬ್ಯಾಕ್ಟೀರಿಯಾಗಳನ್ನು ತೊಲಗಿಸಿ ದೇಹಕ್ಕೆ ಅಗತ್ಯವಿರುವ ಒಳ್ಳೆಯ ಬ್ಯಾಕ್ಟೀರಿಯಾವನ್ನು ಟ್ರಿಲಿಯನ್ ಗಟ್ಟಲೆ ಉತ್ಪತ್ತಿಮಾಡುತ್ತದೆ.

ಈ ಬ್ಯಾಕ್ಟೀರಿಯಾಗಳು ನಮ್ಮ ದೈನಂದಿನ ಜೀರ್ಣಕ್ರಿಯೆಯನ್ನು ಚುರುಕುಗೊಳಿಸಲು ಸಹಾಯ ಮಾಡುತ್ತವೆ ಮತ್ತು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.ಅಲ್ಲದೆ ತಂಗಳನ್ನದ ಬಳಕೆಯಿಂದ ದೇಹದ ಆಂತರಿಕ ಅಂಗಗಳ ಸಮರ್ಪಕ ಕಾರ್ಯ ನಿರ್ವಹಣೆಗೆ ಪ್ರೋತ್ಸಾಹಿಸಿ ಆ ಅಂಗಗಳನ್ನು ಕಾಪಾಡುತ್ತದೆ.ತಂಗಳನ್ನವು ದೇಹವನ್ನು ತಂಪಾಗಿಡುತ್ತದೆ.

ದೇಹ ಹಗುರವಾಗಿ ಫೀಲ್ ಆಗುತ್ತದೆ ಮತ್ತು ಮನಸ್ಸು ಹಗುರವಾಗುತ್ತದೆ. ಹೊಟ್ಟೆಯ ಸಮಸ್ಯೆಗಳು ಕರಗಿಹೋಗುತ್ತವೆ. ಮಲಬದ್ಧತೆ ನಿವಾರಣೆಯಾಗುತ್ತದೆ. ನಮ್ಮನ್ನು ದಿನವಿಡೀ ಉಲ್ಲಾಸಮಯವಾಗಿಡುತ್ತದೆ. ತಂಗಳನ್ನ ಉಂಡ ಮೇಲೆ ಟೀ-ಕಾಫಿ ಮುಂತಾದ ಪಾನೀಯಗಳಿಗೆ ದೇಹದಿಂದ ಹೆಚ್ಚಿನ ಬೇಡಿಕೆ ಮೂಡುವುದಿಲ್ಲ. ಆಶ್ಚರ್ಯದ ಸಂಗತಿಯೆಂದರೆ ಬಿ 6 ಮತ್ತು ಬಿ 12- ಈ ಎರಡು ವಿಟಮಿನ್ ಗಳು ಹೇರಳವಾಗಿ ತಂಗಳನ್ನದಲ್ಲಿ ಸಿಗುತ್ತದೆ.

ಸಾಧಾರಣವಾಗಿ ಇವು ಶಾಖಾಹಾರಿ ಆಹಾರದಲ್ಲಿ ಸಿಗುವುದಿಲ್ಲ. ಇವೆಲ್ಲ ಅಲ್ಲದೆ, ಇದರಲ್ಲಿರುವ ಮೆಗ್ನೀಷಿಯಂ ಖನಿಜ ಪದಾರ್ಥಗಳು ದೇಹದ ಎಲುಬುಗಳನ್ನು ಗಟ್ಟಿಗೊಳಿಸಿ ದೇಹ ಸವಕಳಿಯ ರೋಗಗಳಾದ ಅರ್ಥರೈಟಿಸ್ ಮತ್ತು ಕ್ಯಾನ್ಸೆರ್ ಅನ್ನು ತಡೆಯುವಲ್ಲಿ ಸಹಕಾರಿ ಯಾಗುತ್ತದೆ. ದೇಹದಲ್ಲಿನ ಆಂತರಿಕ ಬೆಳವಣಿಗೆಗೆ ಮಾತ್ರವಲ್ಲ, ಇದು ಬಾಹ್ಯಸೌಂದರ್ಯವನ್ನು ಕೂಡ ವೃದ್ಧಿಸಬಲ್ಲದು. ಚರ್ಮವು ಕಾಂತಿಯುಕ್ತವಾಗುತ್ತದೆ ಮತ್ತು ದೇಹಕ್ಕೆ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಒಟ್ಟಾರೆಯಾಗಿ ಚಾಲ್ತಿಯಲ್ಲಿರುವ ಎಲ್ಲ ಹೈಕ್ಯಾಲೊರಿ ಆಹಾರದ ಎದುರು ನಮ್ಮ ಹಿರಿಯರು ಸಾವಿರಾರು ವರ್ಷಗಳಿಂದ ಮಾಡಿಕೊಂಡು ಬಂದ ತಂಗಳನ್ನವು ಎಲ್ಲ ರೀತಿಯಿಂದಲೂ ಒಂದು ಸರಳ ಮತ್ತು ಪರ್ಫೆಕ್ಟ್ ಮುಂಜಾನೆಯ ಆಹಾರವಾಗಿದೆ. ಪೌಷ್ಟಿಕತೆ ಆಹಾರದ ಒಂದು ಗುಣ. ಪೌಷ್ಟಿಕತೆ ಮಾತ್ರ ಮುಖ್ಯವಲ್ಲ. ಪೌಷ್ಟಿಕತನವಲ್ಲದೆ, ಆಯುರ್ವೇದದಲ್ಲಿ ಹೇಳಿದ ಮೂರು ತರಹದ ದೋಷಗಳಾದ ವಾತ, ಪಿತ್ತ ಮತ್ತು ಕಫ ನಿವಾರಕವಾಗಿಯೂ ಆಹಾರವಿರಬೇಕು. ಆ ಎಲ್ಲ ಅರ್ಹತೆ ನಮ್ಮ ತಂಗಳನ್ನಕ್ಕೆ ಇದೆ.

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.