ಕಲಿಯುಗದಲ್ಲಿ ನಡೆಯಿತೊಂದು ಸ್ವಯಂವರ | ಬಿಲ್ಲು ಮುರಿದು ಮದ್ವೆಯಾದ ವರ

ಪಾಟ್ನಾ: ಇಲ್ಲಿ ಮತ್ತೆ ತ್ರೇತಾಯುಗ ಮರುಕಳಿಸಿದೆ. ತ್ರೇತಾಯುಗದಲ್ಲಿ ಸೀತಾದೇವಿ ಸ್ವಯಂವರದಲ್ಲಿ ಶ್ರೀರಾಮ ಬಿಲ್ಲು ಮುರಿದ ಕಥೆ ನೀವು ಕೇಳಿರಬೇಕು. ಈಗ ಅದೇ ರೀತಿಯಲ್ಲಿ ಇಲ್ಲೋರ್ವ ಮದುವೆಯಲ್ಲಿ ಬಿಲ್ಲು ಮುರಿದು ವಧುವಿನ ಕೊರಳಿಗೆ ಹಾರ ಹಾಕಿದ್ದಾನೆ. ಮದುವೆಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಬಿಹಾರದ ಸರಣಾ ಜಿಲ್ಲೆಯ ಸೋನುಪುರದ ಸಬಲ್ಪುರ ಪೂರ್ವ ಭಾಗದಲ್ಲಿ ಈ ಸ್ವಯಂವರದ ಮಾದರಿಯ ವಿಶಿಷ್ಟ ಮದುವೆ ನಡೆದಿದೆ.

ಕೊರೋನಾ ಕಾಲದಲ್ಲಿ ಅದ್ಧೂರಿ ಮದುವೆಗಳಿಗೆ ಬ್ರೇಕ್ ಬಿದ್ದಿರುವ ಜನರು ಮನೆಗಳಲ್ಲಿ ಸರಳವಾಗಿ ಮದುವೆ ನೆರೆವೇರಿಸುತ್ತಿದ್ದಾರೆ. ಆದ್ರೂ ವಿಭಿನ್ನವಾಗಿ ಮದುವೆ ಆಗಬೇಕು ಎಂದು ಹಲವರಿಗೆ ಆಸೆಯಂತೂ ಇದ್ದೇ ಇರುತ್ತದೆ.
ಈಗ ಅದೇ ರೀತಿಯಲ್ಲಿ ವರನೊಬ್ಬ ರಾಮಾಯಣದಲ್ಲಿ ಸ್ವಯಂವರ ನಡೆದ ರೀತಿಯಲ್ಲಿ ಧನಸ್ಸು ಮುರಿದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾನೆ.

ಸೀತಾ ಸ್ವಯಂವರದಲ್ಲಿ ದೊಡ್ಡ ದೊಡ್ಡ ಬಲಶಾಲಿ ಯೋಧರು ಭಾಗಿಯಾಗಿದ್ರು. ಆದ್ರೆ ಇಲ್ಲಿ ವರನಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಬಹುಶಃ ವಧುವಿನ ಪಾಲಿಗೆ ಆತನೊಬ್ಬನೆ ಆ ಊರಲ್ಲಿ ಬಲಶಾಲಿ ಎಂದೆನ್ನಿಸುತ್ತದೆ !

ಮೊದಲು ಸ್ಟೇಜ್ ಮೇಲೆ ಬರುವ ವರ, ಧನಸ್ಸು ಇರಿಸುವ ಮೇಜಿನ ಮುಂದೆ ಬಂದು ಎಲ್ಲರಿಗೂ ನಮಸ್ಕರಿಸುತ್ತಾನೆ. ನಂತರ ಪರಮೇಶ್ವರನನ್ನು ನೆನೆದು ಶ್ರೀರಾಮನಂತೆ ಧನಸ್ಸು ಎತ್ತಿ, ಮುರಿಯುತ್ತಾನೆ. ಧನಸ್ಸು ಮುರಿಯುತ್ತಿದ್ದಂತೆ ಮದುವೆಗೆ ಆಗಮಿಸಿದ ಅತಿಥಿಗಳೆಲ್ಲ ಚಪ್ಪಾಳೆ ಹೊಡೆದು ಕೇಕೆ ಹಾಕಿದ್ದಾರೆ.

ವರ ಧನಸ್ಸು ಮುರಿಯುತ್ತಿದ್ದಂತೆ ಮಹಿಳೆಯರು ಹಾಡು ಹೇಳುತ್ತಾ ವಧುವನ್ನು ವೇದಿಕೆಗೆ ಕರೆ ತಂದಿದ್ದಾರೆ. ಆನಂತರ ಜೋಡಿ ಪರಸ್ಪರ ಹಾರ ಬದಲಿಸಿಕೊಂಡು ಎಲ್ಲರ ಆಶೀರ್ವಾದ ಪಡೆದುಕೊಂಡರು.

Leave A Reply

Your email address will not be published.