Dakshina Kannada: ರಾತ್ರಿ ಪ್ರಯಾಣದ ವೇಳೆ ಬಸ್ಸಿನಲ್ಲಿ ತಿಗಣೆ ಕಾಟ; ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ ಮಹಿಳೆ, ಪರಿಹಾರದ ಮೊತ್ತ ಎಷ್ಟು ಗೊತ್ತೇ?

Dakshina Kannada: ಜನರು ಬಸ್‌ನಲ್ಲಿ ಪ್ರಯಾಣ ಮಾಡುವ ಸುಖಕರವಾದ ಪ್ರಯಾಣ ಮಾಡಲು ಬಯಸುತ್ತಾರೆ. ಆದರೆ ಅದೇ ಬಸ್‌ನಲ್ಲಿ ತಿಗಣೆ ಕಾಟ ಉಂಟಾದರೆ ಆಗುವ ಆರೋಗ್ಯದ ಪರಿಣಾಮವೇನು? ಅಂತಹುದೇ ಒಂದು ಭೀಕರ ಅನುಭವ ಓರ್ವ ಮಹಿಳೆಗೆ ಆಗಿದೆ. ತಿಗಣೆ ಕಾಟದಿಂದ ಆರೋಗ್ಯ ಹಾಳಾಗಿ, ನಷ್ಟ ಅನುಭವಿಸಿದ ಮಹಿಳೆಯು ದ.ಕ. ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದು, ಇದೀಗ ಬಸ್ಸು ಮಾಲೀಕರಿಗೆ ದಂಡ ವಿಧಿಸಿ ಮಹಿಳೆಗೆ ಪರಿಹಾರ ನೀಡುವಂತೆ ಆಯೋಗ ಆದೇಶ ನೀಡಿದೆ.
ನಟ ಶೋಭರಾಜ್ ಪಾವೂರು ಅವರ ಪತ್ನಿ ದೀಪಿಕಾ ಸುವರ್ಣ ಅವರು ಪ್ರಯಾಣ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಸಂತ್ರಸ್ತ ಮಹಿಳೆಗೆ 1.29 ಲಕ್ಷ ರೂ. ಅನ್ನು ಶೇ.6 ರ ಬಡ್ಡಿ ವಿಧಿಸಿ ಪರಿಹಾರವಾಗಿ ನೀಡುವಂತೆ ಬಸ್ಸಿನ ಮಾಲಕರಿಗೆ ಆದೇಶ ನೀಡಿದ್ದಾರೆ.
ಘಟನೆ ವಿವರ:
2022 ರ ಆ.16ರಂದು ಮಹಿಳೆ ರಾತ್ರಿ ಸಮಯದಲ್ಲಿ ಸೀ ಬರ್ಡ್ ಟೂರಿಸ್ಟ್ ಕೊಡಿಯಾಲ್ ಬೈಲ್‌ನಲ್ಲಿ ಮಂಗಳೂರಿನಿಂದ ಬೆಂಗಳೂರು ಬಸ್ಸಿನಲ್ಲಿ ಪ್ರಯಾಣ ಮಾಡಿದ್ದಾರೆ. ರೆಡ್ ಬಸ್ ಮೂಲಕ ಸೀ ಬರ್ಡ್ ಬಸ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಆದರೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ತಿಗಣೆ ಕಾಟ ಶುರುವಾಗಿದೆ. ಇದನ್ನು ಅವರು ಬಸ್ಸು ನಿರ್ವಾಹಕರ ಗಮನಕ್ಕೆ ತಂದಿದ್ದರೂ, ಅವರು ನಿರ್ಲಕ್ಷ್ಯ ವಹಿಸಿದ್ದಾರೆ.
ಹಾಗಾಗಿ ಬಸ್ಸು ಹಾಗೂ ತಾನು ಟಿಕೆಟ್ ಬುಕ್ ಮಾಡಿದ ರೆಡ್‌ಬಸ್ ಆನ್ಲೈನ್ ಆಪ್ ವಿರುದ್ದ ಆಯೋಗಕ್ಕೆ ಈ ಕುರಿತು ದೂರನ್ನು ನೀಡಿದ್ದಾರೆ. ದೀಪಿಕಾ ಸುವರ್ಣ ಅವರು ತಮ್ಮ ಪತಿ ಶೋಭರಾಜ್ ಪಾವೂರು ಅವರ ಜೊತೆ ಕಿರುತೆರೆಯ ರಾಜಾರಾಣಿ ರಿಯಾಲಿಟಿ ಶೋದಲ್ಲಿ ಭಾಗವಹಿಸಲು ಬೆಂಗಳೂರಿಗೆ ಆ ದಿನ ಬಸ್ಸಿನಲ್ಲಿ ತೆರಳಿದ್ದರು. ಆದರೆ ಬಸ್ಸಿನಲ್ಲಿ ತಿಗಣೆ ಕಾಟ ಅನುಭವಿಸಿದ್ದಾರೆ.
ಹೀಗಾಗಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ರಿಯಾಲಿಟಿ ಶೋದಲ್ಲಿ ಭಾಗವಹಿಸಲು ಆಗದೇ ಇದ್ದ ಕಾರಣ ಸಂಭಾವನೆಗೂ ಹೊಡೆತ ಬಿದ್ದಿದೆ. ಇದೀಗ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ದಂಡ ಪಾವತಿಸಲು ಆದೇಶ ನೀಡಿದೆ. 1 ಲಕ್ಷ ರೂ. ಪರಿಹಾರ, 18,650 ರೂ ದಂಡ ಮೊತ್ತು, 850 ರೂ. ಟಿಕೆಟ್ ಹಣ, ಕಾನೂನು ಸಮರದ 10 ಸಾವಿರ ಶುಲ್ಕ ಪಾವತಿಸುವಂತೆ ಆದೇಶ ನೀಡಿದೆ. ಈ ಆದೇಶವನ್ನು ಉಲ್ಲಂಘನೆ ಮಾಡಿದ್ದಲ್ಲಿ ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆಗೆ ಅವಕಾಶವಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.