ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ | ಎರಡು ಡ್ರೆಜ್ಜಿಂಗ್ ಬೋಟ್, ಟಿಪ್ಪರ್, ಮರಳು ವಶಕ್ಕೆ
ಉಡುಪಿ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳ ತಂಡ ದಾಳಿ ನಡೆಸಿ ಸ್ವತ್ತು ವಶಕ್ಕೆ ಪಡೆದುಕೊಂಡಿದೆ.
ಬ್ರಹ್ಮಾವರ ಮತ್ತು ಅಜೆಕಾರಿನಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ, ಎರಡು ಡ್ರೆಜ್ಜಿಂಗ್ ಬೋಟ್‌ಗಳು, ಟಿಪ್ಪರ್, ಮರಳನ್ನು ವಶಪಡಿಸಿಕೊಂಡಿದೆ.
ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಕುರಿತ ಬಂದ ಮಾಹಿತಿಯಂತೆ ಗಣಿ ಇಲಾಖೆ ಹಿರಿಯ ಭೂ ವಿಜ್ಞಾನಿ ಸಂದೀಪ್, ಬ್ರಹ್ಮಾವರ ತಾಲೂಕು ಭೂ ವಿಜ್ಞಾನಿ ಹಝೀರ್ ಹಾಗೂ ಬ್ರಹ್ಮಾವರ ಪೊಲೀಸರು ಚೇರ್ಕಾಡಿ ಗ್ರಾಮದ ಮಡಿಸಾಲು ಹೊಳೆ ಸಮೀಪ ದಾಳಿ ನಡೆಸಿದ್ದು, ಸ್ಥಳದಲ್ಲಿದ್ದ ಡ್ರೆಜ್ಜಿಂಗ್ ಬೋಟ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಮರ್ಣೆ ಗ್ರಾಮ ಅಜೆಕಾರು ಸಮೀಪ ಬಸ್ತಿಮಠ ಎಂಬಲ್ಲಿ ರುವ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ ಕುಂದಾಪುರ ಎಸಿ ರಾಜು ನೇತೃತ್ವದ ಅಧಿಕಾರಿಗಳ ತಂಡ ದಾಳಿ, ಮರಳು ಗಾರಿಕೆ ನಡೆಸುತ್ತಿದ್ದ ಡ್ರೆಜ್ಜಿಂಗ್ ಬೋಟ್, ಒಂದು ಟಿಪ್ಪರ್, 10 ಟನ್ ಮರಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಗಣಿ ಇಲಾಖೆ ಭೂ ವಿಜ್ಞಾನಿ ಗೌತಮ್ ಶಾಸ್ತ್ರಿ, ಅಜೆಕಾರ್ ಎಸ್‌ಐ ಸುದರ್ಶನ್ ಪಾಲ್ಗೊಂಡಿದ್ದರು.