ಉರಿದು ಬೀಳುತ್ತಿದ್ದ ಶಿವಸೇನಾ ನಾಯಕ ಉದ್ಧವ್ ಕೂಲ್ ಕೂಲ್ | ಮೋದಿ ಭೇಟಿಯಲ್ಲಿ ಮೋದಿ ಮಾಡಿದ ಮೋಡಿ ಏನಿರಬಹುದು ?!
ಮುಂಬಯಿ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು ದಿಲ್ಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬಂದ ನಂತರ, ಬಿಜೆಪಿ ವಿರುದ್ಧ ಗುಡುಗುತ್ತಿದ್ದ ಶಿವಸೇನೆ ತಣ್ಣಗಾಗಿದೆ. ಅಲ್ಲಿಲ್ಲಿ ಹೊಸ ಬಾಂಧವ್ಯದ ಹೊಸ ಸಾಧ್ಯತೆಗಳ ಮಾತುಗಳು ಹರಿದಾಡುತ್ತಿದ್ದು, ‘ಹೊಸ ಮೈತ್ರಿ’ ಸಾಧ್ಯತೆಯ ಸುಳಿವು ಸಿಕ್ಕಿದೆ.
ಈ ವಾರದ ಶಿವ ಸೇನೆಯ ಮುಖವಾಣಿ ‘ಸಾಮ್ನಾ’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಪಾದಕೀಯದಲ್ಲಿ, ”ಪ್ರಧಾನಿ ಮೋದಿ ಅವರೊಂದಿಗೆ ಮುಂಚಿನಿಂದಲೂ ನಾವು ಯಾವುದೇ ಕಹಿಯಾದ ಸ್ನೇಹವಿರಲಿಲ್ಲ. ಹಾಗಾಗಿ ಸೌಹಾರ್ದಯುತ ಬಾಂಧವ್ಯ ಮಾಡಿಕೊಳ್ಳುವ ಪ್ರಶ್ನೆ ಉದ್ಭವಿಸಲ್ಲ. ಬಾಂಧವ್ಯ ಮುಂದುವರಿಯಲಿದೆ. ಮಹಾರಾಷ್ಟ್ರ ಸರಕಾರಕ್ಕೂ ಪ್ರಧಾನಿ ಜತೆಗೆ ಉತ್ತಮ ಸ್ನೇಹವಿದೆ. ಮೋದಿ ಒಳ್ಳೆಯ ನಾಯಕ,” ಎಂದು ಬಣ್ಣಿಸಲಾಗಿದೆ.
ಈ ಮೂಲಕ ಹಳೆಯ ಮೈತ್ರಿಗೆ ಮರಳುವ ಇಚ್ಛೆಯನ್ನು ಶಿವಸೇನೆ ಪರೋಕ್ಷವಾಗಿ ವ್ಯಕ್ತಪಡಿಸಿದೆ. ಶೀಘ್ರವೇ ಬಿಜೆಪಿ-ಶಿವಸೇನೆ ಮೈತ್ರಿ ಮುಂಚಿನಂತೆ ಆದರೂ ಅಚ್ಚರಿಯಿಲ್ಲ ಎಂಬ ನಿರೀಕ್ಷೆಯನ್ನು ರಾಜಕೀಯ ಪಂಡಿತರು ವ್ಯಕ್ತಪಡಿಸಿದ್ದಾರೆ.
ಇವತ್ತು ಇಡೀ ವಿಶ್ವ ಹೆಮ್ಮೆಪಡುವ ನಾಯಕ ನರೇಂದ್ರ ಮೋದಿ. ಆತನ ಎದುರು ಯಾವುದೇ ಬರಲಿ, ಎಂತಹ ಪರಿಸ್ಥಿತಿಯೇ ಉದ್ಭವವಾಗಲಿ, ಆತ ಕೈ ಇಟ್ಟ ಅಂದರೆ ಅದು ಫಿಕ್ಸ್. ಅಲ್ಲಿ ಸೋಲೆಂವುದೇ ಇಲ್ಲ !
ಮೋದಿಯನ್ನ ಟೀಕೆ ಮಾಡಲೇಬೇಕೆಂದು ವರ್ಷಗಟ್ಟಲೆ ಟೀಕೆ ಮಾಡಿ, ಹಲವು ಷಡ್ಯಂತ್ರ ರೂಪಿಸಿ ಕೊನೆಯದಾಗಿ, ಇನ್ನೇನು ಮೋದಿ ಯುಗಾಂತ್ಯ ಆಯಿತು ಅನ್ನುವಷ್ಟರಲ್ಲಿ, ತನ್ನ ಒಂದೇ ಒಂದು ಸಣ್ಣ ನಡೆಯ ಮೂಲಕ ವಿರೋಧಿ ಪಾಳಯದ ಜೀವಮಾನದ ಪ್ರಯತ್ನವನ್ನು ಒರೆಸಿ ಹಾಕಬಲ್ಲ ಶಕ್ತಿ ಆತನ ಮಾಂತ್ರಿಕ ಪರ್ಸನಾಲಿಟಿಗೆ ಇದೆ. ಆತನ ಗುಹೆಯನ್ನು ಹುಲಿಯಂತೆ ಹೊಕ್ಕವರು, ಗಪ್ ಚುಪ್ ಆಗಿ ಬಾಲವಿಲ್ಲದೆ ವಾಪಸ್ ಬಂದಿದ್ದಾರೆ. ಅದೆಲ್ಲವನ್ನೂ ನರೇಂದ್ರ ಮೋದಿ ಸಾಧಿಸಿದ್ದು ತನ್ನ ತಾಳ್ಮೆಯಲ್ಲಿ, ತನ್ನ ನಾಲಿಗೆ ಜಾರಲು ಬಿಡದ ಮಾತಿನಲ್ಲಿ, ಎಂದೂ ಗಲೀಜು ಮಾಡಿಕೊಳ್ಳದ ಪರಿಶುದ್ಧತೆಯಲ್ಲಿ. ಇದೀಗ ಎಗರಾಡುತ್ತಿದ್ದ ಮಹಾರಾಷ್ಟ್ರದ ಹುಲಿ ತೆಪ್ಪಗಾಗಿದ್ದು, ಮತ್ತೊಮ್ಮೆ ಮೋದಿಯ ಮೋಡಿ ಕೆಲಸ ಮಾಡಿದೆ.
ಅತ್ತ ಆಡಳಿತಾರೂಢ ಮಹಾವಿಕಾಸ್ ಅಘಾಡಿಯ ಭಾಗವಾದ ಎನ್‌ಸಿಪಿಯ ವರಿಷ್ಠ ಶರದ್ ಪವಾರ್ ಅವರು ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳ ನಾಯಕರೊಂದಿಗೆ ಬಿಜೆಪಿ ವಿರುದ್ಧ ಪ್ರಬಲ ಒಕ್ಕೂಟ ರಚನೆಗೆ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾಮ್ನಾ ಸಂಪಾದಕೀಯ ಮಹತ್ವ ಪಡೆದಿದೆ. ಶಿವಸೇನೆ ಮೋದಿಯ ಪ್ರಖರ ವ್ಯಕ್ತಿತ್ವದ ಎದುರು ಮೆತ್ತಗಾಗಿದೆ. ಆ ಮೂಲಕ ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ಅವಕಾಶಗಳ ಬಾಗಿಲು ತೆರೆದಿದೆ.