ಮಳೆಗಾಲದ ರಾತ್ರಿಗೆ ಒಂದು ಬೆಚ್ಚಗಿನ ಸಾಥ್ | ಚಿಕನ್ ಪ್ರಿಯರ ನಾಲಗೆಯಲ್ಲಿ ಹಾಹಾಕಾರ ಎಬ್ಬಿಸಬಲ್ಲ ಸ್ಪೈಸಿ ನಾಟಿ ಚಿಕನ್ ಪೆಪ್ಪರ್
ಪೆಪ್ಪರ್ ಚಿಕನ್ ಪಾಕವಿಧಾನವು ಬರಿಯ ಒಂದು ಕೋಳಿ ಮಾಂಸದ ಅಡುಗೆಯಲ್ಲ. ಅದು ಚಿಕನ್ ಪ್ರಿಯರ ಜಡ್ಡುಗಟ್ಟಿದ ನಾಲಗೆಯಲ್ಲಿ ಹಾಹಾಕಾರ ಎಬ್ಬಿಸಬಲ್ಲ ಸಾಮರ್ಥ್ಯವಿರುವ ಒಂದು ಭೋಜ್ಯ.
ಮಳೆಗಾಲದ ಜಿರಿಗುಡುವ ಮಳೆಯ ಹಿನ್ನಲೆಯಲ್ಲಿ, ಸಣ್ಣಗೆ ಉರಿಯಲ್ಲಿ ಬೇಯಿಸಿದ ಪೆಪ್ಪರ್ ಚಿಕನ್ ಇಷ್ಟ ಪಡದವನೆ ಪಾಪಿ ಎನ್ನುವಷ್ಟರ ಮಟ್ಟಿಗೆ ಅದರ ಜನಪ್ರಿಯತೆ ಅಡಗಿದೆ.
ಇದೊಂದು ರುಚಿಕರ ಮತ್ತು ವಿಶೇಷ ರುಚಿಯ ತಿನಿಸಾಗಿದ್ದರೂ ಅದನ್ನು ಮಾಡುವುದು ತುಂಬಾ ಸರಳ. ಕೇವಲ ಕೆಲವೇ ಕೆಲವು ಬೆರಳೆಣಿಕೆಯ ಮಸಾಲೆ ಸಾಮಗ್ರಿಗಳನ್ನು ಜೊತೆಗಿರಿಸಿಕೊಂಡು ರುಚಿಕರವಾದ ಪೆಪ್ಪರ್ ಚಿಕನ್ ಅನ್ನು ನೀವು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು.
ಬೇಕಾಗುವ ಸಾಮಗ್ರಿಗಳು:
- ಚಿಕನ್ – 1 ಕೇಜಿ ( ನಾಟಿ ಕೋಳಿ ಉತ್ತಮ)
- ಎಣ್ಣೆ – 4 ಟೀ ಸ್ಪೂನ್
- ಕರಿಮೆಣಸು – 5 ಟೀ ಸ್ಪೂನ್
- ಈರುಳ್ಳಿ – 2 ದೊಡ್ಡದು
- ಟೊಮೆಟೊ – 2
- ಹಸಿಮೆಣಸು – 3
- ಶುಂಠಿ, ಬೆಳ್ಳುಳ್ಳಿ ಪೇಸ್ಟ್- 4 ಸ್ಪೂನ್
ಪಾಕ ವಿಧಾನ:
- ಒಂದು ದಪ್ಪ ತಳದ ಅಗಲವಾದ ಬಾಣಲಿಯನ್ನು ತೆಗೆದುಕೊಳ್ಳಿ. ಜತೆಗೆ ಚಿಕನ್ ತಳ ಹಿಡಿಯದಂತೇ ಕಲಕಲು ಮರದ ಸೌಟು ಇರಲಿ.
ಒಂದು ಪಾತ್ರೆಗೆ ಎಣ್ಣೆಯನ್ನು ಹಾಕಿ, ಬಿಸಿಯಾದ ಎಣ್ಣೆಗೆ ಈರುಳ್ಳಿಯನ್ನು ಸೇರಿಸಿ, ಹುರಿಯಿರಿ. ಈರುಳ್ಳಿ ಹೊಂಬಣ್ಣಕ್ಕೆ ಬಂದ ನಂತರ ಹೆಚ್ಚಿಕೊಂಡ ಟೊಮ್ಯಾಟೋ ಸೇರಿಸಿ ಚೆನ್ನಾಗಿ ಬೇಯಿಸಬೇಕು.
- ನಂತರ ಈ ಮೊದಲೇ ಚೆನ್ನಾಗಿ ತೊಳೆದು ಇಟ್ಟಿರುವ ಚಿಕನ್ ಅನ್ನು ಇದೇ ಪಾತ್ರೆಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಬೇಕು. ಉರಿ ಮೀಡಿಯಂ ಇರಲಿ. ಬೇಯುತ್ತ ಇದ್ದಂತೆ ಚಿಕನ್ ಸ್ವಲ್ಪ ನೀರು ಬಿಡುತ್ತದೆ. ಮುಚ್ಚಳ ಮುಚ್ಚಿ ಇರಲಿ. ಸುಮಾರು 10 ನಿಮಿಷ ಹದವಾಗಿ ಬೇಯಲಿ. ನಾಟಿ ಚಿಕ್ಕನ್ ಬಲಿತಿದ್ದರೆ ಮತ್ತೊಂದಷ್ಟು ಹೊತ್ತು ಬೇಯಿಸುವುದು ಅಗತ್ಯ.
- ಅದೇ ಬಾಣಲೆಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸಿನಕಾಯಿ, ಕಾಳು ಮೆಣಸಿನ ಪುಡಿ ಮತ್ತು ಅರಿಶಿಣ ಎಲ್ಲಾ ಪದಾರ್ಥಗಳು ಚೆನ್ನಾಗಿ ಕಲಕಿ. ಮಿಶ್ರಣ ಮಾಡಿದ 4-5 ನಿಮಿಷಗಳ ಕಾಲ ಬೇಯಿಸಿ. ಈಗ ಎಣ್ಣೆ ಮಸಾಲೆಯಿಂದ ಬಿಟ್ಟಿರುತ್ತದೆ. ಈ ಸಂದರ್ಭದಲ್ಲಿ ಸ್ಥಳ ಹಿಡಿಯುವ ಸಂಭವ ಹೆಚ್ಚು. ಆವಾಗಾವಾಗ ನಿರಂತರವಾಗಿ ಕಲಕುತ್ತಲೆ ಇರಬೇಕು.
- ಈಗ ಕೋಳಿಯ ಮಾಂಸ ಚೆನ್ನಾಗಿ ಬೆಂದು ರಸವು ಬಹುತೇಕವಾಗಿ ಆವಿಯಾಗುತ್ತದೆ. ನೀರು ಆರಿ, ಚೆನ್ನಾಗಿ ಚಿಕನ್ ಮಸಾಲಾ ಮತ್ತು ಎಣ್ಣೆಗಳ ಡ್ರೈ ಪಾಕ ರೆಡಿಯಾಗುತ್ತದೆ. ಈಗ ಪೆಪ್ಪರ್ ಚಿಕನ್ ಸವಿಯಲು ಸಿದ್ಧವಾಗುತ್ತದೆ. ಇನ್ನೇನು ಒಲೆಯಿಂದ ಮಾಡಲೇ ಇಳಿಸುವ ಮೊದಲು ಅರ್ಧ ಸ್ಪೂನ್ ಪೆಪ್ಪರ್ ಸ್ಪ್ರೇ ಮಾಡಬಹುದು. ಇಷ್ಟ ಇದ್ದವರು ಕೊತ್ತಂಬರಿಸೊಪ್ಪು ಹೆಚ್ಚಿ ಸ್ಪ್ರಿಂಕ್ಲ ಮಾಡಿಕೊಳ್ಳಬಹುದು.
ಈ ಭಾನುವಾರ ಈ ರೀತಿಯಲ್ಲಿ ಪೆಪ್ಪರ್ ಚಿಕನ್ ಮನೆಯಲ್ಲಿ ಮಾಡಿನೋಡಿ. ಇನ್ನೂ ಹಲವು ರೀತಿಯ ಪೆಪ್ಪರ್ ಚಿಕನ್ ಪೆಪ್ಪರ್ ಡ್ರೈ ಪೆಪ್ಪರ್ ಫ್ರೈ ಮುಂತಾದ ಪಾಕವಿಧಾನಗಳಿಗೆ ಮತ್ತೆ ಬರುತ್ತೇವೆ. ಹಾವ್ ಎ ಟೇಸ್ಟಿ ಬೈಟ್ !