ಜಮ್ಮು ವಿಮಾನ ನಿಲ್ದಾಣದಲ್ಲಿ ಐದು ನಿಮಿಷಗಳ ಅಂತರದಲ್ಲಿ 2 ಸ್ಫೋಟ | ತನಿಖೆ ಪ್ರಾರಂಭಿಸಿದ ಭಾರತೀಯ ವಾಯುಪಡೆ

ಶ್ರೀನಗರ್: ಜಮ್ಮು ವಿಮಾನ ನಿಲ್ದಾಣದಲ್ಲಿ ಕೇವಲ ಐದು ನಿಮಿಷಗಳ ಅಂತರದಲ್ಲಿ ಸಂಭವಿಸಿದ ಎರಡು ಸ್ಫೋಟಗಳ ಬೆನ್ನಲ್ಲೇ ಡ್ರೋನ್ ದಾಳಿ ಬಗ್ಗೆ ಭಾರತೀಯ ವಾಯು ಪಡೆ ಸಿಬ್ಬಂದಿ ತನಿಖೆ ಶುರು ಮಾಡಿದ್ದಾರೆ.

ಭಾನುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಐದು ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದ್ದು, ಇಬ್ಬರು ಭಾರತೀಯ ಸೇನಾ ಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ರಾಷ್ಟ್ರೀಯ ಬಾಂಬ್ ದತ್ತಾಂಶ ಕೇಂದ್ರ ತಜ್ಞರು, ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ದೌಡಾಯಿಸಿದ್ದು, ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಭಾನುವಾರ ಬೆಳಗಿನ ಜಾವ 1.37ರ ಹೊತ್ತಿಗೆ ಮೊದಲ ಸ್ಫೋಟ ಸಂಭವಿಸಿದ್ದು, ಕಟ್ಟಡದ ತಾಂತ್ರಿಕ ವಿಭಾಗದಲ್ಲಿನ ಮೇಲ್ಬಾವಣಿಗೆ ಹಾನಿಯಾಗಿದೆ. ಬೆಳಗಿನ ಜಾವ 1.43ರ ಹೊತ್ತಿಗೆ ಒಂದೇ ಕಿಲೋ ಮೀಟರ್ ದೂರದಲ್ಲಿ ಇರುವ ಬಯಲು ಪ್ರದೇಶದಲ್ಲಿ ಎರಡನೇ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.

ಸತ್ವಾರಿ ಪ್ರದೇಶದ ಜಮ್ಮು ವಿಮಾನ ನಿಲ್ದಾಣದ ರನ್ ವೇ ಮತ್ತು ವಾಯು ಸಂಚಾರವನ್ನು ಭಾರತೀಯ ವಾಯು ಪಡೆ ನಿಯಂತ್ರಿಸುತ್ತಿದೆ. ಪ್ರಯಾಣಿಕರನ್ನು ಹೊಂದಿರುವ ವಿಮಾನಗಳ ಹಾರಾಟವನ್ನು ಸಹ ವಾಯುಪಡೆಯೇ ನಿರ್ವಹಿಸುತ್ತದೆ.

ಜಮ್ಮು ವಿಮಾನ ನಿಲ್ದಾಣದಲ್ಲಿ ನಡೆದಿರುವ ಎರಡು ಸ್ಫೋಟಗಳ ಗಂಭೀರತೆಯನ್ನು ಅರಿತುಕೊಂಡು ಕೇಂದ್ರ ತನಿಖಾ ತಂಡವೇ ಪ್ರಕರಣದ ತನಿಖೆಗೆ ಮುಂದಾಗಿದೆ. ವಾಯು ಪಡೆ ಮುಖ್ಯಸ್ಥ ಏರ್ ಮಾರ್ಷಲ್ ಹೆಚ್.ಎಸ್ ಅರೋರಾ ಮತ್ತು ಏರ್ ಮಾರ್ಷಲ್ ವಿಕ್ರಮ್ ಸಿಂಗ್ ಜೊತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಚರ್ಚೆ ನಡೆಸಿದ್ದು, ಇಬ್ಬರು ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ತೆರಳಿದ್ದಾರೆ ಎಂದು ಸಚಿವಾಲಯವು ಸ್ಪಷ್ಟಪಡಿಸಿದೆ.

Leave A Reply

Your email address will not be published.