ನಾಳೆ ಎಸ್ಎಸ್ಎಲ್ ಸಿ ಪರೀಕ್ಷಾ ದಿನಾಂಕ ಪ್ರಕಟ ಸಾಧ್ಯತೆ | ಶಿಕ್ಷಣ ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ

ಬೆಂಗಳೂರು: ಜುಲೈನಲ್ಲಿ ನಡೆಯಲಿರುವ 2021ನೇ ಸಾಲಿನ ಎಸ್ಎಸ್ಎಲ್​ಸಿ ಪರೀಕ್ಷೆಗೆ ನಾಳೆಯೇ (ಜೂನ್ 28) ದಿನಾಂಕ ಪ್ರಕಟವಾಗುವ ಸಾಧ್ಯತೆಯಿದೆ.

ಸುರಕ್ಷಿತ ವಾತಾವರಣದಲ್ಲಿ ಎಸ್ಎಸ್ಎಲ್​ಸಿ ಪರೀಕ್ಷೆ ನಡೆಸುವ ವಿಚಾರಕ್ಕೆ ಸಂಬಂಧಿಸಿ ನಾಳೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಜಿಲ್ಲಾಧಿಕಾರಿಗಳು, ಸಿಇಒ, ಎಸ್​ಪಿ, ಡಿಎಚ್ಒಗಳು ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಮತ್ತು ರಾಜ್ಯದ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯ ಜೊತೆ ಮಹತ್ವದ ಸಭೆ ನಡೆಯಲಿದೆ.

ಕೊರೊನಾ ನಡುವೆಯೂ ಪರೀಕ್ಷೆ ನಡೆಸಲು ಮಹತ್ವದ ಚರ್ಚೆ ನಡೆಯಲಿದ್ದು, ಅಧಿಕಾರಿಗಳ ಸಲಹೆ, ಸೂಚನೆಯೊಂದಿಗೆ ನಾಳೆಯೇ ಎಸ್ಎಸ್ಎಲ್​ಸಿ ಪರೀಕ್ಷಾ ದಿನಾಂಕ ಪ್ರಕಟವಾಗುವ ಸಾಧ್ಯತೆಯಿದೆ. ಜುಲೈ ಮೂರನೇ ವಾರದಲ್ಲಿ ಎಸ್ಎಸ್ಎಲ್​ಸಿ ಪರೀಕ್ಷೆ ನಡೆಯುವ ಹಿನ್ನೆಲೆ ಈಗಾಗಲೇ ಎಸ್ಎಸ್ಎಲ್​ಸಿ ಪರೀಕ್ಷೆಗೆ ಶಿಕ್ಷಣ ಇಲಾಖೆಯಿಂದ ಎಲ್ಲಾ ತಯಾರಿ ಆರಂಭವಾಗಿದೆ.

ಈಗಾಗಲೇ 6,000 ಪರೀಕ್ಷಾ ಕೇಂದ್ರಗಳು ನಿಗದಿಯಾಗಿದೆ. ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ಪರೀಕ್ಷಾ ತುರ್ತು ಸಿದ್ಧತೆಯನ್ನು ಆರಂಭಿಸಿದೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಕೊರೊನಾ ನಿಯಮಗಳನ್ನು ಪಾಲಿಸಲು ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆರು ಆಡಿಗೆ ಒಂದರಂತೆ ಆಸನ ವ್ಯವಸ್ಥೆ ಮಾಡಲಾಗುವುದು. ಕೊಠಡಿಯಲ್ಲಿ ಗಾಳಿ, ಬೆಳಕಿನ ವ್ಯವಸ್ಥೆ ಮಾಡಲಾಗುತ್ತದೆ. ಸಿಸಿಟಿವಿ ಕ್ಯಾಮರಾ ಅಳವಡಿಕೆ ವ್ಯವಸ್ಥೆ ಮಾಡಿಕೊಳ್ಳಲಾಗುವುದು.

ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪರೀಕ್ಷಾ ಕೇಂದ್ರಗಳ ಸಿದ್ಧತೆ ನಡೆಯುತ್ತಿದೆ. ತುರ್ತಾಗಿ ಪರೀಕ್ಷಾ ಕೇಂದ್ರಗಳ ರಚನೆ ಮಾಡಿ ಮಾಹಿತಿ ನೀಡುವಂತೆ ರಾಜ್ಯದ ಎಲ್ಲ ನೋಡಲ್ ಅಧಿಕಾರಿಗಳು, ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ನಿರ್ದೇಶಕರು ಸೂಚನೆ ನೀಡಿದ್ದಾರೆ.

ಎಸ್ಎಸ್ಎಲ್​ಸಿ ಪರೀಕ್ಷೆಗೆ ಕಳೆದ ಭಾರಿಗಿಂತ ಹೆಚ್ಚಿನ ಶಿಕ್ಷಕರ ಅವಶ್ಯಕತೆ ಇದೆ. ಹೀಗಾಗಿ ಕೋವಿಡ್ ಕಾರ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಕ ಹಾಗೂ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್ ಪತ್ರ ಬರೆದಿದ್ದಾರೆ.

Leave A Reply

Your email address will not be published.